ಕಂಪ್ಲಿ: ಪಟ್ಟಣದ ಡಾ.ಪುನೀತ್ ರಾಜಕುಮಾರ ರಸ್ತೆಯಲ್ಲಿ ಕಂಪ್ಲಿ ಉತ್ಸವದ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಭವ್ಯ ರಂಗೋಲಿ ಸ್ಪರ್ಧೆ ಜನರ ಗಮನ ಸೆಳೆಯಿತು.
ಕಾರ್ಯಕ್ರಮಕ್ಕೆ ಶಾಸಕ ಜೆ.ಎನ್.ಗಣೇಶ ಪತ್ನಿ ಶ್ರೀದೇವಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗಾಂಧಿ ವೃತ್ತದಿಂದ ಎಸ್.ಎನ್. ಪೇಟೆವರೆಗೆ ರಸ್ತೆಯ ಒಂದು ಬದಿಯಲ್ಲಿ ರಂಗಿನ ಲೋಕವನ್ನೇ ಸೃಷ್ಟಿಸಿದಂತೆ ಕಂಡುಬಂದಿತು.ಸುಮಾರು 137 ಮಹಿಳೆಯರು ಉತ್ಸಾಹಭರಿತರಾಗಿ ಭಾಗವಹಿಸಿ ತಮ್ಮ ಕಲಾತ್ಮಕ ಪ್ರತಿಭೆಯನ್ನು ಪ್ರದರ್ಶಿಸಿದರು. ಬೆಳಗ್ಗಿನಿಂದಲೇ ನೆಲದ ಮೇಲೆ ಬಣ್ಣದ ಪುಡಿಗಳನ್ನು ಹಾಸಿ ಮನಮೋಹಕ ವಿನ್ಯಾಸಗಳನ್ನು ರೂಪಿಸಿದ ದೃಶ್ಯ ನೋಡುಗರನ್ನು ಆಕರ್ಷಿಸಿತು. ವಿವಿಧ ಬಗೆಯ ಪುಷ್ಪಾಲಂಕಾರಗಳು, ಆಕರ್ಷಕ ಹೂವಿನ ಅಲಂಕಾರ ವಿನ್ಯಾಸಗಳು, ಶಿವ, ದುರ್ಗೆ, ಗಣೇಶ ಸೇರಿದಂತೆ ವಿವಿಧ ದೇವತೆಗಳ ಭಾವಚಿತ್ರಗಳು ರಂಗೋಲಿಯಲ್ಲಿ ಜೀವಂತವಾಗಿ ಮೂಡಿಬಂದವು.
ಇದರ ಜೊತೆಗೆ ಸ್ಥಳೀಯ ಇತಿಹಾಸದ ಪ್ರತೀಕವಾದ ಗಂಡುಗಲಿ ಕುಮಾರರಾಮ, ಅವರ ಕೋಟೆಯ ಚಿತ್ರಣ, ಶಾಸಕ ಜೆ.ಎನ್. ಗಣೇಶ್ ಅವರ ಚಿತ್ರ ರೂಪಗಳು ವಿಶೇಷ ಗಮನ ಸೆಳೆದವು. ಸಾಮಾಜಿಕ ಜಾಗೃತಿ ಮೂಡಿಸುವ ಉದ್ದೇಶದಿಂದ ‘ಬೇಟಿ ಬಚಾವೋ, ಬೇಟಿ ಪಡಾವೋ’, ‘ಮಾದಕ ವಸ್ತು ಮುಕ್ತ ಕರ್ನಾಟಕ’ ಮೊದಲಾದ ಸಂದೇಶಗಳನ್ನು ಒಳಗೊಂಡ ರಂಗೋಲಿಗಳು ಜನರಲ್ಲಿ ಚಿಂತನೆಗೆ ಪ್ರೇರಣೆ ನೀಡಿದವು.ಬಣ್ಣ ಬಣ್ಣದ ವಿನ್ಯಾಸಗಳಿಂದ ರಸ್ತೆ ಒಂದು ಬೃಹತ್ ಕಲಾ ಗ್ಯಾಲರಿಯಂತಾಗಿ ಮಾರ್ಪಟ್ಟಿತ್ತು. ಸ್ಥಳೀಯರು, ಮಕ್ಕಳು ಹಾಗೂ ಉತ್ಸವಕ್ಕೆ ಆಗಮಿಸಿದ್ದ ಅತಿಥಿಗಳು ರಂಗೋಲಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಮಹಿಳೆಯರ ಕಲಾ ನೈಪುಣ್ಯ, ಸಹನೆ ಹಾಗೂ ಸೃಜನಶೀಲತೆ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತಂದಿತು.
ಸ್ಪರ್ಧೆಯ ಅಂತ್ಯದಲ್ಲಿ ತೀರ್ಪುಗಾರರು ವಿವಿಧ ಅಂಶಗಳನ್ನು ಪರಿಗಣಿಸಿ ವಿಜೇತರನ್ನು ಆಯ್ಕೆ ಮಾಡಿದರು. ಶಿಲ್ಪಾ ಪ್ರಥಮ ಸ್ಥಾನ, ವಿಶಾಲಾಕ್ಷಿ ದ್ವಿತೀಯ ಸ್ಥಾನ ಹಾಗೂ ಭಾಗ್ಯಲಕ್ಷ್ಮಿ ತೃತೀಯ ಸ್ಥಾನ ಪಡೆದರು. ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಮೆಹೆಂದಿ ಸ್ಪರ್ಧೆ:
ಪಟ್ಟಣದ ಬಿ.ಎಸ್.ವಿ ಶಾಲೆಯಲ್ಲಿ ಕಂಪ್ಲಿ ಉತ್ಸವದ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮೆಹೆಂದಿ ಸ್ಪರ್ಧೆ ಜರುಗಿತು. ಯುವತಿಯರು ಮತ್ತು ಮಹಿಳೆಯರು ಉತ್ಸಾಹದಿಂದ ಭಾಗವಹಿಸಿ ಕೈಗಳಲ್ಲಿ ಅಚ್ಚುಕಟ್ಟಾದ ವಿನ್ಯಾಸಗಳನ್ನು ಮೂಡಿಸಿ ತಮ್ಮ ಕಲಾತ್ಮಕ ಪ್ರತಿಭೆಯನ್ನು ಅನಾವರಣಗೊಳಿಸಿದರು.ಸಾಂಪ್ರದಾಯಿಕ ಹಾಗೂ ಆಧುನಿಕ ಶೈಲಿಯ ಮೆಹೆಂದಿ ವಿನ್ಯಾಸಗಳು ಸ್ಪರ್ಧೆಗೆ ವಿಶೇಷ ಕಳೆ ತಂದವು. ಹೂವಿನ ಅಲಂಕಾರ, ಅರಬಿಕ್ ಶೈಲಿ, ಪರಂಪರೆಯ ನಕ್ಷತ್ರ ವಿನ್ಯಾಸಗಳು ಮತ್ತು ಸೂಕ್ಷ್ಮ ಕಲೆಗಳಿಂದ ಅಲಂಕರಿಸಿದ ಕೈಗಳು ನೋಡುಗರ ಮನಸೆಳೆದವು. ಸ್ಪರ್ಧಾರ್ಥಿಗಳ ಕಲ್ಪನೆ, ನಿಖರತೆ ಹಾಗೂ ಸಹನೆಯ ಪ್ರತಿಬಿಂಬವಾಗಿ ಪ್ರತಿಯೊಂದು ವಿನ್ಯಾಸವೂ ಮಿನುಗಿತು.
ತೀರ್ಪುಗಾರರ ಪರಿಶೀಲನೆಯ ನಂತರ ಸಲ್ಮಾನಾಜ್ ಪ್ರಥಮ ಸ್ಥಾನ, ಆಫ್ರಿನ್ ದ್ವಿತೀಯ ಸ್ಥಾನ ಹಾಗೂ ಕೌಸರ್ ತೃತೀಯ ಸ್ಥಾನ ಪಡೆದರು. ವಿಜೇತರಿಗೆ ಅಭಿನಂದನೆ ಸಲ್ಲಿಸಿ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಡಿಪಿಒ ಪ್ರದೀಪ್ ಹಾಗೂ ಮೇಲ್ವಿಚಾರಕಿ ಲತಿಫಾ ಬೇಗಂ ಉಪಸ್ಥಿತರಿದ್ದರು. ಒಟ್ಟಾರೆ ಕಂಪ್ಲಿ ಉತ್ಸವದ ಅಂಗವಾಗಿ ನಡೆದ ರಂಗೋಲಿ ಹಾಗೂ ಮೆಹೆಂದಿ ಸ್ಪರ್ಧೆಗಳು ಮಹಿಳೆಯರ ಕಲಾತ್ಮಕತೆ ಹಾಗೂ ಸಂಸ್ಕೃತಿಯ ಸೊಬಗನ್ನು ಪ್ರತಿಬಿಂಬಿಸಿ, ಉತ್ಸವದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.ಕಾರ್ಯಕ್ರಮದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್, ಮಾಜಿ ಸಚಿವ, ಹಾಲಿ ಶಾಸಕ ಬಿ.ನಾಗೇಂದ್ರ, ಶಾಸಕ ಭರತ್ ರೆಡ್ಡಿ ಭಾಗವಹಿಸಿದ್ದಾರೆ