ಧರ್ಮಸ್ಥಳ ಪ್ರಕರಣ ಮುಚ್ಚಿ ಹಾಕುವ ಯತ್ನ : ಪ್ರಹ್ಲಾದ ಜೋಶಿ

| N/A | Published : Sep 14 2025, 02:00 AM IST / Updated: Sep 14 2025, 11:00 AM IST

Prahlad Joshi
ಧರ್ಮಸ್ಥಳ ಪ್ರಕರಣ ಮುಚ್ಚಿ ಹಾಕುವ ಯತ್ನ : ಪ್ರಹ್ಲಾದ ಜೋಶಿ
Share this Article
  • FB
  • TW
  • Linkdin
  • Email

ಸಾರಾಂಶ

ಬುರುಡೆಯನ್ನು ಯಾರು ತಂದುಕೊಟ್ಟರು, ಪ್ರಕರಣದ ಹಿಂದೆ ಯಾರಿದ್ದಾರೆ ಎಂದು ಮುಸುಕುಧಾರಿ ಹೇಳಿಕೆ ನೀಡಿದ್ದಾನೆ. ಹೀಗಿದ್ದಾಗಲೂ ಅವರನ್ನು ಬಂಧಿಸದೆ, ಕೇವಲ ಕಾಟಾಚಾರಕ್ಕೆ ವಿಚಾರಿಸಿ ಕೈ ಬಿಡಲಾಗುತ್ತಿದೆ.

ಹುಬ್ಬಳ್ಳಿ: ಧರ್ಮಸ್ಥಳ ಪ್ರಕರಣದಲ್ಲಿ ಪ್ರಸ್ತಾಪಗೊಂಡ ವ್ಯಕ್ತಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದರೆ ಕಾಂಗ್ರೆಸ್ಸಿಗರ ಪಾತ್ರ ಹೊರಬೀಳಲಿದೆ ಎಂಬ ಆತಂಕ ಸರ್ಕಾರವನ್ನು ಕಾಡುತ್ತಿದೆ. ಹೀಗಾಗಿಯೇ ಅವರನ್ನು ಈವರೆಗೂ ಬಂಧಿಸಿಲ್ಲ. ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.

ಅಲ್ಲದೇ, ಮೃತ ವ್ಯಕ್ತಿಯ ಹೂತ ಶವ ಹೊರ ತೆಗೆಯಬೇಕೆಂದರೆ ಕೋರ್ಟ್ ಅನುಮತಿ ಬೇಕಾಗುತ್ತದೆ. ಆದರೆ, ಧರ್ಮಸ್ಥಳದಲ್ಲಿ ಅದ್ಯಾವುದನ್ನೂ ಪಾಲಿಸಿಲ್ಲ. ಧರ್ಮಸ್ಥಳ ಕ್ಷೇತ್ರದ ಹೆಸರು ಕೆಡಿಸಲು ಹೊರ ದೇಶಗಳಿಂದ ಭಯೋತ್ಪಾದಕರ ನಿಧಿ ಬಳಕೆಯಾಗುತ್ತಿರಬಹುದು ಎಂದು ಸಂಶಯ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬುರುಡೆಯನ್ನು ಯಾರು ತಂದುಕೊಟ್ಟರು, ಪ್ರಕರಣದ ಹಿಂದೆ ಯಾರಿದ್ದಾರೆ ಎಂದು ಮುಸುಕುಧಾರಿ ಹೇಳಿಕೆ ನೀಡಿದ್ದಾನೆ. ಹೀಗಿದ್ದಾಗಲೂ ಅವರನ್ನು ಬಂಧಿಸದೆ, ಕೇವಲ ಕಾಟಾಚಾರಕ್ಕೆ ವಿಚಾರಿಸಿ ಕೈ ಬಿಡಲಾಗುತ್ತಿದೆ. ಬುರುಡೆ ತಗೊಂಡವ ಸಾಕ್ಷಿ ದೂರುದಾರನನ್ನು ಮಾತ್ರ ಬಂಧಿಸಲಾಗಿದೆ. ಆದರೆ, ಕೊಟ್ಟವನನ್ನು ಬಿಡಲಾಗಿದೆ. ಇದನ್ನೆಲ್ಲ ಗಮನಿಸಿದರೆ ಕಾಂಗ್ರೆಸ್ ಮತ್ತು ಸರ್ಕಾರ ಷಡ್ಯಂತ್ರದ ಭಾಗವಾಗಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದರು.

ಪ್ರತಿಭಟನೆಯಲ್ಲಿ ಪ್ರಭಾಕರ ಭಟ್ಟ ಕಲ್ಲಡ್ಕ ಪಾಲ್ಗೊಳ್ಳದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಜೋಶಿ, ವೈಯಕ್ತಿಕವಾಗಿ ಮಾತನಾಡುವುದಿಲ್ಲ ಎಂದರು.

ಕೋಮು ಗಲಭೆಗೆ ಸಂಬಂಧಿಸಿ ಹಾಗೂ ಸಿಎಂಗೆ ಅವಹೇಳನ ಮಾಡಿದ್ದಾರೆಂದು ಕೆಲವರನ್ನು ಬಂಧಿಸುತ್ತಿರುವ ಪೊಲೀಸರು, ಧರ್ಮಸ್ಥಳ ಹಾಗೂ ವೀರೇಂದ್ರ ಹೆಗ್ಗಡೆ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುವವರನ್ನು ಅರೆಸ್ಟ್ ಮಾಡುತ್ತಿಲ್ಲ ಏಕೆ ಎಂದು ಆಕ್ಷೇಪಿಸಿದರು.

ದೇಶದಲ್ಲಿ ಇರುವ ಏಕೈಕ ನಿರುದ್ಯೋಗಿ ರಾಹುಲ್ ಗಾಂಧಿ ಅವರಿಗೆ ತಾವು ಪ್ರಧಾನಿ ಆಗಬೇಕೆನ್ನುವ ಪ್ರಬಲ ಹಂಬಲವಿದೆ. ಅದಕ್ಕಾಗಿ ದೇಶದಲ್ಲಿ ನಿರುದ್ಯೋಗವಿದೆ ಎನ್ನುತ್ತ ಮನಸ್ಸಿಗೆ ಬಂದ ಹಾಗೆ ಹೇಳಿಕೆ ನೀಡುತ್ತ ಓಡಾಡುತ್ತಿದ್ದಾರೆ. ತುಷ್ಟೀಕರಣ ರಾಜಕಾರಣ ಮಾಡುವುದೇ ಅವರ ಜಾಯಮಾನವಾಗಿದೆ ಎಂದು ಹರಿಹಾಯ್ದರು.

ಸುಪ್ರೀಂಕೋರ್ಟ್ ಸೂಚನೆ ಪ್ರಕಾರ ಗಣೇಶೋತ್ಸವ ಸಂದರ್ಭ ರಾತ್ರಿ ಡಿಜೆ ಹಚ್ಚಬಾರದು ಎಂದು ಸರ್ಕಾರ ಹೇಳಿತು. ಆಕ್ಷೇಪದ ನಡುವೆಯೂ ಸೂಚನೆ ಪಾಲಿಸಲಾಯಿತು. ಆದರೆ, ಬೆಳಗ್ಗೆ ಐದು ಗಂಟೆಗೇ ಆಜಾನ್ ಮೊಳಗುತ್ತದೆ. ಅದಕ್ಯಾಕೆ ಸರ್ಕಾರ ಕಡಿವಾಣ ಹಾಕುತ್ತಿಲ್ಲ ಎಂದು ಸಚಿವ ಜೋಶಿ ಪ್ರಶ್ನಿಸಿದರು.

ಮದ್ದೂರಲ್ಲಿ ಅನಧಿಕೃತ ಮಸೀದಿ

ಮದ್ದೂರಿನಲ್ಲಿ ಮಸೀದಿಯನ್ನು ಅನಧಿಕೃತವಾಗಿ ನಿರ್ಮಿಸಲಾಗಿದೆ. ಗಣೇಶ ವಿಸರ್ಜನೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣದಲ್ಲಿ ಹೊರಗಿನವರ ಕೈವಾಡ ಇದೆ ಎಂದು ಉಸ್ತುವಾರಿ ಸಚಿವರೇ ತಿಳಿಸಿದ್ದಾರೆ. ಕಾಂಗ್ರೆಸ್ ಸರ್ಕಾರದಿಂದ ತುಷ್ಟೀಕರಣ ನೀತಿ ವ್ಯಾಪಕವಾಗಿದೆ ಎಂದು ಟೀಕಿಸಿದರು.

ಮಣಿಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಮಣಿಪುರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಯಾವ ಸಮಯ, ಸಂದರ್ಭದಲ್ಲಿ ಏನು ಮಾಡಬೇಕೆಂಬುದು ಸರ್ಕಾರಕ್ಕೆ ಗೊತ್ತಿದೆ. ಗಲಭೆ ಕಾಲದಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು. ಸಚಿವರು ಕೂಡ ಭೇಟಿ ನೀಡಿದ್ದರು ಎಂದರು.

ಇನ್ಸಪೆಕ್ಟರ್ ಸಸ್ಪೆಂಡ್‌ಗೆ ಒತ್ತಾಯ

ಧಾರವಾಡದ ನರೇಂದ್ರದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ಶಾಂತವಾಗಿ ನಡೆಯುತ್ತಿದ್ದರೂ ಅನಗತ್ಯವಾಗಿ ಲಾಠಿ ಪ್ರಹಾರ ಮಾಡಿದ ಅಲ್ಲಿನ ಸಿಪಿಐಯನ್ನು ಸಸ್ಪೆಂಡ್ ಮಾಡಬೇಕೆಂದು ಸಚಿವರು ಆಗ್ರಹಿಸಿದರು. ಗ್ರಾಮದಲ್ಲಿ ಎರಡೂ ಕಡೆಯಿಂದ ಗಣೇಶ ಮೂರ್ತಿ ಮೆರವಣಿಗೆ ಅತ್ಯಂತ ಶಾಂತಿಯುತವಾಗಿ ನಡೆಯುತ್ತಿತ್ತು. ಆದರೂ ಪೊಲೀಸರು ಲಾಠಿ ಚಾರ್ಜ್ ಮಾಡಿ ಮೆರವಣಿಗೆಯಲ್ಲಿದ್ದವರ ಕೈ-ಕಾಲುಗಳಿಗೆ ಪೆಟ್ಟು ನೀಡಿದ್ದಾರೆ ಎಂದು ದೂರಿದರು.

Read more Articles on