ಏಕತೆ ಕಾಪಾಡುವಲ್ಲಿ ಸಂವಿಧಾನ ಕೊಡುಗೆ ಅಪಾರ: ಸಂಸದೆ

| Published : Sep 19 2025, 01:00 AM IST

ಏಕತೆ ಕಾಪಾಡುವಲ್ಲಿ ಸಂವಿಧಾನ ಕೊಡುಗೆ ಅಪಾರ: ಸಂಸದೆ
Share this Article
  • FB
  • TW
  • Linkdin
  • Email

ಸಾರಾಂಶ

ಡಾ. ಬಿ.ಆರ್. ಅಂಬೇಡ್ಕರ್ ಬರೆದ ಸಂವಿಧಾನದಲ್ಲಿ ಎಲ್ಲರಿಗೂ ಸ್ವಾತಂತ್ರ‍್ಯ, ಸಮಾನತೆ ಕಲ್ಪಿಸಲಾಗಿದೆ. ಭ್ರಾತೃತ್ವತೆಯೊಂದಿಗೆ ದೇಶದ ಏಕತೆಯನ್ನು ಕಾಪಾಡಿಕೊಂಡು ಹೋಗಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದ್ದಾರೆ.

- ಜಿಲ್ಲಾಡಳಿತ ನೇತೃತ್ವದಲ್ಲಿ ಪ್ರಜಾಪ್ರಭುತ್ವ ದಿನಾಚರಣೆ ।

- ನನ್ನ ಮತ, ನನ್ನ ಹಕ್ಕು ಘೋಷವಾಕ್ಯದಡಿ ಆಯೋಜನೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ಡಾ. ಬಿ.ಆರ್. ಅಂಬೇಡ್ಕರ್ ಬರೆದ ಸಂವಿಧಾನದಲ್ಲಿ ಎಲ್ಲರಿಗೂ ಸ್ವಾತಂತ್ರ‍್ಯ, ಸಮಾನತೆ ಕಲ್ಪಿಸಲಾಗಿದೆ. ಭ್ರಾತೃತ್ವತೆಯೊಂದಿಗೆ ದೇಶದ ಏಕತೆಯನ್ನು ಕಾಪಾಡಿಕೊಂಡು ಹೋಗಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆಯಿಂದ ಆಯೋಜಿಸಲಾಗಿದ್ದ ಅಂತರ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ನನ್ನ ಮತ, ನನ್ನ ಹಕ್ಕು ಎಂಬ ಘೋಷವಾಕ್ಯದೊಂದಿಗೆ ಏರ್ಪಡಿಸಲಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

10ನೇ ತರಗತಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳ ಪಡೆದ ವಿದ್ಯಾರ್ಥಿಗಳನ್ನು ದೆಹಲಿಯ ಸಂಸತ್ ಭವನ ವೀಕ್ಷಣೆಗೆ ಅವಕಾಶ ಕಲ್ಪಿಸಿ, ಇದರ ಬಗ್ಗೆ ತಿಳಿದುಕೊಳ್ಳುವಂತೆ ಮಾಡಬೇಕು. ಸುಶಿಕ್ಷಿತ ಸಮಾಜ, ಪ್ರಜ್ಞಾವಂತ ಸಮುದಾಯದಿಂದ ಪ್ರಜಾಪ್ರಭುತ್ವ ಇನ್ನಷ್ಟು ಗಟ್ಟಿಯಾಗಲಿದೆ. ಈ ನಿಟ್ಟಿನಲ್ಲಿ ಸಂವಿಧಾನ ಆಶಯಗಳನ್ನು ಅರಿತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ಕೆಲಸ ನಾವೆಲ್ಲರೂ ಮಾಡಬೇಕಾಗಿದೆ ಎಂದರು.

ಜಿಪಂ ಸಿಇಒ ಗಿತ್ತೆ ಮಾಧವ್ ವಿಠ್ಠಲ್ ರಾವ್ ಮಾತನಾಡಿ, ಮಾನವ ಹಕ್ಕುಗಳು, ಸಮಾನತೆ ಮತ್ತು ಸಂಘರ್ಷ, ಪರಿಹಾರಗಳಂತಹ ಜಾಗತಿಕ ಸಮಸ್ಯೆಗಳಿಗೂ ಸಮರ್ಥವಾದ ಪರಿಹಾರ ಪಡೆಯುವುದು ಸಹ ಸಂವಿಧಾನದಲ್ಲಿದೆ. ಈ ದಿನ ಅಭಿವ್ಯಕ್ತಿ ಸ್ವಾತಂತ್ರ‍್ಯವನ್ನು ಪ್ರತಿಬಿಂಬಿಸಲು ಇರುವ ಸದಾವಕಾಶದ ದಿನವೆಂದೇ ಭಾವಿಸುತ್ತೇವೆ ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಸಂವಿಧಾನದ ಪೀಠಿಕೆಯನ್ನು ಓದಿ ಪ್ರತಿಜ್ಞಾವಿಧಿ ಬೋಧಿಸಿದರು. ಹರಿಹರ ಶಾಸಕ ಬಿ.ಪಿ. ಹರೀಶ್, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಕರ್ನಾಟಕ ರಾಜ್ಯ ತಾಂಡ ಅಭಿವೃದ್ಧಿ ನಿಗಮ ನಿಯಮಿತ ಅಧ್ಯಕ್ಷ ಜಯದೇವ ನಾಯ್ಕ, ಹೆಚ್ಚುವರಿ ಪೊಲೀಸ್ ಅಧಿಕಾರಿ ಪರಮೇಶ್ವರ ಹೆಗಡೆ, ಆಯುಕ್ತೆ ರೇಣುಕಾ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ, ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು, ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

- - -

(ಬಾಕ್ಸ್‌)

* ಸಂವಿಧಾನ ಅರಿತು ದೇಶ ಕಟ್ಟೋಣ: ಬಸವಂತಪ್ಪ

ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ಸ್ವಾತಂತ್ರ್ಯ, ಸಮಾನತೆ ಮತ್ತು ಉದಾತ್ತ ಚಿಂತನೆಗಳನ್ನು ಸಾರುವ ನಮ್ಮ ಸಂವಿಧಾನಕ್ಕೆ ಅದರದ್ದೇ ಆದಂತಹ ಇತಿಹಾಸವಿದೆ. ಸಂವಿಧಾನವನ್ನು ರಚಿಸಿದ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆಯಲ್ಲಿ ರಚಿತವಾದ ಭಾರತ ಸಂವಿಧಾನ ಆಶಯಗಳಿಗೆ ಒಳಪಟ್ಟು ದೇಶವನ್ನು ಮುನ್ನಡೆಸೋಣ ಎಂದರು. ಇಡೀ ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ಸಂವಿಧಾನವೆಂದರೆ, ಅದು ಭಾರತದ ಸಂವಿಧಾನ. ಮೊದಲು 21 ವರ್ಷದ ನಂತರದಲ್ಲಿ ಮತದಾನ ಹಕ್ಕನ್ನು ನೀಡಲಾಗಿತ್ತು. ರಾಜೀವ್ ಗಾಂಧಿ ಕಾಲದಲ್ಲಿ 18 ವರ್ಷವಾದ ಬಳಿಕದಿಂದಲೇ ಮತದಾನ ಮಾಡುವ ಪದ್ಧತಿಯನ್ನು ಜಾರಿಗೆ ತರಲಾಯಿತು ಎಂದರು.

- - -

-14ಕೆಡಿವಿಜಿ32:

ದಾವಣಗೆರೆಯಲ್ಲಿ ಜಿಲ್ಲಾಡಳಿತದಿಂದ ನಡೆದ ಅಂತರ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಕಾರ್ಯಕ್ರಮವನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸಿದರು.