ವಾಲ್ಮೀಕಿ ಆದರ್ಶಗಳನ್ನು ಬದುಕಲ್ಲಿ ಅಳವಡಿಸಿಕೊಳ್ಳಿ: ಸಚಿವ ಶರಣಬಸಪ್ಪ ದರ್ಶನಾಪುರ

KannadaprabhaNewsNetwork |  
Published : Oct 08, 2025, 01:00 AM IST
ಮಹರ್ಷಿ ಶ್ರೀ ವಾಲ್ಮೀಕಿ ಜಯಂತ್ಯೋತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ, ಮಂಗಳವಾರ ಯಾದಗಿರಿಯಲ್ಲಿ ಹಮ್ಮಿಕೊಂಡಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಉದ್ಘಾಟಿಸಿದರು. | Kannada Prabha

ಸಾರಾಂಶ

ಆದಿಕವಿ ಮಹರ್ಷಿ ಶ್ರೀವಾಲ್ಮೀಕಿ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳುವ ಮೂಲಕ, ಬೇರೆಯವರ ಬಾಳಲ್ಲಿ ಬೆಳಕು ಮೂಡಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಆದಿಕವಿ ಮಹರ್ಷಿ ಶ್ರೀವಾಲ್ಮೀಕಿ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳುವ ಮೂಲಕ, ಬೇರೆಯವರ ಬಾಳಲ್ಲಿ ಬೆಳಕು ಮೂಡಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.

ಮಹರ್ಷಿ ಶ್ರೀ ವಾಲ್ಮೀಕಿ ಜಯಂತ್ಯುತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹರ್ಷಿ ಶ್ರೀ ವಾಲ್ಮೀಕಿ ಅವರು ರಾಮಾಯಣ ಬರೆಯುವ ಮೂಲಕ ಸರ್ವಕಾಲದ ಪೀಳಿಗೆಗೆ ಸನ್ಮಾರ್ಗದ ದಾರಿ ತೋರಿಸಿದ್ದಾರೆ. ಅವರು ಬರೆದ ಆ ಗ್ರಂಥ ಈಗಿನ ಸಮಾಜಕ್ಕೆ ದಾರಿದೀಪವಾಗಿದೆ ಎಂದು ಸಚಿವರು ಹೇಳಿದರು.

ಆದರ್ಶ, ಮೇರು ವ್ಯಕ್ತಿತ್ವದ ವ್ಯಕ್ತಿಗಳ ಜಯಂತಿ ಆಚರಿಸುವ ಉದ್ದೇಶವೆಂದರೇ ಅವರುಗಳು ಜೀವನದಲ್ಲಿ ಕಷ್ಟಪಟ್ಟು ಮಾಡಿದ ಸಾಧನೆಗಳು ಇಂದಿನ ವಿದ್ಯಾರ್ಥಿ, ಯುವಕರಿಗೆ ಗೊತ್ತಾಗಬೇಕೆಂಬ ಉತ್ತಮ ಕಲ್ಪನೆ ಇದೆ. ಅದನ್ನು ಎಲ್ಲರೂ ಅರ್ಥ ಮಾಡಿಕೊಂಡು ಪಾಲಿಸಬೇಕೆಂದು ಹೇಳಿದರು.

ಮಾಜಿ ಸಚಿವ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ ಮಾತನಾಡಿದರು. ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು ಜೀವನದಲ್ಲಿ ಪರಿವರ್ತನೆ ಹೊಂದಿ ರಾಮಾಯಣ ಎಂಬ ಮಹಾಗ್ರಂಥ ರಚಿಸುವ‌ ಮೂಲಕ ಜಗತ್ತಿಗೆ ದಾರ್ಶನಿಕರಾಗಿದ್ದಾರೆ. ಅವರ ಬದುಕೇ ಒಂದು ರೋಚಕವಾಗಿತ್ತು. ಅವರ ಆದರ್ಶಗಳು ಸಾರ್ವಕಾಲಕ್ಕೂ ಬೇಕು ಎಂದರು.

ವಾಲ್ಮೀಕಿ ಸಮಾಜಕ್ಕೆ ತನ್ನದೇ ಆದ ಅಸ್ತಿತ್ವ, ಚರಿತ್ರೆ ಮತ್ತು ಇತಿಹಾಸವಿದೆ. ಸುರಪುರ ಸಂಸ್ಥಾನದ ದೊರೆಗಳು ಬ್ರಿಟಿಷರ ಹಾಗೂ ಮೊಗಲರ ವಿರುದ್ಧ ಹೋರಾಡಿ ಸೋಲಿಲ್ಲದ ಸರದಾರರೆಂದು ಅನಿಸಿಕೊಂಡಿದ್ದರು. ಶೂರರು, ಧೀರರ ವಂಶಸ್ಥರು ಎಂದು ಬಣ್ಣಿಸಿದರು. ಸಾಹಿತಿ ತಿಪ್ಪಣ್ಣ ನಾಯಕ್ ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ಪಿ ಪೃಥ್ವಿಕ್ ಶಂಕರ್, ಯೂಡಾ ಅಧ್ಯಕ್ಷ ಬಾಬುರಾವ ಕಾಡ್ಲೂರ್, ಸಮಾಜದ ಜಿಲ್ಲಾಧ್ಯಕ್ಷ ಗೌಡಪ್ಪಗೌಡ ಆಲ್ದಾಳ್, ಅಪರ ಜಿಲ್ಲಾಧಿಕಾರಿ ರಮೇಶ ಕೊಲಾರ, ಸಹಾಯಕ ಆಯುಕ್ತ ಶ್ರೀಧರ, ಕರವೇ ಜಿಲ್ಲಾಧ್ಯಕ್ಷ ಟಿ.ಎನ್.ಭೀಮುನಾಯಕ್ ಸೇರಿದಂತೆ ಇತರರಿದ್ದರು. ಸಚಿವರು, ಶಾಸಕರು, ಗಣ್ಯರು ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸಿದ್ದಣ್ಣ ಅಣಬಿ ಸ್ವಾಗತಿಸಿದರು. ಚಂದ್ರಶೇಖರ ಗೋಗಿ, ಸಂಗಡಿಗರಿಂದ ಸ್ವಾಗತ ಗೀತೆ, ನಾಡ ಗೀತೆ ಜರುಗಿತು, ವಾಣಿಶ್ರೀ ನಿರೂಪಿಸಿದರು.

ವಾಲ್ಮೀಕಿ ಭಾವಚಿತ್ರದ ಮೆರವಣಿಗೆ

ಯಾದಗಿರಿ ತಹಸೀಲ್ ಕಚೇರಿಯಿಂದ ಆರಂಭವಾದ ಶ್ರೀ ವಾಲ್ಮೀಕಿ ನಾಯಕ ಅವರ ಭಾವಚಿತ್ರದ ಮೆರವಣಿಗೆಗೆ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಚಾಲನೆ ನೀಡಿದರು. ಎಸ್ಪಿ ಪೃಥ್ವಿಕ್ ಶಂಕರ್, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸಿದ್ದಣ್ಣ ಇತರರು ಉಪಸ್ಥಿತರಿದ್ದರು. ಲಾಲ್‌ ಬಹದ್ದೂರ್‌ ಶಾಸ್ತ್ರಿ ಚೌಕ್, ನೇತಾಜಿ ಸುಭಾಶ್ಚಂದ್ರ ಭೋಸ್‌ ವೃತ್ತ, ಡಿಗ್ರಿ ಕಾಲೇಜು ಮಾರ್ಗವಾಗಿ ವಾಲ್ಮೀಕಿ ಭವನದವರೆಗೂ ಭಾರಿ ಭವ್ಯವಾಗಿ ನಡೆಯಿತು. ದಾರಿಯುದ್ದಕ್ಕೂ ಶಾಲಾ ಮಕ್ಕಳು, ಕುಂಭಹೊತ್ತು ಸಾಗಿದ ದೃಶ್ಯ ಮನಮೋಹಕವಾಗಿತ್ತು. ಯುವಕರ ಪಡೆ ಭಾರಿ ಉತ್ಸಾಹದಲ್ಲಿ ಭಾಗವಹಿಸುವ ಮೂಲಕ ಮೆರವಣಿಗೆಗೆ ರಂಗು ತಂದರು. ಜೈ ವಾಲ್ಮೀಕಿ ಎಂಬ ಘೋಷಣೆಗಳು ಮುಗಿಲು‌ ಮುಟ್ಟಿದವು.

PREV

Recommended Stories

ರಾಜ್ಯದಲ್ಲಿ 18500 ಶಿಕ್ಷಕರ ನೇಮಕ : ಮಧು ಬಂಗಾರಪ್ಪ
ವಾಯವ್ಯ ಸಾರಿಗೆಗೆ ಶೀಘ್ರ 700 ಹೊಸ ಬಸ್‌ : ಕಾಗೆ