ಕುಷ್ಟಗಿ: ಸರ್ಕಾರ ಜಾರಿಗೆ ತರಲು ಮುಂದಾಗಿರುವ ಕಾವೇರಿ-3 ತಂತ್ರಾಂಶದಡಿಯಲ್ಲಿ ಫೇಸ್‌ಲೆಸ್ ಮತ್ತು ಪೇಪರ್‌ಲೆಸ್ ನಿಯಮದಿಂದ ಸಾರ್ವಜನಿಕರಿಗೆ ತೊಂದರೆಯಾಗುವ ಜತೆಗೆ, ಆಸ್ತಿಗೆ ಸಂಬಂಧಿಸಿದಂತೆ ಸುಳ್ಳು ಮತ್ತು ವಂಚನೆಯ ನೋಂದಣಿಗಳು ನಡೆಯುವ ಸಾಧ್ಯತೆ ಇದೆ, ಹಾಗಾಗಿ ಅದನ್ನು ಜಾರಿಗೆ ತರಬಾರದು ಎಂದು ದಸ್ತಾವೇಜು ಪತ್ರಬರಹಗಾರ ಪಂಪನಗೌಡ ಮಾಲಿಪಾಟೀಲ ಹೇಳಿದರು.
ರಾಜ್ಯ ಸರ್ಕಾರ ತಂತ್ರಜ್ಞಾನ ಅಭಿವೃದ್ಧಿಪಡಿಸುವ ನೆಪದಲ್ಲಿ ಹಲವು ವರ್ಷಗಳಿಂದ ಪತ್ರ ಬರಹಗಾರರ ವೃತ್ತಿ ನಡೆಸುತ್ತಿರುವವರನ್ನು ಹತ್ತಿಕ್ಕುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಇದನ್ನು ವಿರೋಧಿಸಿ ಬೆಳಗಾವಿಯಲ್ಲಿ ಹೋರಾಟ ಮಾಡಲಾಗುತ್ತದೆ ಎಂದರು.
ಈ ಹಿಂದೆ ಜಾರಿಗೆ ತರಲಾಗಿದ್ದ ಕಾವೇರಿ- 2 ತಂತ್ರಾಂಶದಲ್ಲಿ ಸಿಟಿಜನ್ ಲಾಗಿನ್ ಮೂಲಕ ಸಾರ್ವಜನಿಕರು ಅವರ ಆಸ್ತಿಗೆ ಸಂಬಂಧಿಸಿದ ಪತ್ರಗಳನ್ನು ಅವರೇ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು, ಸಾರ್ವಜನಿಕರಿಗೆ ಕಂಪ್ಯೂಟರ್ ಜ್ಞಾನದ ಕೊರತೆಯ ಅವಕಾಶವನ್ನು ಖಾಸಗಿಯ ಕೆಲವು ಪಟ್ಟಭದ್ರರು ದುರುಪಯೋಗ ಪಡಿಸಿಕೊಂಡು ಸಾರ್ವಜನಿಕರಿಗೆ ಮೋಸ ಮಾಡುತ್ತಾ ಅವೈಜ್ಞಾನಿಕ ಪತ್ರಗಳನ್ನು ಅಪ್‌ಲೋಡ್ ಮಾಡುತ್ತಿದ್ದಾರೆ. ಇದರಿಂದ ವಂಚನೆಗೆ ಒಳಗಾಗುತ್ತಿದ್ದಾರೆ ಎಂದರು.ಸರ್ಕಾರದ ಈ ಕ್ರಮಗಳಿಂದ ಪತ್ರ ಬರಹಗಾರರ ವೃತ್ತಿ ನಾಶವಾಗಲಿದ್ದು, ಪತ್ರ ಬರಹಗಾರರ ಕುಟುಂಬಗಳು ಬೀದಿಗೆ ಬೀಳಲಿವೆ. ಆದ್ದರಿಂದ ಸರ್ಕಾರ ಪತ್ರ ಬರಹಗಾರರಿಗೆ ಪ್ರತ್ಯೇಕ ಲಾಗಿನ್ (ಡಿಡ್ ರೈಟರ್ ಲಾಗಿನ್) ನೀಡಬೇಕು. ನೋಂದಣಿಯಾಗುವ ಎಲ್ಲ ದಸ್ತಾವೇಜುಗಳಿಗೆ ಕಡ್ಡಾಯವಾಗಿ ಪತ್ರ ಬರಹಗಾರರ ಹಾಗೂ ವಕೀಲರ ಸಹಿ ಕಡ್ಡಾಯಗೊಳಿಸಬೇಕು ಹಾಗೂ ಗುರುತೀನ ಚೀಟಿ ವಿತರಿಸಬೇಕು ಎಂದು ಒತ್ತಾಯಿಸಿದರು.
ಶಶಿಧರ ರಂಜಣಗಿ ಮಾತನಾಡಿ, ಸರ್ಕಾರ ಆನ್‌ಲೈನ್ ವ್ಯವಸ್ಥೆ ಅಭಿವೃದ್ಧಿಪಡಿಸುವ ಮೂಲಕ ಪತ್ರ ಬರಹಗಾರರ ವೃತ್ತಿಗೆ ಧಕ್ಕೆ ತರುತ್ತಿದೆ. ಈ ನಿಯಮದಿಂದ ಪತ್ರ ಬರಹಗಾರರ ಕುಟುಂಬಗಳು ಬೀದಿಗೆ ಬರಬೇಕಾಗುತ್ತದೆ. ಇದನ್ನು ವಿರೋಧಿಸಿ ಡಿ. 16ರಂದು ರಾಜ್ಯಮಟ್ಟದ ಬರಹಗಾರರ ಒಕ್ಕೂಟದೊಂದಿಗೆ ಬೆಳಗಾವಿಯಲ್ಲಿ ಹೋರಾಟ ಮಾಡಲಾಗುತ್ತದೆ ಎಂದರು.ಈ ಪ್ರತಿಭಟನೆಯಲ್ಲಿ ದಸ್ತಾವೇಜು ಪತ್ರ ಬರಹಗಾರರ ಕ್ಷೇಮಾಭಿವೃದ್ಧಿ ಸಂಘದ ಪ್ರಮುಖರಾದ ಬಸವರಾಜ ಕುದುರಿಮೋತಿ, ಗೋಪಾಲ ಕುಡತೀನಿ, ಅಡವಿರಾವ್ ಕುಲಕರ್ಣಿ, ಉಸ್ಮಾನಸಾಬ್ ಕಲಬುರಗಿ, ಉಮೇಶ ಕುಂಬಾರ, ಮಲ್ಲು ಕುದುರಿಮೋತಿ, ವೀರೇಶ ಸಣಾಪುರು, ಶಶಿಧರ ರಂಜಣಗಿ, ವೀರೇಶ ಕುದುರಿಮೋತಿ, ರಾಜೇಶ ಕುಂಬಾರ, ರಮೇಶ ಅಗಸಿಮುಂದಿನ, ಕಲೀಮ್ ಕಲಾಲಬಂಡಿ, ನಾಗರಾಜ ಕಂದಗಲ್, ಸೋಮಶೇಖರ ನವಲಳ್ಳಿ, ಡಿ.ಎಚ್. ಪಾಟೀಲ, ಚಂದ್ರು ನಾಯಕ್ವಾಡಿ, ಸಲೀಂ ಕಲಬುರ್ಗಿ, ನಾಗಭೂಷಣ ಕಂದಗಲ್ಲ, ಯುವರಾಜ ಕುಂಬಾರ, ಸಂಗನಗೌಡ ಪಾಟೀಲ, ಪ್ರಶಾಂತ ಕುಲಕರ್ಣಿ, ಉಮೇಶ್ ಚಳಿಗೇರ ಇದ್ದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಅಶೋಕ ಶಿಗ್ಗಾಂವಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.