ಕಸ ಸಂಗ್ರಹಣಾ ವಾಹನಕ್ಕೆ ಜಿಪಿಆರ್‌ಎಸ್ ಅಳವಡಿಕೆ

KannadaprabhaNewsNetwork |  
Published : Sep 05, 2024, 12:31 AM IST
4ಕೆಡಿವಿಜಿ5-ದಾವಣಗೆರೆಯಲ್ಲಿ ಶ್ರೀ ದುರ್ಗಾಶಕ್ತಿ ಮಹಿಳಾ ಸ್ವಸಹಾಯ ಸಂಘದಿಂದ ಗಾಜಿನ ತ್ಯಾಜ್ಯ ಮತ್ತು ಒಣ ತ್ಯಾಜ್ಯ ಘಟಕದ ಉದ್ಘಾಟನೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಪಾಲಿಕೆ ಆಯುಕ್ತೆ ರೇಣುಕಾ, ಸ್ಮಾರ್ಟ್ ಸಿಟಿ ವೀರೇಶಕುಮಾರ ಇತರರು ಇದ್ದರು. | Kannada Prabha

ಸಾರಾಂಶ

ಪಾಲಿಕೆ ವ್ಯಾಪ್ತಿಯಲ್ಲಿರುವ ಒಟ್ಟು ಕುಟುಂಬ, ಜನಸಂಖ್ಯೆ, ಉತ್ಪತ್ತಿಯಾಗುವ ತ್ಯಾಜ್ಯದ ಪ್ರಮಾಣ, ತ್ಯಾಜ್ಯ ಸಂಗ್ರಹದ ಪ್ರಮಾಣಕ್ಕೆ ತಕ್ಕಂತೆ ವಾಹನ, ಕಸ ಸಂಗ್ರಹಣೆ ಪೌರ ಕಾರ್ಮಿಕರನ್ನು ನೇಮಿಸಲಾಗಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ನಗರ ಪಾಲಿಕೆ ತ್ಯಾಜ್ಯ ನಿರ್ವಹಣೆ ಕುರಿತಂತೆ ಕಸ ಸಂಗ್ರಹಣಾ ವಾಹನಗಳಿಗೆ ಜಿಪಿಆರ್‌ಎಸ್‌ ಯಂತ್ರ ಅಳವಡಿಸಿದ್ದು, ಯಾವುದೇ ಅಧಿಕಾರಿ, ಸಿಬ್ಬಂದಿ, ಪೌರ ಕಾರ್ಮಿಕರು ತಮ್ಮ ಕರ್ತವ್ಯದಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ನ ಮಾಹಿತಿ ತಂತ್ರಜ್ಞಾನ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ಜಿ.ಆರ್‌.ಮಮತಾ ತಿಳಿಸಿದ್ದಾರೆ.

ನಗರದ ಶ್ರೀ ದುರ್ಗಾಶಕ್ತಿ ಮಹಿಳಾ ಸ್ವಸಹಾಯ ಸಂಘದಿಂದ ಗಾಜಿನ ತ್ಯಾಜ್ಯ ಮತ್ತು ಒಣ ತ್ಯಾಜ್ಯ ಘಟಕದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ವಾಹನಗಳಿಗೆ ಜಿಪಿಆರ್‌ಎಸ್‌ ಯಂತ್ರಗಳನ್ನು ಅಳವಡಿಸಿದ್ದರಿಂದ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ, ಪೌರ ಕಾರ್ಮಿಕರು ಯಾರೂ ಸಹ ಕರ್ತವ್ಯದಿಂದ ನುಣುಚಿಕೊಳ್ಳಲು ಅವಕಾಶ ಇಲ್ಲ ಎಂದರು.

ಪಾಲಿಕೆ ವ್ಯಾಪ್ತಿಯಲ್ಲಿರುವ ಒಟ್ಟು ಕುಟುಂಬ, ಜನಸಂಖ್ಯೆ, ಉತ್ಪತ್ತಿಯಾಗುವ ತ್ಯಾಜ್ಯದ ಪ್ರಮಾಣ, ತ್ಯಾಜ್ಯ ಸಂಗ್ರಹದ ಪ್ರಮಾಣಕ್ಕೆ ತಕ್ಕಂತೆ ವಾಹನ, ಕಸ ಸಂಗ್ರಹಣೆ ಪೌರ ಕಾರ್ಮಿಕರನ್ನು ನೇಮಿಸಲಾಗಿದೆ. ಅಲ್ಲದೇ, ವಾಹನಗಳಿಗೆ ಮಾರ್ಗದ ನಕ್ಷೆ ರಚಿಸಲಾಗುತ್ತಿದೆ. ಯಾವುದೇ ಕಾರಣದಿಂದಾಗಿ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಹಾಕುವಂತಿಲ್ಲ. ಎಲ್ಲೆಂದರಲ್ಲಿ ಕಸ ಹಾಕುವವರ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಲಾಗುತ್ತಿದೆ ಎಂದು ಎಚ್ಚರಿಸಿದರು.

ಕಾರ್ಯಕ್ರಮ ಉದ್ಘಾಟನೆ ಮಾಡಿದ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ, ಸರ್ಕಾರದಿಂದ ಯಾವುದೇ ಅನುದಾನ ಪಡೆಯದೇ ಮಹಿಳಾ ಸ್ವಸಹಾಯ ಸಂಘವು ತ್ಯಾಜ್ಯ ನಿರ್ವಹಣೆ ಮಾಡಲು ಮುಂದಾಗಿರುವುದು ಶ್ಲಾಘನೀಯ ಕಾರ್ಯವಾಗಿದೆ. ಇಂತಹ ಕಾರ್ಯಗಳಿಗೆ ಸಾರ್ವಜನಿಕ ಸಹಭಾಗಿತ್ವದ ಮಹಿಳಾ ಸಂಘಗಳು ಮುಂದಾಗಬೇಕು. ಸಂಘದ ಇಂತಹ ಕಾರ್ಯವು ಇತರರಿಗೂ ಪ್ರೇರಣೆಯಾಗಿದೆ ಎಂದು ಶ್ಲಾಘಿಸಿದರು.

ಪಾಲಿಕೆ ಆಯುಕ್ತೆ ರೇಣುಕಾ ಮಾತನಾಡಿ, ಮರು ಬಳಕೆ ಮಾಡಬಹುದಾದ ಜೈವಿಕ ವಿಘಟನೀಯ ತ್ಯಾಜ್ಯವನ್ನು ಒಣ ತ್ಯಾಜ್ಯ ಸಂಗ್ರಹ ಕೇಂದ್ರಗಳಿಗೆ, ಒಣ ತ್ಯಾಜ್ಯವನ್ನು ವಿಂಗಡಿಸಿ, ಮರು ಪಡೆಯುವಿಕೆ ಸೌಲಭ್ಯಗಳಿಗೆ ಕಳುಹಿಸಲಾಗುತ್ತದೆ. ನಂತರ ಅಲ್ಲಿಂದ ಅದನ್ನು ಅಧಿಕೃತ ಮರು ಬಳಕೆ ಘಟಕಗಳಿಗೆ ಕಳುಹಿಸಲಾಗುತ್ತದೆ. ಈ ಕಾರ್ಯಕ್ಕೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಎಂದರು. ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ವೀರೇಶಕುಮಾರ್ ಮಾತನಾಡಿ, ತ್ಯಾಜ್ಯ ಕಸ ಸಂಗ್ರಹಣೆಗೆ ಹಲವಾರು ನಿಯಮಗಳಿದ್ದು, ಸಾರ್ವಜನಿಕರ ಸಹಭಾಗಿತ್ವದಲ್ಲಿ ಕಸ ಸಂಗ್ರಹಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ರಾಜಶೇಖರ ಬಿ.ಪುರಾಣಿಕ, ಪರಿಸರ ಅಭಿಯಂತರ ಜಗದೀಶ, ಮಾತೃ ದೇವೋ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಪೋತುಲ ಶ್ರೀನಿವಾಸ, ಒಣ ಕಸ ಮರು ಸಂಗ್ರಹಣಾ ಘಟಕದ ಸಂಯೋಜಕ ನವೀನ ಗುಬ್ಬಿ, ಕೆ.ಎನ್.ಪ್ರಜ್ವಲ್, ನಂದಾಮಣಿ, ರೇಖಾ, ಡಿ.ಸಾವಿತ್ರಮ್ಮ, ಡಿ.ಅರ್.ಚೇತನಾ ಇತರರು ಇದ್ದರು.

PREV

Recommended Stories

ಬಿಪಿಎಲ್‌ ಕಾರ್ಡ್‌ಗೆ 1.20 ಲಕ್ಷ ಆದಾಯ ಮಿತಿ ಕೇಂದ್ರದ್ದು: ಸಿಎಂ
ಪೇದೆ ನೇಮಕಕ್ಕೆ ವಯೋಮಿತಿ ಸಡಿಲಕ್ಕೆ ಶೀಘ್ರ ಪ್ರಸ್ತಾವ : ಪರಂ