ಸರ್ವರ ಏಳ್ಗೆಗಾಗಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ: ಎಚ್.ಕೆ. ಪಾಟೀಲ

KannadaprabhaNewsNetwork | Published : May 7, 2025 12:51 AM
Follow Us

ಸಾರಾಂಶ

ಸಮಾಜದಲ್ಲಿರುವ ಸರ್ವರ ಏಳ್ಗೆಗಾಗಿ ಪಂಚಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಭ್ರಷ್ಟಾಚಾರ ರಹಿತವಾಗಿ 1 ಕೋಟಿ ಕುಟುಂಬಗಳನ್ನು ಬಡತನ ರೇಖೆಯಿಂದ ಒಮ್ಮೆಲೇ ಮೇಲೆತ್ತುವ ಕ್ರಾಂತಿಕಾರಕ ಕಾರ್ಯವನ್ನು ನಮ್ಮ ಸರ್ಕಾರ ಮಾಡಿದೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಗದಗ: ಸಮಾಜದಲ್ಲಿರುವ ಸರ್ವರ ಏಳ್ಗೆಗಾಗಿ ಪಂಚಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಭ್ರಷ್ಟಾಚಾರ ರಹಿತವಾಗಿ 1 ಕೋಟಿ ಕುಟುಂಬಗಳನ್ನು ಬಡತನ ರೇಖೆಯಿಂದ ಒಮ್ಮೆಲೇ ಮೇಲೆತ್ತುವ ಕ್ರಾಂತಿಕಾರಕ ಕಾರ್ಯವನ್ನು ನಮ್ಮ ಸರ್ಕಾರ ಮಾಡಿದೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಅವರು ಮಂಗಳವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಶೇ 98.2ರಷ್ಟು ಪ್ರಮಾಣ ಪಂಚ ಗ್ಯಾರಂಟಿ ಯೋಜನೆಗಳು ತಲುಪಿದೆ. ಇನ್ನು 15 ದಿನಗಳಲ್ಲಿ ಶೇ 99ರಷ್ಟು ತಲುಪುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಗದಗ ಜಿಲ್ಲೆಯೂ ನೂತನ ಜಿಲ್ಲೆಯಾದರೂ ಸಾಧನೆಯಲ್ಲಿ ಯಾವುದೇ ಕಾರಣಕ್ಕೂ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿಲ್ಲ ಎಂದರು. ದ್ವಿತೀಯ ಪಿಯುಸಿ ಯಲ್ಲಿ 31ನೇ ಸ್ಥಾನದಿಂದ 25ನೇ ಸ್ಥಾನಕ್ಕೆ ಮೇಲೇರಿದ್ದೇವೆ. ಎಸ್ಎಸ್ಎಲ್ಸಿಯಲ್ಲಿ 17ನೇ ಸ್ಥಾನವನ್ನು ಪುನಃ ಕಾಯ್ದುಕೊಳ್ಳುವಲ್ಲಿ ಯಶ್ವಸಿಯಾಗಿದ್ದೇವೆ. ಜನತಾ ದರ್ಶನದ ಮೂಲಕ ಬಂದ 2 ಸಾವಿರ ಅರ್ಜಿಯಲ್ಲಿ 1900 ಸಮಸ್ಯೆಗಳನ್ನು ಪರಿಷ್ಕರಿಸಿದ್ದು ಕೆಲವು ಸಾಧ್ಯವಾದ್ದನ್ನು ಮುಂದಿನ ಹಂತದಲ್ಲಿ ಕ್ರಮವಹಿಸಲಾಗುವುದು ಎಂದರು. ಕರ್ನಾಟಕ ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ ಮಾತನಾಡಿ, ಗದಗ ಜಿಲ್ಲೆಗೆ ಮೊದಲಿನಿಂದಲೂ ಅಭಿನಾಭಾವ ಸಂಬಂಧವಿದ್ದು ವಿದ್ಯಾರ್ಥಿ ನಾಯಕನಾಗಿದ್ದಾಗ ಸಹಕಾರಿ ಭೀಷ್ಮ ದಿ.ಕೆ.ಎಚ್.ಪಾಟೀಲ ಅವರ ಶಿಷ್ಯ ಮತ್ತು ಅಭಿಮಾನಿಯಾಗಿದ್ದೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಚುನಾವಣೆಗಳಿಗೊಸ್ಕರ ಜಾರಿ ತಂದಿರುವುದಿಲ್ಲ. ಬಡ ಜನರ ಏಳ್ಗೆಗಾಗಿ ಬಂಗಾರಪ್ಪ, ಮೊಯ್ಲಿ ಸೇರಿದಂತೆ ಸಿದ್ದ ರಾಮಯ್ಯ ಅವರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದರು.ಸರ್ಕಾರ ರಚನೆಯಾಗಿ ಮೊದಲ ಕ್ಯಾಬಿನೆಟ್‌ನಲ್ಲಿಯೇ ಪಂಚ ಗ್ಯಾರಂಟಿ ಅನುಷ್ಠಾನಗೊಳಿಸಿ ನುಡಿದಂತೆ ನಡೆದಿದ್ದೇವೆ ಎಂದರು. ಗೃಹಲಕ್ಷ್ಮಿ ಯೋಜನೆಯಿಂದ ಪಡೆದ ಹಣವನ್ನು ಕೂಡಿಟ್ಟು ಬೋರ್ ವೇಲ್ ಕೊರೆಸಿರುವ ಉದಾಹರಣೆಗಳು ಗದಗ ಜಿಲ್ಲೆಯಲ್ಲಿ ಇವೆ. ಗೃಹಲಕ್ಷ್ಮಿಯಿಂದ ಮಹಿಳೆಯರ ಸಬಲೀಕರಣವಾಗಿದೆ. ಪಂಚ ಗ್ಯಾರಂಟಿ ಯೋಜನೆಗಳು ನಿರಂತರವಾಗಿ ಮುಂದುವರೆಯಲಿವೆ ಎಂದರು. ನರಗುಂದ ಶಾಸಕ ಸಿ.ಸಿ. ಪಾಟೀಲ ಮಾತನಾಡಿ, ನಾವೇನು ಗ್ಯಾರಂಟಿ ಯೋಜನೆಗಳ ವಿರೋಧಿಗಳಲ್ಲ. ಗ್ಯಾರಂಟಿ ಯೋಜನೆಯಿಂದಾಗಿ ಅಭಿವೃದ್ಧಿ ಸ್ವಲ್ಪ ಕುಂಠಿತವಾಗಿದ್ದು ಜಿಲ್ಲೆಯ ಅಭಿವೃದ್ಧಿಗೆ ಬೇಕಾದ ಅನುದಾನವನ್ನು ಬಿಡುಗಡೆಗೊಳಿಸಿ ಎಂದು ಆಗ್ರಹಿಸಿದರು. ವಿಪ ಶಾಸಕ ಎಸ್.ವಿ. ಸಂಕನೂರ ಮಾತನಾಡಿ 2-3 ತಿಂಗಳಿಂದ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಎಂದು ಮಾದ್ಯಮದಲ್ಲಿ ಪ್ರಸಾರವಾಗುತ್ತಿದೆ. ಆದಷ್ಟು ಬೇಗ ಬಿಡುಗಡೆಗೊಳಿಸಿ ಎಂದು ಹೇಳಿದರು.ಈ ಸಂರ್ಭದಲ್ಲಿ ಖನಿಜ ಅಬಿವೃದ್ಧಿ ನಿಗಮದ ಅಧ್ಯಕ್ಷ, ರೋಣ ಶಾಸಕ ಜಿ.ಎಸ್. ಪಾಟೀಲ, ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕ ಡಿ.ಆರ್. ಪಾಟೀಲ, ಎಸ್.ಎನ್. ಬಳ್ಳಾರಿ, ಎಂ.ಡಿ. ಮಕಾಂದರ, ಪ್ರಭು ಮೇಟಿ, ಅಶೋಕ ಮಂದಾಲಿ, ಶಾರದ ಹಿರೇಗೌಡರ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಜಿ .ಪಂ ಸಿಇಓ ಭರತ್ ಎಸ್, ಎಸ್ಪಿ ಬಿ.ಎಸ್. ನೇಮಗೌಡ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.