ಸಂವಿಧಾನದ ಆಶಯ ಈಡೇರಲು ಒಳ ಮೀಸಲು ಜಾರಿ ಅಗತ್ಯ

KannadaprabhaNewsNetwork |  
Published : Dec 02, 2024, 01:19 AM IST
ಚಿತ್ರದುರ್ಗ  ನಾಲ್ಕನೇ ಪುಟದ ಲೀಡ್       | Kannada Prabha

ಸಾರಾಂಶ

ಚಿತ್ರದುರ್ಗ: ಸಂವಿಧಾನದ ಆಶಯಗಳು ಪೂರ್ಣ ಪ್ರಮಾಣದಲ್ಲಿ ಈಡೇರಬೇಕಾದರೆ ಪರಿಶಿಷ್ಟ ಸಮುದಾಯಗಳಿಗೆ ಒಳಮೀಸಲು ಜಾರಿ ಅಗತ್ಯ ಎಂದು ವಿಶ್ರಾಂತ ಹಿರಿಯ ಪ್ರಾಧ್ಯಾಪಕ ಗುಲ್ಬರ್ಗದ ಎಂ.ಟಿ.ಕಟ್ಟಿಮನಿ ಅಭಿಪ್ರಾಯಪಟ್ಟರು.

ಚಿತ್ರದುರ್ಗ: ಸಂವಿಧಾನದ ಆಶಯಗಳು ಪೂರ್ಣ ಪ್ರಮಾಣದಲ್ಲಿ ಈಡೇರಬೇಕಾದರೆ ಪರಿಶಿಷ್ಟ ಸಮುದಾಯಗಳಿಗೆ ಒಳಮೀಸಲು ಜಾರಿ ಅಗತ್ಯ ಎಂದು ವಿಶ್ರಾಂತ ಹಿರಿಯ ಪ್ರಾಧ್ಯಾಪಕ ಗುಲ್ಬರ್ಗದ ಎಂ.ಟಿ.ಕಟ್ಟಿಮನಿ ಅಭಿಪ್ರಾಯಪಟ್ಟರು. ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ನೌಕರರ ಒಕ್ಕೂಟದ ರಾಜ್ಯ ಸಮಿತಿಯಿಂದ ಕ್ರೀಡಾ ಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಒಳ ಮೀಸಲಾತಿ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಬುದ್ಧ, ಅಂಬೇಡ್ಕರ್, ಪ್ರೊ.ಬಿ.ಕೃಷ್ಣಪ್ಪ, ಪೆರಿಯಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ತೀರ್ಪಿನಂತೆ ಒಳ ಮೀಸಲಾತಿ ಜಾರಿಗೊಳಿಸದಿದ್ದರೆ ಜನಪ್ರತಿನಿಧಿಗಳು ಯಾರೆ ಬರಲಿ ಪ್ರತಿ ಜಿಲ್ಲೆಯಲ್ಲಿ ಘೇರಾವ್ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು. ಅನೇಕ ನಿಂದನೆ, ಅಪಹಾಸ್ಯ, ನೋವು, ಹಿಂಸೆ, ಅವಮಾನ ಅನುಭವಿಸಿ ಡಾ.ಬಿ.ಆರ್.ಅಂಬೇಡ್ಕರ್ ದೇಶಕ್ಕೆ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ್ದಾರೆ. ಸಂವಿಧಾನದ ಆಶಯ ಈಡೇರಬೇಕಾದರೆ ಸರ್ಕಾರ ಒಳ ಮೀಸಲಾತಿಯನ್ನು ತಕ್ಷಣವೇ ಅನುಷ್ಠಾನಗೊಳಿಸಬೇಕು. ಒಳ ಮೀಸಲಾತಿ ಜಾರಿಗಾಗಿ ಏಕ ಸದಸ್ಯ ಆಯೋಗ ನೇಮಕವಾಗಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾರಿಗೊಳಿಸುವ ಬದಲು ಮಲ್ಲಿಕಾರ್ಜುನ ಖರ್ಗೆರವರ ಕಡೆ ಕೈಮಾಡಿ ತೋರಿಸುತ್ತ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಜಾಣ ನಡೆ ಪ್ರದರ್ಶಿಸುತ್ತಿದ್ದಾರೆ. ಮಾದಿಗ ಸಮುದಾಯ ಇನ್ನು ಮೈಮರೆತು ಕೂರುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು. 36 ಸಾವಿರ ವಿವಿಧ ಹುದ್ದೆಗಳ ನೇಮಕಾತಿಗೆ ಈಗಾಗಲೆ ನೋಟಿಫಿಕೇಷನ್ ಹೊರಡಿಸಲಾಗಿದೆ. ಒಳ ಮೀಸಲಾತಿ ಜಾರಿಯಾಗುವತನಕ ಎಲ್ಲಾ ನೇಮಕಾತಿಗಳನ್ನು ತಡೆಹಿಡಿಯಬೇಕು. ನಮ್ಮ ಸಮುದಾಯದ ಮುಖಂಡರು ಸಿದ್ದರಾಮಯ್ಯನವರ ಬಳಿ ಹೋಗಿ ಒಳ ಮೀಸಲಾತಿ ಜಾರಿಗೊಳಿಸಿ ಎಂದು ಬೇಡುತ್ತಿರುವುದನ್ನು ಬಿಟ್ಟರೆ ಪರಿಣಾಮಕಾರಿಯಾಗಿ ಏನು ಮಾಡಬೇಕು ಎನ್ನುವುದರ ಬಗ್ಗೆ ಯಾರು ಚಿಂತಿಸುತ್ತಿಲ್ಲದಿರುವುದೇ ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು. ಸಾಮಾಜಿಕ ಸಂಘರ್ಷ ಸಮಿತಿ ರಾಜ್ಯ ಗೌರವಾಧ್ಯಕ್ಷ ಡಿ.ದುರುಗೇಶಪ್ಪ ಮಾತನಾಡಿ, ಮೂವತ್ತು ವರ್ಷಗಳ ಹಿಂದೆ ಪ್ರೊ.ಬಿ.ಕೃಷ್ಣಪ್ಪ ನಾಯಕತ್ವದಲ್ಲಿ ಒಳ ಮೀಸಲಾತಿಗಾಗಿ ಹೋರಾಟ ಆರಂಭಿಸಲಾಯಿತು. ಅಂದಿನಿಂದ ಇಂದಿನವರೆಗೂ ಚಳವಳಿ, ಪ್ರತಿಭಟನೆ, ಹೋರಾಟಗಳು ನಡೆಯುತ್ತಲಿದೆ. ಆದರೆ ಪ್ರತಿಫಲ ಇನ್ನು ಯಾರಿಗೂ ಸಿಕ್ಕಿಲ್ಲ. ಒಳ ಮೀಸಲಾತಿ ಜಾರಿಗೊಳಿಸುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗಿದೆಯೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಸಮುದಾಯವನ್ನು ಇನ್ನು ಏಮಾರಿಸುತ್ತಲೆ ಬರುತ್ತಿರುವುದರ ವಿರುದ್ಧ ಜಾಗೃತರಾಗಬೇಕೆಂದು ತಿಳಿಸಿದರು. ವಿಜಯನಗರದ ಗ್ಯಾನಪ್ಪ ಬಡಿಗೇರ್ ಮಾತನಾಡಿ, ಒಳ ಮೀಸಲಾತಿಗಾಗಿ 35 ವರ್ಷಗಳಿಂದಲೂ ಹೋರಾಟ ಮಾಡಲಾಗುತ್ತಿದೆ. ಇನ್ನು ಅನುಷ್ಠಾನವಾಗಿಲ್ಲ. ಒಳ ಮೀಸಲಾತಿ ಜಾರಿಗೆ ಬರುವತನಕ ಸೂಕ್ತ ಸ್ಥಾನಮಾನ ಸಿಗುವುದಿಲ್ಲ. ಸುಪ್ರೀಂಕೋರ್ಟ್ ತೀರ್ಪಿನಂತೆ ಒಳ ಮೀಸಲಾತಿ ಜಾರಿಯಾದರೆ ಆಯಾ ಜನಸಂಖ್ಯೆಗಗುನುಗುಣವಾಗಿ ಪಾಲು ಸಿಗುತ್ತದೆ. ಯಾರ ಹಕ್ಕನ್ನು ಯಾರು ಕಸಿದುಕೊಳ್ಳುವುದಿಲ್ಲ. ಜಾತಿ ಅಭಿಮಾನ ಮೂಡಿಸಿಕೊಂಡು ಸಂಘಟಿತರಾಗದಿದ್ದರೆ ಆಳುವ ಸರ್ಕಾರಗಳು ನಮ್ಮ ಕಡೆಗಣಿಸುತ್ತಲೆ ಬರುತ್ತವೆ ಎಂದರು.ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ ಹಿರೇಹಳ್ಳಿ ಮಲ್ಲಿಕಾರ್ಜುನ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ರಾಮಣ್ಣ, ಭೀಮಾಶಂಕರ್ ಐಆರ್‌ಎಸ್ ವೇದಿಕೆಯಲ್ಲಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ