ಕಸ್ತೂರಿ ರಂಗನ್‌ ವರದಿ ಜಾರಿಯಿಂದ ಅತಂತ್ರವಾಗಲಿದೆ ಜನರ ಬದುಕು: ನಾಗೇಂದ್ರ

KannadaprabhaNewsNetwork | Published : Oct 22, 2024 12:05 AM

ಸಾರಾಂಶ

ಚಿಕ್ಕಮಗಳೂರು, ಕಸ್ತೂರಿ ರಂಗನ್ ವರದಿ ಮೇಲ್ನೋಟಕ್ಕೆ ಸುಂದರವಾಗಿದೆ. ಒಳಹೊಕ್ಕು ನೋಡಿದರೆ ಕಾಡಂಚಿನ ಜನರ ಬದುಕನ್ನು ನಾಶ ಮಾಡುವಂತಹ ಯೋಜನೆ ಆಗಿದೆ. ಪರಿಸರವಾದಿಗಳು ಮತ್ತು ವಾಸ್ತವವಾದಿಗಳ ಚರ್ಚೆ ಇಲ್ಲಿ ಭಿನ್ನವಾಗಿವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.

ಪರಿಸರವಾದಿಗಳು ಮತ್ತು ವಾಸ್ತವವಾದಿಗಳ ಚರ್ಚೆ ಇಲ್ಲಿ ಭಿನ್ನ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕಸ್ತೂರಿ ರಂಗನ್ ವರದಿ ಮೇಲ್ನೋಟಕ್ಕೆ ಸುಂದರವಾಗಿದೆ. ಒಳಹೊಕ್ಕು ನೋಡಿದರೆ ಕಾಡಂಚಿನ ಜನರ ಬದುಕನ್ನು ನಾಶ ಮಾಡುವಂತಹ ಯೋಜನೆ ಆಗಿದೆ. ಪರಿಸರವಾದಿಗಳು ಮತ್ತು ವಾಸ್ತವವಾದಿಗಳ ಚರ್ಚೆ ಇಲ್ಲಿ ಭಿನ್ನವಾಗಿವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವರದಿ ಜಾರಿ ಮಾಡಿದಲ್ಲಿ ಕಾಡಂಚಿನ ಜನರ ಬದುಕು ಮತ್ತಷ್ಟು ಅತಂತ್ರವಾಗಲಿದೆ. ರಾಜ್ಯ ಸರಕಾರ ಕಸ್ತೂರಿರಂಗನ್ ವರದಿಯನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಬಾರದು ಎಂಬುದು ರೈತ ಸಂಘದ ಆಗ್ರಹವಾಗಿದೆ ಎಂದರು.

ಜಿಲ್ಲೆಯ ಕಡೂರು ಮತ್ತು ಮೂಡಿಗೆರೆ ತಾಲೂಕಿನಲ್ಲಿ ನೂರಾರು ಎಕರೆ ಕಂದಾಯ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಲಾಗಿದೆ. 136 ಮಂದಿ ಅಧಿಕಾರಿ, ಸಿಬ್ಬಂದಿ ತಪ್ಪಿತಸ್ಥರು ಎಂದು ವರದಿ ಕೂಡ ನೀಡಲಾಗಿದೆ. ಆದರೆ, ಸರಕಾರ ಕ್ರಮ ಕೈಗೊಳ್ಳದೆ ಮೀನಾಮೇಷ ಎಣಿಸುತ್ತಿದೆ, ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ದೊಡ್ಡಮಟ್ಟದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕಳೆದ 70 ವರ್ಷದ ಹಿಂದೆ ಸರಕಾರದಿಂದ ಪಟ್ಟಾ ಕೊಡಲಾಗಿದೆ. ರೈತ ಈಗ ತೋಟ, ಗದ್ದೆ ಮಾಡಿಕೊಂಡು ಬೆಳೆ ತೆಗೆಯುತ್ತಿದ್ದಾನೆ. ಈಗ ಆ ಭೂಮಿ ಅರಣ್ಯಕ್ಕೆ ಸೇರಿದ್ದು ಎಂದು ಅರಣ್ಯ ಇಲಾಖೆ ಹೇಳುತ್ತಿದೆ. ಒಂದು ವೇಳೆ ರೈತರನ್ನು ಒಕ್ಕಲೆಬ್ಬಿಸಲು ಇಲಾಖೆ ಮುಂದಾದರೆ ರೈತರ ಪರ ನಿಂತು ಹೋರಾಟ ಮಾಡಲಿದ್ದೇವೆ. ಈಗಾಗಲೇ 3 ಎಕರೆವರೆಗಿನ ಸಾಗುವಳಿ ಭೂಮಿಯನ್ನು ತೆರವು ಮಾಡುವುದಿಲ್ಲ ಎಂದು ಸರಕಾರ ಹೇಳಿದೆ. ಆ ಮಾತಿನಂತೆ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಕುಟುಂಬಕ್ಕೊಬ್ಬ ಸದಸ್ಯ, ಊರಿಗೊಬ್ಬ ಕಾರ್ಯಕರ್ತ ಎಂಬ ಅಭಿಯಾನಕ್ಕೆ ಅ.26 ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಚಾಲನೆ ನೀಡಲಿದ್ದೇವೆ. ಅಲ್ಲಿ ರಾಜ್ಯ ರೈತ ಸಂಘ ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಈ ಎಲ್ಲ ಮೂರು ಪಕ್ಷಗಳು ಬಂಡವಾಳಶಾಹಿಗಳ ನೀತಿಯನ್ನು ಒಪ್ಪಿಕೊಂಡಿವೆ. ರೈತರ ಜಮೀನನ್ನು ಕಿತ್ತುಕೊಂಡು ಕೈಗಾರಿಕೆಗಳಿಗೆ ನೀಡುತ್ತಿವೆ. ಸರಕಾರದ ಅವೈಜ್ಞಾನಿಕ ನೀತಿಗಳಿಗೆ ಕಡಿವಾಣ ಹಾಕಬೇಕಾದರೆ ಸಂಘಟನೆ ಬಲಗೊಳ್ಳಬೇಕು. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ರೈತ ಚಳವಳಿಯನ್ನು ಬೇರುಮಟ್ಟದಿಂದ ಸಂಘಟಿಸಲಿದ್ದೇವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್‌ ಪೂಣಚ್ಚ, ಮಹಿಳಾ ಉಪಾಧ್ಯಕ್ಷೆ ವನಶ್ರೀ ಲಕ್ಷ್ಮಣಗೌಡ, ಬಸವರಾಜು, ಮಹೇಶ್, ಕೆ.ಕೆ. ಕೃಷ್ಣೇಗೌಡ, ಸುನಿಲ್‌ಕುಮಾರ್ ಉಪಸ್ಥಿತರಿದ್ದರು. 21 ಕೆಸಿಕೆಎಂ 6

Share this article