- ರಾಜ್ಯ ಸರ್ಕಾರಿ ನೌಕರರ ಬೇಡಿಕೆಗೆ ಸಿಎಂ, ಸರ್ಕಾರ ಸ್ಪಂದನೆ: ಸಿ.ಎಸ್.ಷಡಕ್ಷರಿ ಹೇಳಿಕೆ
- - - - ರಾಜ್ಯ ಸರ್ಕಾರಿ ರೇಡಿಯಾಲಜಿ ಇಮೇಜಿಂಗ್ ಆಫೀಸರ್ಸ್ ಕೇಂದ್ರ ಸಂಘದಿಂದ ವಿಶೇಷ ಸಭೆ ಉದ್ಘಾಟನೆ- ನಗದುರಹಿತ ಆರೋಗ್ಯ ಸೇವೆಗೆ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದ್ದು, ತಿಂಗಳೊಳಗೆ ಆರಂಭ ಸಾಧ್ಯತೆ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ರಾಜ್ಯ ಸರ್ಕಾರಿ ನೌಕರರಿಗೆ ಹಳೇ ಪಿಂಚಣಿ ಮತ್ತು ಕೇಂದ್ರ ಮಾದರಿ ವೇತನವು ಇನ್ನು ಒಂದೂವರೆ ವರ್ಷದಲ್ಲೇ ಸಿಗುವ ಸಂಪೂರ್ಣ ವಿಶ್ವಾಸವಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಹೇಳಿದರು.ನಗರದಲ್ಲಿ ಶನಿವಾರ ಕರ್ನಾಟಕ ರಾಜ್ಯ ಸರ್ಕಾರಿ ರೇಡಿಯಾಲಜಿ ಇಮೇಜಿಂಗ್ ಆಫೀಸರ್ಸ್ ಕೇಂದ್ರ ಸಂಘ ಹಮ್ಮಿಕೊಂಡಿದ್ದ ವಿಶೇಷ ಸಭೆ ಉದ್ಘಾಟನೆ ಹಾಗೂ ಸಂಘ ದಿನದರ್ಶಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು. ಸರ್ಕಾರಿ ನೌಕರರಿಗೆ ಈಗಾಗಲೇ 7ನೇ ವೇತನ ಆಯೋಜ ಜಾರಿಗೊಳಿಸಿದ ಸಿಎಂ ಸಿದ್ದರಾಮಯ್ಯ 2025ರಲ್ಲಿ ಒಪಿಎಸ್ ಹಾಗೂ 2026ಕ್ಕೆ ಕೇಂದ್ರ ಮಾದರಿ ವೇತನ ಜಾರಿಗೊಳಿಸುವ ವಿಶ್ವಾಸವಿದೆ ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಜೊತೆಗೆ ಸರ್ಕಾರಿ ನೌಕರರ ಬೇಡಿಕೆಗೂ ಸಿಎಂ ಸಿದ್ದರಾಮಯ್ಯ ಸ್ಪಂದಿಸಿದ್ದಾರೆ. ಮುಂದಿನ ದಿನಗಳಲ್ಲಿ ಎನ್‌ಪಿಎಸ್ ರದ್ದುಗೊಳಿಸಿ, ಒಪಿಎಸ್ ಜಾರಿಗೊಳಿಸುವ ಮೂಲಕ ಸರ್ಕಾರಿ ನೌಕರರ ಹಿತಕಾಯಬೇಕು. ಈ ಬಗ್ಗೆ ಸಂಘ ನಿರಂತರ ಮನವಿ ಮಾಡುತ್ತಲೇ ಬಂದಿದ್ದು, ಇನ್ನು ಸಂಘದ ಪ್ರಮುಖ ಬೇಡಿಕೆಗಳಲ್ಲಿ ಒಂದಾದ ರಾಜ್ಯ ಸರ್ಕಾರಿ ನೌಕರರಿಗೂ ಕೇಂದ್ರ ಮಾದರಿ ವೇತನದ ಕೂಗಿಗೆ ಸ್ಪಂದನೆ ಸಿಗಲಿದ್ದು, 2026ರ ವೇಳೆಗೆ ಇದು ಕಾರ್ಯರೂಪಕ್ಕೆ ಬರುವ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ರಾಜ್ಯ ಸರ್ಕಾರಿ ನೌಕರರಿಗೂ ನಗದುರಹಿತ ಆರೋಗ್ಯ ಸೇವೆ ಒದಗಿಸುವ ಯೋಜನೆ ಆರಂಭವಾಗಲಿದೆ. ನಗದುರಹಿತ ಆರೋಗ್ಯ ಸೇವೆಗೆ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಮುಂದಿನ ಒಂದು ತಿಂಗಳಲ್ಲೇ ಅದು ಶುರುವಾಗುವ ಸಾಧ್ಯತೆ ಇದೆ. ನಾನೇ ಮುಖ್ಯಮಂತ್ರಿಯಾದರೂ ಸಮಸ್ಯೆಗಳನ್ನು ಸಂಪೂರ್ಣ ಪರಿಹರಿಸಲು ಸಾಧ್ಯವಿಲ್ಲ. ಆದರೂ, ಸರ್ಕಾರಕ್ಕೆ ತೃಪ್ತಿ ತರುವಂತೆ ಕೆಲಸ ಮಾಡಬೇಕು. ಕೆಲ ಇಲಾಖೆಗಳಲ್ಲಿ ಸಾರ್ವಜನಿಕರ ಕೆಲಸ ಸರಿಯಾಗಿ ಆಗುತ್ತಿಲ್ಲವೆಂಬ ದೂರು ಇವೆ. ಸರ್ಕಾರಿ ನೌಕರರ ಕೆಲಸಗಳನ್ನೇ ಸರ್ಕಾರಿ ನೌಕರರ ಮಾಡಿಕೊಡುತ್ತಿಲ್ಲ. ಇಂತಹ ಸ್ಥಿತಿಯಲ್ಲಿರುವ ನಾವು ಒಗ್ಗಟ್ಟಿನಿಂದ ಇರಬೇಕು ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಷಣ್ಮುಖಪ್ಪ ಮಾತನಾಡಿ, ಸರ್ಕಾರಿ ಆಸ್ಪತ್ರೆಗಳು ಮೇಲ್ಜರ್ಜೆಗೇರುತ್ತಿವೆ. ಆದರೆ, ಅದಕ್ಕೆ ತಕ್ಕಂತೆ ಸರ್ಕಾರ ಮಾನವ ಸಂಪನ್ಮೂಲ ಒದಗಿಸುತ್ತಿಲ್ಲ. ಇದು ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಸವಾಲಾಗಿ ಪರಿಣಮಿಸಿದೆ. ಅಧ್ಯಕ್ಷರು ಈ ಬಗ್ಗೆ ಸರ್ಕಾರದ ಗಮನ ಸೆಳೆದು, ಸಮಸ್ಯೆ ಸರಿಪಡಿಸುವಂತೆ ಒತ್ತಡ ಹೇರಬೇಕು ಎಂದು ಮನವಿ ಮಾಡಿದರು.ಸಂಘದ ಕೇಂದ್ರ ಸಮಿತಿ ಅಧ್ಯಕ್ಷ ಎನ್.ವಾಲ್ಮೀಕಿ ಮಾತನಾಡಿ, ರಾಜ್ಯದಲ್ಲಿ 700 ಜನ ಮಾತ್ರ ಕ್ಷ-ಕಿರಣ ಕ್ಷೇತ್ರದಲ್ಲಿ ಕೆಲಸ ಮಾಡುವವರಿದ್ದಾರೆ. ಇಂತಹವರೂ ಗಂಭೀರವಾದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಗಂಭೀರ ಚಿಂತನೆ ನಡೆಸಬೇಕು. ಅಂತಹ ಕ್ಷ-ಕಿರಣ ಕ್ಷೇತ್ರದಲ್ಲಿ ಕೆಲಸ ಮಾಡುವವರ ಬಗ್ಗೆ ಗಮನಹರಿಸಿ, ಆರೋಗ್ಯ ರಕ್ಷಣೆಗೆ ಹೆಚ್ಚು ಕಾಳಜಿ ವಹಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಆರೋಗ್ಯ ನಿರೀಕ್ಷಣಾಧಿಕಾರಿ ಕೇಂದ್ರ ಸಂಘದ ಅಧ್ಯಕ್ಷ ಸಿ.ಪರಶುರಾಮಪ್ಪ ಮಾತನಾಡಿ, ಎಲ್ಲರ ಆರೋಗ್ಯ ಕಾಪಾಡುವ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರೇ ಅನಾರೋಗ್ಯ ಪೀಡಿತರಾಗಿದ್ದಾರೆ. ಕೋವಿಡ್ ಸಂಕಷ್ಟದಲ್ಲಿ ನೌಕರರು ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಸರ್ಕಾರವು ಇನ್ನಾದರೂ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ, ಹೊಸ ಹುದ್ದೆಗಳನ್ನು ಸೃಜನೆ ಮಾಡಬೇಕಿದೆ ಎಂದು ಆಗ್ರಹಿಸಿದರು.ಸಂಘದ ಜಿಲ್ಲಾಧ್ಯಕ್ಷ ಜೆ.ನಾಗಪ್ಪ ಅಧ್ಯಕ್ಷತೆ ವಹಿಸಿದ್ದರು. ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಮುರಳೀಧರ, ರಾಜ್ಯ ಸರ್ಕಾರಿ ನೌಕರರ ಸಂಘದ ಖಜಾಂಚಿ ತಿಪ್ಪೇಸ್ವಾಮಿ, ಗೌರವಾಧ್ಯಕ್ಷ ರೋಷನ್ ಅಲಿ, ಪ್ರಧಾನ ಕಾರ್ಯದರ್ಶಿ ಪ್ರದೀಪಕುಮಾರ, ಪದಾಧಿಕಾರಿಗಳು, ಸದಸ್ಯರು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ಸದಸ್ಯರು ಇದ್ದರು.
- - -ಟಾಪ್ ಕೋಟ್ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಮುಂದಿನ ಬಾರಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಾನು ಸ್ಪರ್ಧಿಸುವುದಿಲ್ಲ. ನಮ್ಮ ಚುನಾವಣೆಗಳಲ್ಲೂ ನೈತಿಕತೆ ಉಳಿದಿಲ್ಲ. ಹಾಗಾಗಿ, ಇಂತಹ ಚುನಾವಣೆಗಳು ನನಗೆ ಬೇಡವೇ ಬೇಡ. ಒಬ್ಬ ಸಾಮಾನ್ಯ ನೌಕರ ಸಂಘದ ರಾಜ್ಯಾಧ್ಯಕ್ಷನಾಗಿ ಆಯ್ಕೆ ಆಗಬೇಕೆನ್ನುವುದು ನನ್ನ ಉದ್ದೇಶ. ಇದನ್ನು ಮಾಡಿಯೇ ತೀರುತ್ತೇನೆ
- ಸಿ.ಎಸ್.ಷಡಕ್ಷರಿ, ರಾಜ್ಯಾಧ್ಯಕ್ಷ, ರಾಜ್ಯ ಸರ್ಕಾರಿ ನೌಕರರ ಸಂಘ- - -
-8ಕೆಡಿವಿಜಿ1, 2.ಜೆಪಿಜಿ:ವಿಶೇಷ ಸಭೆಯನ್ನು ರಾಜ್ಯ ಸರ್ಕಾರಿ ನೌಕರರ ಸಂಘ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಉದ್ಘಾಟಿಸಿದರು.