ತುಂಗಭದ್ರಾ ಡ್ಯಾಂನಲ್ಲಿ ಈ ವರ್ಷ ನೀರು ಸಂಗ್ರಹ ಪ್ರಮಾಣ: ಶೀಘ್ರ ನಿರ್ಧಾರ

KannadaprabhaNewsNetwork | Published : Apr 28, 2025 11:49 PM

ಸಾರಾಂಶ

ತುಂಗಭದ್ರಾ ಜಲಾಶಯದಲ್ಲಿ ಈ ವರ್ಷ ಎಷ್ಟು ಪ್ರಮಾಣದಲ್ಲಿ ನೀರು ಸಂಗ್ರಹಿಸಬೇಕು ಎಂಬುದರ ಬಗ್ಗೆ ಶೀಘ್ರವೇ ತುಂಗಭದ್ರಾ ಮಂಡಳಿ ಮಹತ್ವದ ಸಭೆ ನಡೆಸಲಿದೆ. ತುಂಗಭದ್ರಾ ಜಲಾಶಯ 105.788 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ಮಳೆಗಾಲದಲ್ಲಿ ಜಲಾಶಯ ಭರ್ತಿ ಮಾಡಿಕೊಂಡರೆ, ಜಲಾಶಯಕ್ಕೆ ಸಮಸ್ಯೆ ಆದೀತು ಎಂಬ ಅಭಿಪ್ರಾಯವನ್ನು ತಜ್ಞರು ನೀಡಿದ್ದಾರೆ.

ಕೃಷ್ಣ ಲಮಾಣಿ

ಹೊಸಪೇಟೆ: ತುಂಗಭದ್ರಾ ಜಲಾಶಯದಲ್ಲಿ ಈ ವರ್ಷ ಎಷ್ಟು ಪ್ರಮಾಣದಲ್ಲಿ ನೀರು ಸಂಗ್ರಹಿಸಬೇಕು ಎಂಬುದರ ಬಗ್ಗೆ ಶೀಘ್ರವೇ ತುಂಗಭದ್ರಾ ಮಂಡಳಿ ಮಹತ್ವದ ಸಭೆ ನಡೆಸಲಿದೆ.

ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಪ್ರತಿನಿಧಿಗಳು ಕೂಡ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ರೈತರ ಹಿತದೃಷ್ಟಿ ಕೇಂದ್ರೀಕರಿಸಿ ನಡೆಯುವ ಹಿನ್ನೆಲೆಯಲ್ಲಿ ಈ ಸಭೆ ಅನ್ನದಾತರು ಹಾಗೂ ಕೈಗಾರಿಕೋದ್ಯಮಿಗಳ ಹಿತದೃಷ್ಟಿಯಿಂದ ಮಹತ್ವದ್ದಾಗಲಿದೆ.

ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್‌ 2024ರ ಆ. 10ರಂದು ಕಳಚಿಬಿದ್ದ ಬಳಿಕ ತುಂಗಭದ್ರಾ ಮಂಡಳಿಗೆ ಡ್ಯಾಂನ ಗೇಟ್‌ಗಳದ್ದೇ ಚಿಂತೆ ಆಗಿದೆ. ಹಾಗಾಗಿ ಹಲವು ಪರಿಣಿತರ ಸಮಿತಿಗಳು ಕೂಡ ಪರಿಶೀಲನೆ ನಡೆಸಿವೆ. ಆಂಧ್ರಪ್ರದೇಶದ ಎನ್‌ಡಿಟಿ ಸರ್ವಿಸ್‌ ಸಂಸ್ಥೆ ವಿಸ್ತೃತ ವರದಿ ನೀಡಿದೆ. ಇನ್ನು ಪರಿಣಿತ ತಜ್ಞ ಕನ್ನಯ್ಯ ನಾಯ್ಡು ಕೂಡ ಏ. 8 ಮತ್ತು 9ರಂದು ತುಂಗಭದ್ರಾ ಜಲಾಶಯಕ್ಕೆ ಆಗಮಿಸಿ ಜಲಾಶಯ ಸಂಪೂರ್ಣ ಭರ್ತಿ ಮಾಡುವುದು ಬೇಡ ಎಂದು ಸಲಹೆ ನೀಡಿದ್ದಾರೆ. ಹಾಗಾಗಿ ಈ ಕುರಿತು ತುಂಗಭದ್ರಾ ಮಂಡಳಿ ಮಹತ್ವದ ಸಭೆ ನಡೆಸಲಿದೆ.

ನೀರು ಸಂಗ್ರಹದ ಕುರಿತು ಸಭೆ: ತುಂಗಭದ್ರಾ ಜಲಾಶಯ 105.788 ಟಿಎಂಸಿ ನೀರಿನ ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಮಳೆಗಾಲದಲ್ಲಿ ಜಲಾಶಯ ಭರ್ತಿ ಮಾಡಿಕೊಂಡರೆ, ಜಲಾಶಯಕ್ಕೆ ಸಮಸ್ಯೆ ಆದೀತು ಎಂಬ ಅಭಿಪ್ರಾಯವನ್ನು ತಜ್ಞರು ನೀಡಿದ್ದಾರೆ. ಹಾಗಾಗಿ ಎಷ್ಟು ಪ್ರಮಾಣದಲ್ಲಿ ನೀರು ಸಂಗ್ರಹಿಸಬೇಕು. ರೈತರಿಗೆ ಎರಡು ಬೆಳೆಗೆ ನೀರು ಕೊಡಬೇಕಾ? ಇಲ್ಲವೇ ಒಂದೇ ಬೇಳೆಗೆ ನೀರು ಒದಗಿಸಬೇಕಾ? ಕೈಗಾರಿಕೆಗಳಿಗೆ ಎಷ್ಟು ಪ್ರಮಾಣದಲ್ಲಿ ನೀರು ಒದಗಿಸಬೇಕು? ಕುಡಿಯುವ ನೀರಿಗೆ ಎಷ್ಟು ಪ್ರಮಾಣದಲ್ಲಿ ಬಳಕೆ ಆಗಲಿದೆ? ಎಂಬುದರ ಬಗ್ಗೆ ಸಭೆ ನಡೆಸಲು ತುಂಗಭದ್ರಾ ಮಂಡಳಿ ಮುಂದಾಗಿದೆ. ಜಲಾಶಯದ ನೀರಿನ ಒಳಹರಿವು 447 ಕ್ಯುಸೆಕ್‌ ಇದೆ. ಒಳ ಹರಿವು ಏರುವುದರೊಳಗೆ ಈ ಮಹತ್ವದ ಸಭೆ ನಡೆಯಲಿದೆ ಎಂದು ಮಂಡಳಿ ಮೂಲಗಳು ''''ಕನ್ನಡಪ್ರಭ''''ಕ್ಕೆ ತಿಳಿಸಿವೆ.

ಜಲಾಶಯದಲ್ಲಿ ಸದ್ಯ 6.878 ಟಿಎಂಸಿಯಷ್ಟು ನೀರಿದೆ. ಕಳೆದ ವರ್ಷ 3.696 ಟಿಎಂಸಿಯಷ್ಟು ಇತ್ತು. ಈ ಜಲಾಶಯ ರಾಜ್ಯದ ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ 10 ಲಕ್ಷ ಎಕರೆ ಪ್ರದೇಶಕ್ಕೆ ನೀರು ಒದಗಿಸುತ್ತದೆ. ಅಲ್ಲದೇ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ 3 ಲಕ್ಷ ಎಕರೆ ಪ್ರದೇಶಕ್ಕೆ ನೀರು ಒದಗಿಸುತ್ತದೆ.

ಜಲಾಶಯದ 19ನೇ ಗೇಟ್‌ನ ಸ್ಟಾಪ್‌ ಲಾಗ್‌ ತೆಗೆದು ಕ್ರಸ್ಟ್‌ಗೇಟ್‌ ಅಳವಡಿಕೆಗೆ ಗುಜರಾತ್‌ನ ಹಾರ್ಡ್‌ವೇರ್‌ ಟೂಲ್ಸ್‌ ಆ್ಯಂಡ್‌ ಮಷಿನರಿ ಪ್ರಾಜೆಕ್ಟ್‌ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಈ ಕಂಪನಿ ಶೀಘ್ರವೇ ಗೇಟ್‌ ನಿರ್ಮಾಣ ಕಾರ್ಯ ಆರಂಭಿಸಲಿದೆ.

ಮೇ 5ಕ್ಕೆ ಟೆಂಡರ್‌ ಒಪನ್‌: ಜಲಾಶಯದ 32 ಕ್ರಸ್ಟ್‌ಗೇಟ್‌ಗಳನ್ನು ಬದಲಿಸಿ ಹೊಸ ಗೇಟ್‌ಗಳ ನಿರ್ಮಾಣಕ್ಕಾಗಿ ತುಂಗಭದ್ರಾ ಮಂಡಳಿ ಇ-ಟೆಂಡರ್‌ ಕರೆದಿದ್ದು, ಈ ಟೆಂಡರ್‌ ಮೇ 5ಕ್ಕೆ ತೆರೆಯಲಾಗುತ್ತದೆ. ಈಗಾಗಲೇ 19ನೇ ಗೇಟ್‌ನ ಸ್ಟಾಪ್‌ಲಾಗ್‌ ತೆರವುಗೊಳಿಸಿ ಕ್ರಸ್ಟ್‌ಗೇಟ್‌ ನಿರ್ಮಾಣ ಕಾರ್ಯಕ್ಕಾಗಿ ಗುಜರಾತ್‌ ಮೂಲದ ಕಂಪನಿಗೆ ನೀಡಲಾಗಿದೆ. ಈ ಕಂಪನಿ ತುಂಗಭದ್ರಾ ಮಂಡಳಿಗೆ ಕಾಮಗಾರಿ ರೂಪುರೇಷೆ ಕುರಿತು ಡಿಸೈನ್‌ ಅನ್ನು ಮಂಡಳಿಗೆ ಸಲ್ಲಿಸಿದ್ದು, ಮಂಡಳಿಯ ಪರಿಣಿತ ಅಧಿಕಾರಿಗಳು ಪರಿಶೀಲನೆ ನಡೆಸಿ ಸಮ್ಮತಿ ಸೂಚಿಸಿದ ಬಳಿಕ ಕಾಮಗಾರಿ ಶೀಘ್ರ ಆರಂಭಗೊಳ್ಳಲಿದೆ ಎಂದು ಮಂಡಳಿಯ ವಿಶ್ವಸನೀಯ ಮೂಲಗಳು ''''ಕನ್ನಡಪ್ರಭ''''ಕ್ಕೆ ತಿಳಿಸಿವೆ.

Share this article