ಪುನಶ್ಚೇತನ ಶಿಬಿರ ಕಾರ್ಯಾಗಾರ । ಸರ್ವಧರ್ಮದ ಸಾಮೂಹಿಕ ಪ್ರಾರ್ಥನೆ
ದೇಶದ ಉದ್ದಗಲಕ್ಕೂ ಭಾರತ ಸೇವಾದಳದ ಸ್ವಯಂಸೇವಕರು ನಿಸ್ವಾರ್ಥ ಸೇವೆ ಸಲ್ಲಿಸುವುದರ ಮೂಲಕ ನಾಗರಿಕ ಸೇವೆಯಲ್ಲಿ ತನ್ನದೇ ಪಾತ್ರ ವಹಿಸುತ್ತಿದೆ ಎಂದು ಸೇವಾದಳ ವಲಯ ಸಂಘಟಕಿ ರಾಣಿ ವಿ.ಎಸ್. ಹೇಳಿದರು.
ನಗರದ ಕ್ಷೇತ್ರ ಸಂಪನ್ಮೂಲ ಕೇಂದ್ರ ಸಭಾಂಗಣದಲ್ಲಿ ಭಾರತ ಸೇವಾದಳ ಜಿಲ್ಲಾ ಮತ್ತು ತಾಲೂಕು ಘಟಕ, ಶಾಲಾ ಶಿಕ್ಷಣ ಇಲಾಖೆ ಜಂಟಿಯಾಗಿ ಹಮ್ಮಿಕೊಂಡ ‘ಶಿಕ್ಷಕ, ಶಿಕ್ಷಕಿಯರ ಪುನಶ್ಚೇತನ ಶಿಬಿರ’ದ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.‘ನಮ್ಮ ಸೇವಾ ಕಾರ್ಯ ಚಟುವಟಿಕೆಗಳಿಗೆ ರೋಟರಿ, ಲಯನ್ಸ್ ಸೇರಿದಂತೆ ವಿವಿಧ ಸ್ವಯಸೇವಾ ಸಂಘಗಳ ಸಹಕಾರ ಅವಶ್ಯಕತೆ ಇದೆ. ಎಲ್ಲರ ಸ್ವಾರ್ಥ ರಹಿತ ಸಹಕಾರ ಇದ್ದರೆ ಮಾತ್ರ ಶಿಬಿರಗಳು ಯಶಸ್ವಿಯಾಗುತ್ತವೆ. ಸಾರ್ವಜನಿಕ ವಲಯದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಲು ಹೆಚ್ಚಿನ ಶಕ್ತಿಯೂ ದೊರೆಯುತ್ತದೆ. ಭಾರತ ಸೇವಾದಳ ಸಮಿತಿಯೊಂದಿಗೆ ನೂತನವಾಗಿ ತರಬೇತಿ ಪಡೆದ ಶಿಕ್ಷಕರು ನಿರಂತರ ಸಂಪರ್ಕ ಇಟ್ಟುಕೊಂಡು ಸಲಹೆ ಸೂಚನೆಗಳನ್ನು ನೀಡಬಹುದಾಗಿದೆ. ಕೋರೋನಾ ಹಬ್ಬಿದ ಸಮಯದಲ್ಲಿ ಭಾರತ ಸೇವಾದಳ ಸಮಿತಿ ತನ್ನದೇ ಸೇವೆ ಸಲ್ಲಿಸಿದೆ. ದೇಶದಾದ್ಯಂತ ಸೇವಾದಳಕ್ಕೆ ತನ್ನದೇ ಆದಂತಹ ಸಂಪರ್ಕ ಕೊಂಡಿಗಳಿವೆ’ ಎಂದು ತಿಳಿಸಿದರು.
ಸಮೂಹ ಸಂಪನ್ಮೂಲ ವ್ಯಕ್ತಿ ವಿಷ್ಣುವರ್ಧನ್ ಮಾತನಾಡಿ ಮಕ್ಕಳ ನಾಯಕತ್ವ ಶಿಬಿರ ಸೇರಿದಂತೆ ವಿಶೇಷ ಕಾರ್ಯಕ್ರಮಗಳ ಶಿಬಿರಗಳನ್ನು ಎಲ್ಲ ಶಾಲೆಗಳ ಶಿಕ್ಷಕರಿಗೆ ನಡೆಸಲಾಗುತ್ತಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ತರಬೇತಿ ಪಡೆದ ನಗರ ಮತ್ತು ಗ್ರಾಮೀಣ ಪ್ರದೇಶಗಳ ಶಿಕ್ಷಕರಿಗೆ ಇಂದಿನ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಬಾಣಾವರ ವೃತ್ತ ಶಿಕ್ಷಣ ಸಂಯೋಜಕ ವೈ.ಕೆ ಮಲ್ಲೇಶ್, ಸಾಹಿತಿ ಮಾಲಾ ಚೆಲುವನಹಳ್ಳಿ, ತಾಲೂಕು ಸೇವಾ ದಳ ಘಟಕ ಕಾರ್ಯದರ್ಶಿ ಎನ್ .ವಿ. ರಾಮಕೃಷ್ಣಪ್ಪ, ಬಿ.ಆರ್.ಪಿ ಪುಷ್ಪಾವತಿ, ದೈಹಿಕ ಶಿಕ್ಷಣ ಪರಿವೀಕ್ಷಕ ವಸಂತಕುಮಾರ್, ರಾಜ್ಯ ಸಂಪನ್ಮೂಲ ವ್ಯಕ್ತಿ ಬಿ.ಮಹೇಶ್ ಸೇರಿ ತರಬೇತಿ ಪಡೆದ ಶಿಕ್ಷಕರು ಇದ್ದರು.