10 ದಿನದಲ್ಲಿ ಹಮ್ಮಿಗಿ ಬ್ಯಾರೇಜ್ ನೀರು ಸಂಪೂರ್ಣ ಖಾಲಿ!

KannadaprabhaNewsNetwork |  
Published : May 19, 2024, 01:49 AM IST
ಹಮ್ಮಗಿ ಬ್ಯಾರೇಜ್ ನಲ್ಲಿ ಅಲ್ಲಲ್ಲಿ ನಿಂತಿರುವ ನೀರನ್ನೇ ಆಶ್ರಯಿಸಿರುವ ಜಾನುವಾರುಗಳು.  | Kannada Prabha

ಸಾರಾಂಶ

ಕಳೆದ ಸಾಲಿನಲ್ಲಿ ಮಲೆನಾಡು ಭಾಗದಲ್ಲಿ ಉಂಟಾದ ತೀವ್ರ ಮಳೆ ಕೊರತೆ ಬಯಲು ಸೀಮೆಯ ನಾಡಾದ ಗದಗ ಜಿಲ್ಲೆಯನ್ನು ಕಾಡುತ್ತಿದೆ

ಶಿವಕುಮಾರ ಕುಷ್ಟಗಿ ಗದಗ

ಜಿಲ್ಲೆಯ ಜೀವಜಲ ಮೂಲವಾಗಿರುವ ತುಂಗಭದ್ರೆಗೆ ನಿರ್ಮಿಸಿರುವ ಹಮ್ಮಿಗಿ ಬ್ಯಾರೇಜ್‌ನಲ್ಲಿನ ನೀರು ಕೇವಲ 10 ದಿನಗಳಲ್ಲಿ ಸಂಪೂರ್ಣ ಖಾಲಿಯಾಗಲಿದೆ. ಜಲ ಮೂಲವೇ ಬರಿದಾದ ಹಿನ್ನೆಲೆಯಲ್ಲಿ ಜಿಲ್ಲೆಯ ಜನರಿಗೆ ನೀರು ಕೊಡುವುದಾದರೂ ಎಲ್ಲಿಂದ ಎನ್ನುವ ಬಹುದೊಡ್ಡ ಆತಂಕದಿಂದ ಜಿಲ್ಲಾಡಳಿತವೇ ತತ್ತರಿಸಿ ಹೋಗಿದೆ.

ಕಳೆದ ಸಾಲಿನಲ್ಲಿ ಮಲೆನಾಡು ಭಾಗದಲ್ಲಿ ಉಂಟಾದ ತೀವ್ರ ಮಳೆ ಕೊರತೆ ಬಯಲು ಸೀಮೆಯ ನಾಡಾದ ಗದಗ ಜಿಲ್ಲೆಯನ್ನು ಕಾಡುತ್ತಿದೆ. ಜಿಲ್ಲೆಯ 4 ತಾಲೂಕುಗಳು ನೀರಿಗಾಗಿ ಆಶ್ರಯಿಸಿರುವುದು ಇದೇ ತುಂಗಭದ್ರಾ ನದಿಯನ್ನು. ಆದರೆ ಬ್ಯಾರೇಜ್‌ನಲ್ಲಿಯೇ ನೀರು ಖಾಲಿಯಾಗಿ ಜನರನ್ನು ಸಂಕಷ್ಟಕ್ಕೀಡು ಮಾಡಿದೆ.

10 ದಿನದಲ್ಲಿ ಪೂರ್ಣ ಖಾಲಿ: ಮುಂಡರಗಿ ತಾಲೂಕಿನ ಹಮ್ಮಿಗಿ ಬ್ಯಾರೇಜ್‌ನಲ್ಲಿನ ಡೆಡ್ ಸ್ಟೋರೇಜ್ ಅನ್ನು ಬಳಕೆ ಮಾಡಲು ಪ್ರಾರಂಭಿಸಿ, ಈಗಾಗಲೇ 20 ದಿನಗಳಾಗಿವೆ. ಸದ್ಯ ಲಭ್ಯವಿರುವ ನೀರು ಕೇವಲ 10 ದಿನಗಳಿಗೆ ಸಾಕಾಗಲಿದೆ. ಇನ್ನುಳಿದ ಅಲ್ಪ ಪ್ರಮಾಣದ ನೀರನ್ನು ಎತ್ತಲು ಸಾಧ್ಯವಿಲ್ಲ. ಮೀನು ಸೇರಿದಂತೆ ಅನೇಕ ಜಲಚರಕಗಳು ಸಾವನ್ನಪ್ಪುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ನೀರೆತ್ತುವುದು ಸ್ಥಗಿತಗೊಳ್ಳಲಿದೆ.

ನಾಲ್ಕು ತಾಲೂಕುಗಳಲ್ಲಿ ಸಮಸ್ಯೆ: ತುಂಗಭದ್ರಾ ನದಿ ನೀರನ್ನೇ ಆಶ್ರಯಿಸಿರುವ ಗದಗ, ಮುಂಡರಗಿ, ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ತಾಲೂಕಿನಲ್ಲಿ ಕುಡಿಯುವ ನೀರಿನ ಪರಿಸ್ಥಿತಿ ಅತ್ಯಂತ ಭೀಕರವಾಗಿದ್ದು, ಜನರು ಹನಿ ನೀರಿಗೂ ಪರದಾಡುತ್ತಿದ್ದಾರೆ. ಅದರಲ್ಲಿಯೂ ಜಿಲ್ಲಾ ಕೇಂದ್ರವಾದ ಗದಗ ನಗರದಲ್ಲಿನ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಸಾರ್ವಜನಿಕರು ಖಾಸಗಿ ಟ್ಯಾಂಕರ್‌ಗಳಿಗೆ ಮೊರೆ ಹೋಗಿದ್ದಾರೆ. ಅವರು ಕೇಳಿದಷ್ಟು ಹಣ ಕೊಟ್ಟರೂ ಒಂದು ಟ್ಯಾಂಕರ್ ನೀರು ಪಡೆಯಲು ಎರಡು ಮೂರು ದಿನ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಮೊದಲ ಬಾರಿಗೆ ಬರಿದು: ಜಿಲ್ಲೆಯ ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದ ಬಳಿ ತುಂಗಭದ್ರಾ ನದಿಗೆ ಅಡ್ಡವಾಗಿ ನಿರ್ಮಿಸಲಾಗಿರುವ ಬ್ಯಾರೇಜ್ 2012ರಲ್ಲಿ ಲೋಕಾರ್ಪಣೆಗೊಂಡು 12 ವರ್ಷ ಕಳೆದಿದೆ. ಬ್ಯಾರೇಜ್ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಬರಿದಾಗಿದೆ.

ಜಿಲ್ಲಾ ಕೇಂದ್ರದ ಜಲ ಮೂಲ: ತುಂಗಭದ್ರಾ ನದಿ ಕೇವಲ 4 ತಾಲೂಕುಗಳ ಗ್ರಾಮೀಣ ಪ್ರದೇಶಗಳು ಮಾತ್ರವಲ್ಲ, ಜಿಲ್ಲಾ ಕೇಂದ್ರವಾದ ಗದಗ ಬೆಟಗೇರಿ ಅವಳಿ ನಗರದ 2 ಲಕ್ಷಕ್ಕೂ ಅಧಿಕ ಜನಸಂಖ್ಯೆ ಅವಲಂಬಿಸಿರುವುದು ಇದೇ ತುಂಗಭದ್ರಾ ನದಿಯನ್ನು, ಒಂದೆಡೆ ದಿನಕಳೆದಂತೆ ಡ್ಯಾಂ ಖಾಲಿಯಾಗುತ್ತಿದೆ, ಮಳೆಯೂ ಆಗುತ್ತಿಲ್ಲ. ಕೊಳವೆ ಬಾವಿಗಳಲ್ಲಿನ ಅಂತರ್ಜಲ ತೀವ್ರವಾಗಿ ಕುಸಿದಿದ್ದು, ಜನರಿಗೆ ದಿಕ್ಕೇ ತೋಚದಂತಾಗಿದೆ.

ಹಮ್ಮಿಗಿ ಬ್ಯಾರೇಜ್ ನಲ್ಲಿ ನೀರು ಖಾಲಿಯಾಗಿದೆ, ಭದ್ರಾ ಜಲಾಶಯದಿಂದ ನೀರು ಹರಿಸುವ ನಿಟ್ಟಿನಲ್ಲಿ ಉಸ್ತುವಾರಿ ಸಚಿವರು ಚರ್ಚಿಸಿ, ಕ್ರಮ ತೆಗೆದುಕೊಂಡಿದ್ದಾರೆ. ಈಗಾಗಲೇ ನಾವು ಗ್ರಾಮೀಣ ಪ್ರದೇಶಗಳಿಗೆ ಕೊಳವೆಬಾವಿ ಹಾಗೂ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಕ್ರಮ ತೆಗೆದುಕೊಂಡಿದ್ದೇವೆ. ಎಲ್ಲ ಅಧಿಕಾರಿಗಳಿಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದ್ದಾರೆ.

PREV

Recommended Stories

ಕುಕ್ಕೆ ಸುಬ್ರಹ್ಮಣ್ಯದಲ್ಲಿ 40 ಸೇವೆಗಳ ದರ ಪರಿಷ್ಕರಣೆ
ಟಾಕ್ಸಿಕ್‌ ಮುಂಬೈ ಶೂಟ್‌ ಮುಗಿಸಿ ಲಂಡನ್‌ಗೆ ಹಾರಿದ ಯಶ್‌