2025ರಲ್ಲಿ ಹಸನಾಗದ ಹಾವೇರಿ ರೈತರ ಬದುಕು, ಮತ್ತದೇ ಗೋಳು

KannadaprabhaNewsNetwork |  
Published : Dec 31, 2025, 02:00 AM IST
30ಎಚ್‌ವಿಆರ್2, 2ಎ, 2ಬಿ, 2ಸಿ | Kannada Prabha

ಸಾರಾಂಶ

ಮುಂಗಾರು ಹಂಗಾಮಿನಲ್ಲಿ ಬಿಟ್ಟು ಬಿಡದೇ ಸುರಿದ ಮಳೆ, ಹತ್ತಾರು ಸಾವಿರ ಹೆಕ್ಟೇರ್ ಬೆಳೆ ಹಾನಿ, ಅಷ್ಟಿಷ್ಟು ಕೈಗೆ ಬಂದ ಮೆಕ್ಕೆಜೋಳದ ದರ ಕುಸಿತ, ಬೀದಿಗಿಳಿದು ಹೋರಾಡಿದ ಅನ್ನದಾತರು, ಬಳಿಕ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭ.

ನಾರಾಯಣ ಹೆಗಡೆ

ಹಾವೇರಿ:ಮುಂಗಾರು ಹಂಗಾಮಿನಲ್ಲಿ ಬಿಟ್ಟು ಬಿಡದೇ ಸುರಿದ ಮಳೆ, ಹತ್ತಾರು ಸಾವಿರ ಹೆಕ್ಟೇರ್ ಬೆಳೆ ಹಾನಿ, ಅಷ್ಟಿಷ್ಟು ಕೈಗೆ ಬಂದ ಮೆಕ್ಕೆಜೋಳದ ದರ ಕುಸಿತ, ಬೀದಿಗಿಳಿದು ಹೋರಾಡಿದ ಅನ್ನದಾತರು, ಬಳಿಕ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭ.

ಹೀಗೆ ಜಿಲ್ಲೆಯ ರೈತರದ್ದು ವರ್ಷದುದ್ದಕ್ಕೂ ಹೋರಾಟ, ಗೋಳಿನದ್ದೇ ಕತೆ. ಆದರೂ ಹೊಸ ನಿರೀಕ್ಷೆ, ಭರವಸೆಗಳನ್ನು ಇಟ್ಟುಕೊಂಡು ಹೊಸ ವರ್ಷದ ಸ್ವಾಗತಕ್ಕೆ ಜಿಲ್ಲೆಯ ರೈತರು ಸೇರಿದಂತೆ ಜನತೆ ಅಣಿಯಾಗುತ್ತಿದ್ದಾರೆ.

ಯಥಾಪ್ರಕಾರ ಈ ವರ್ಷದುದ್ದಕ್ಕೂ ರೈತರು ಅತಿವೃಷ್ಟಿಯಿಂದ ಬೆಳೆ ಹಾನಿ, ಮನೆ ಹಾನಿಯಾಗಿ ತೀವ್ರ ಸಂಕಷ್ಟ ಎದುರಿಸಿದರು. ತಮ್ಮ ಬೇಡಿಕೆಗಳ ಈಡೇರಿಕೆಗೆ ಅನ್ನದಾತರು ಹಗಲು-ರಾತ್ರಿ ಎನ್ನದೇ ಧರಣಿ ನಡೆಸಿದರೂ ಸಿಕ್ಕಿದ್ದು ಭರವಸೆ ಅಷ್ಟೇ. ಈ ವರ್ಷಕ್ಕೆ ವಿದಾಯ ಹೇಳುತ್ತಿರುವ ಹೊತ್ತಿನಲ್ಲಿ ಜಿಲ್ಲೆಯಲ್ಲಿ ನಡೆದು ಹೋದ ಹತ್ತು ಹಲವು ಸಂಗತಿಗಳನ್ನು ನಮ್ಮ ಓದುಗರಿಗೆ ನೆನಪಿಸುವ ಪುಟ್ಟ ಪ್ರಯತ್ನ ಮಾಡುತ್ತಿದ್ದೇವೆ. ಅತಿವೃಷ್ಟಿಗೆ ಬೆಳೆ, ಮನೆ ಹಾನಿ: ಮುಂಗಾರು ಮಳೆ ಅಬ್ಬರಿಸಿದ ಪರಿಣಾಮ ರೈತರು ಹೈರಾಣಾಗಿದ್ದು, ಜಿಲ್ಲಾದ್ಯಂತ 18 ಸಾವಿರ ಹೆಕ್ಟೇರ್‌ಗೂ ಹೆಚ್ಚು ಬೆಳೆ ಹಾನಿಯಾಗಿದೆ. ನಿರಂತರ ಮಳೆ ಸುರಿದಿದ್ದರಿಂದ ಮೆಕ್ಕೆಜೋಳ ಬೆಳೆಯಲ್ಲಿ ಮುಳ್ಳುಸಜ್ಜೆ ಕಳೆ ಹೆಚ್ಚಾಗಿ ರೈತರನ್ನು ಹೈರಾಣ ಮಾಡಿದ್ದಲ್ಲದೇ ಬೆಳೆಯು ಕುಂಠಿತಗೊಂಡು ನಷ್ಟ ಅನುಭವಿಸುವಂತಾಯಿತು. ಜಿಲ್ಲೆಯಲ್ಲಿ ಸುರಿದ ಮಳೆಯಿಂದ 248 ಮನೆಗಳಿಗೆ ಹಾಗೂ 5 ದನದ ಕೊಟ್ಟಿಗೆಗಳಿಗೆ ಹಾನಿ ಸಂಭವಿಸಿತು.

ಮೆಕ್ಕೆಜೋಳ ದರಕ್ಕಾಗಿ ಧರಣಿ:ಮೆಕ್ಕೆಜೋಳಕ್ಕೆ 3 ಸಾವಿರ ರು. ದರ ನಿಗದಿ ಹಾಗೂ ಮೆಕ್ಕೆಜೋಳ ಖರೀದಿ ಕೇಂದ್ರ ಶೀಘ್ರ ಪ್ರಾರಂಭಿಸುವಂತೆ ಆಗ್ರಹಿಸಿ ಸಾಮೂಹಿಕ ನಾಯಕತ್ವದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರೈತ ಮುಖಂಡರು ಸ್ಥಳೀಯ ಜಿಲ್ಲಾಡಳಿತ ಭವನದ ಎದುರು ಅಹೋರಾತ್ರಿ ಧರಣಿ ನಡೆಸಿದರು. ರೈತರ ಹೋರಾಟಕ್ಕೆ ಮಠಾಧೀಶರು, ನ್ಯಾಯವಾದಿಗಳು, ವಿವಿಧ ಘಟನೆಗಳು ಬೆಂಬಲ ಸೂಚಿಸಿದರು. ಸರ್ಕಾರ ರೈತರ ಪ್ರತಿಭಟನೆ ಗಂಭೀರವಾಗಿ ಪರಿಗಣಿಸಿದ ಹಿನ್ನೆಲೆ ಪ್ರತಿಭಟನೆ ಕೈಬಿಟ್ಟು, ರಾಷ್ಟ್ರೀಯ ಹೆದ್ದಾರಿ ತಡೆಗೆ ಕರೆ ನೀಡಿದರು. ಆಗ ಸರ್ಕಾರ ರೈತರೊಂದಿಗೆ ಮಾತನಾಡಿ ರೈತರ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ನೀಡಿದ್ದರಿಂದ ಪ್ರತಿಭಟನೆ ಕೈಬಿಡಲಾಯಿತು.ನಕಲಿ ಬೀಜ, ಗೊಬ್ಬರದ ಹಾವಳಿ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ಬಿತ್ತನೆ ಬೀಜದ ಜೊತೆಗೆ ರಸಗೊಬ್ಬರಕ್ಕೆ ರೈತರಿಂದ ಬೇಡಿಕೆ ಹೆಚ್ಚಾಯಿತು. ನಿರೀಕ್ಷಿಸಿದಷ್ಟು ರಸಗೊಬ್ಬರ ಸಿಗದ ಹಿನ್ನೆಲೆಯಲ್ಲಿ ರೈತರು ಗೊಬ್ಬರದ ಅಂಗಡಿಗಳಿಗೆ ಅಲೆದಾಡುವಂತಾಯಿತು. ಡಿಎಪಿ ಮತ್ತು ಯೂರಿಯಾ ರಸಗೊಬ್ಬರಕ್ಕೆ ರೈತರು ದುಂಬಾಲು ಬಿದಿದ್ದರಿಂದ ನೂಕು ನುಗ್ಗಲು, ತಳ್ಳಾಟದ ಘಟನೆಗಳು ನಡೆದವು. ನಕಲಿ ಬೀಜ, ಗೊಬ್ಬರ ಹಾವಳಿಯೂ ವಿಪರೀತವಾಗಿತ್ತು.ರೈತರ ಆತ್ಮಹತ್ಯೆಯಲ್ಲಿ ಹಾವೇರಿ ಮುಂದೆ: ಕೃಷಿ ಪ್ರಧಾನ ಜಿಲ್ಲೆಯಲ್ಲಿ ಅತಿವೃಷ್ಟಿ, ಅನಾವೃಷ್ಟಿಯಿಂದ ರೈತರು ಹೈರಾಣಾಗಿದ್ದಾರೆ. ಸಾಲ ಮಾಡಿ ಬೆಳೆ ಬೆಳೆದಿದ್ದ ರೈತರಿಗೆ ಫಸಲು ಕೈಸೇರದೇ ನಷ್ಟ ಅನುಭವಿಸಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಪ್ರಸಕ್ತ ವರ್ಷ ಜಿಲ್ಲೆಯಲ್ಲಿ 35 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದರಲ್ಲಿ 9 ಪ್ರಕರಣಗಳು ತಿರಸ್ಕೃತಗೊಂಡಿವೆ. ಉಳಿದ 26 ರೈತ ಆತ್ಮಹತ್ಯೆಗಳನ್ನು ಪರಿಶೀಲಿಸಿ, ಅದರಲ್ಲಿ 15 ರೈತರಿಗೆ ಈಗಾಗಲೇ ಪರಿಹಾರ ನೀಡಲಾಗಿದೆ. ಉಳಿದ ಪ್ರಕರಣಗಳ ಪರಿಶೀಲನೆ ನಡೆದಿದೆ. ಸ್ವಾತಿ ಕೊಲೆ ಪ್ರಕರಣ: ಮದುವೆ ವಿಚಾರವಾಗಿ ರಾಣಿಬೆನ್ನೂರಿನ ಆಸ್ಪತ್ರೆಯೊಂದರ ಶುಶ್ರೂಷಕಿ ಸ್ವಾತಿ ಬ್ಯಾಡಗಿ (22) ಅವರನ್ನು ಕೊಲೆ ಮಾಡಿ ತುಂಗಭದ್ರಾ ನದಿಗೆ ಮೃತದೇಹ ಎಸೆದಿದ್ದ ಪ್ರಕರಣ ರಾಜ್ಯದ ಗಮನ ಸೆಳೆದಿತ್ತು. ಈ ಪ್ರಕರಣದ ಆರೋಪದಡಿ ಮೂವರನ್ನು ಪೊಲೀಸರು ಬಂಧಿಸಿದರು.ಹೆಚ್ಚಿದ ರಸ್ತೆ ಅಪಘಾತ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಬಳಿ ಕಂದಕಕ್ಕೆ ಲಾರಿ ಉರುಳಿಬಿದ್ದು ಸಂಭವಿಸಿದ ಅಪಘಾತದಲ್ಲಿ ಸವಣೂರಿನ 14 ಮಂದಿ ವ್ಯಾಪಾರಿಗಳು ಮೃತಪಟ್ಟರು. ಮೋಟೆಬೆನ್ನೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ-ಐಷಾರಾಮಿ ಕಾರಿನ ನಡುವೆ ಸಂಭವಿಸಿದ್ದ ಅಪಘಾತದಲ್ಲಿ 6 ಜನ ಸ್ಥಳದಲ್ಲೇ ಮೃತಪಟ್ಟಿದ್ದರು. ರಾಣೆಬೆನ್ನೂರು ತಾಲೂಕಿನ ಕಾಕೋಳ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್‌ನ ಟ್ರೇಲರ್‌ಗೆ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ 5 ಜನರು ಮೃತಪಟ್ಟಿದ್ದರು. ಕಳೆಗುಂದಿದ ಹೋರಿ ಹಬ್ಬ: ದೀಪಾವಳಿ ಹಬ್ಬದ ದಿನದಂದು ನಡೆದ ಹೋರಿ ಬೆದರಿಸುವ ಸ್ಪರ್ಧೆ ಹಾಗೂ ಹೋರಿ ಮೆರವಣಿಗೆ ಸಂದರ್ಭದಲ್ಲಿ ಹೋರಿಗಳು ಗುದ್ದಿ ಜಿಲ್ಲೆಯಲ್ಲಿ ನಾಲ್ವರು ಮೃತಪಟ್ಟಿದ್ದರು. ಹೀಗಾಗಿ ಈ ಬಾರಿ ಜಿಲ್ಲೆಯಲ್ಲಿ ಹೋರಿ ಹಬ್ಬಕ್ಕೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತು. ಪರಿಣಾಮ ಪ್ರತಿವರ್ಷ ತಿಂಗಳುಗಟ್ಟಲೇ ನಡೆಯುತ್ತಿದ್ದ ಹೋರಿ ಬೆದರಿಸುವ ಸ್ಪರ್ಧೆಗಳು ಈ ಬಾರಿ ಕಳೆಗುಂದಿತ್ತು. ಸಿಎಂಗೆ ಮಾಂಗಲ್ಯ ಪೋಸ್ಟ್: ಜಿಲ್ಲೆಯಲ್ಲಿ ಫೈನಾನ್ಸ್ ಕಂಪನಿ ಪ್ರತಿನಿಧಿಗಳಿಂದ ಕಿರುಕುಳ ಹೆಚ್ಚಾಗಿದ್ದು, ಪತಿಯಂದಿರಿಗೆ ಬೆದರಿಕೆಗಳು ಬರುತ್ತಿವೆ. ಕಿರುಕುಳ ತಪ್ಪಿಸಿ ಪತಿಯಂದಿರನ್ನು ರಕ್ಷಿಸಿ ನಮ್ಮ ಮಾಂಗಲ್ಯ ಉಳಿಸಬೇಕು'''''''' ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದ ಮಹಿಳೆಯರು, ತಮ್ಮ ಮಾಂಗಲ್ಯ ಸರದ ಸಮೇತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಕಳುಹಿಸಿದರು. ನಗರದ ಅಂಚೆ ಕಚೇರಿ ಎದುರು ಸೇರಿದ್ದ ಮಹಿಳೆಯರು, ಫೈನಾನ್ಸ್ ಕಂಪನಿಗಳ ವಿರುದ್ಧ ಘೋಷಣೆ ಕೂಗಿದರು. ಮನವಿ ಪತ್ರದ ಜೊತೆಯಲ್ಲಿ ಮಾಂಗಲ್ಯ ಸರವನ್ನು ಲಗತ್ತಿಸಿ, ಅಂಚೆ ಪೆಟ್ಟಿಗೆಗೆ ಹಾಕಿದ್ದರು. ಈ ಸುದ್ದಿ ಕೂಡ ರಾಜ್ಯಮಟ್ಟದ ಗಮನ ಸೆಳೆದಿತ್ತು. ಗ್ಯಾಂಗ್‌ ರೇಪಿಸ್ಟ್‌ಗಳ ಗಡಿಪಾರು: ಹಾನಗಲ್ಲ ಸಮೀಪದ ನಾಲ್ಕರ ಕ್ರಾಸ್ ಬಳಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳಾದ ಏಳು ಜನರನ್ನು ಹಾವೇರಿ ಜಿಲ್ಲೆಯಿಂದ ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಲಾಯಿತು.

ರಾಜಕೀಯವಾಗಿ ಅಷ್ಟೇನು ಮಹತ್ವದ ಬೆಳವಣಿಗೆಗಳು, ಬದಲಾವಣೆ ನಡೆಯಲಿಲ್ಲ, ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದರೂ ಯಾರಿಗೂ ಮಂತ್ರಿಭಾಗ್ಯ ಸಿಗಲಿಲ್ಲ.ಹಾವೇರಿ ಹಾಲು ಒಕ್ಕೂಟದ ಆಡಳಿತ ಮಂಡಳಿಗೆ ನಡೆದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಿದರು. ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ಪ್ರವಾಸ ಕೈಗೊಂಡು 28 ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿ ವಿವಿಧ ಪ್ರಕರಣಗಳಲ್ಲಿ ಸುಮೋಟೋ ಕೇಸ್‌ ದಾಖಲಿಸಿದರು. ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ, ಬಸ್ ನಿಲ್ದಾಣ, ತರಕಾರಿ ಮಾರುಕಟ್ಟೆ, ತಹಸೀಲ್ದಾರ್ ಕಚೇರಿ ಸೇರಿದಂತೆ ವಿವಿಧ ಕಚೇರಿಗಳಿಗೆ ಭೇಟಿ ನೀಡಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು. ಆದರೆ, ಆಡಳಿತ ವ್ಯವಸ್ಥೆಯಲ್ಲಿ ಪರಿಣಾಮ ಬೀರಿದಂತೆ ಕಾಣುತ್ತಿಲ್ಲ.ಹಾವೇರಿಯಲ್ಲಿ ವಂದೇ ಭಾರತ್ ನಿಲುಗಡೆ: ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾಗಿದ್ದ ಧಾರವಾಡ-ಬೆಂಗಳೂರು ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಹಾವೇರಿಯಲ್ಲಿ ನಿಲುಗಡೆಗೆ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, ಸಂಸದ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದರು. ಇದರಿಂದ ಜಿಲ್ಲೆಯ ಜರಿಗೆ ಅನುಕೂಲವಾಗಿದೆ. ಕೇಂದ್ರ ಲೋಕಸೇವಾ ಆಯೋಗದ 2024ನೇ ಸಾಲಿನ ದೇಶದ ಅತ್ಯುನ್ನತ ನಾಗರಿಕ ಸೇವಾ ಪರೀಕ್ಷೆಯಲ್ಲಿ ರಾಣಿಬೆನ್ನೂರ ತಾಲೂಕಿನ ಕೋಡಿಯಾಲ ಹೊಸಪೇಟೆ ವೈದ್ಯ ಡಾ. ಸಚಿನ್​ ಬಸವರಾಜ ಗುತ್ತೂರ್ ದೇಶಕ್ಕೆ 41ನೇ ರ‍್ಯಾಂಕ್ ಪಡೆದು ಸಾಧನೆ ತೋರಿದರು. ಬ್ಯಾಡಗಿ ತಾಲೂಕು ಮೋಟೆಬೆನ್ನೂರ ಮೂಲದ, ನಿವೃತ್ತ ತೋಟಗಾರಿಕೆ ಇಲಾಖೆ ಅಪರ ನಿರ್ದೇಶಕ ಡಾ.ಎಸ್.ವಿ.ಹಿತ್ತಲಮನಿ ಅವರಿಗೆ 2025ನೇ ಸಾಲಿನ ಕೃಷಿ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತು. ಕೃಷಿ ಕ್ಷೇತ್ರದಲ್ಲಿನ ಇವರ ಸೇವೆ ಪರಿಗಣಿಸಿ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ.

ಹಾವೇರಿಯಲ್ಲಿ ಆಧ್ಯಾತ್ಮ ಅಲೆ: ಮರಿ ಕಲ್ಯಾಣ ಖ್ಯಾತಿಯ ಹಾವೇರಿ ನಗರವು ವರ್ಷದ ಕೊನೆಯಲ್ಲಿ ಆಧ್ಯಾತ್ಮಿಕ ಅಲೆಗೆ ಸಾಕ್ಷಿಯಾಯಿತು. ಡಿಸೆಂಬರ್ ತಿಂಗಳಲ್ಲಿ ಹುಕ್ಕೇರಿಮಠದ ಜಾತ್ರಾಮಹೋತ್ಸವ, ಜೈನ ಸಮುದಾಯದ ಬೃಹತ್ ಸಿದ್ಧಚಕ್ರ ಆರಾಧನಾ ಮಹೋತ್ಸವ ಹಾಗೂ ಮುಸ್ಲಿಂ ಧರ್ಮದ ಧಾರ್ಮಿಕ ಕಾರ್ಯಕ್ರಮಗಳು,ಕ್ರಿಸ್‌ಮಸ್ ಆಚರಣೆ ಅದ್ಧೂರಿಯಾಗಿ ಜರುಗಿದವು. 2025ರಲ್ಲೂ ಜಿಲ್ಲೆಯವರಿಗೆ ಮಂತ್ರಿ ಭಾಗ್ಯವಿಲ್ಲ: ಶಿಗ್ಗಾಂವಿ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದ್ದರಿಂದ ಜಿಲ್ಲೆಯ ಆರೂ ವಿಧಾನಸಭಾ ಕ್ಷೇತ್ರಗಳು ಆಡಳಿತಾರೂಢ ಪಕ್ಷದ ಕೈವಶವಾಯಿತು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಸಕರಿಗೆ ಮಂತ್ರಿ ಭಾಗ್ಯ ಸಿಗುವ ನಿರೀಕ್ಷೆ ಎಲ್ಲರಲ್ಲಿತ್ತು. 6 ಕಾಂಗ್ರೆಸ್ ಶಾಸಕರಿದ್ದರೂ ಯಾರಿಗೂ ಸಚಿವ ಸಂಪುಟ ಸೇರುವ ಭಾಗ್ಯ ಕೂಡಿ ಬಂದಿಲ್ಲ. ಹಿರಿಯ ಶಾಸಕರಾದ ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ, ವಿಪ ಮುಖ್ಯಸಚೇತಕ ಸಲೀಂ ಅಹ್ಮದ್ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದು, 2026ರಲ್ಲಿ ಸಚಿವ ಸಂಪುಟ ಸೇರುವ ನಿರೀಕ್ಷೆಯಲ್ಲಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ ವಸತಿ ವ್ಯವಸ್ಥೆ ಕಲ್ಪಿಸಿದರೆ ಕೋರ್ಟ್‌ಗೆ: ಮುತಾಲಿಕ್‌
ಗುರುರಾಜ್ ಹೆಬ್ಬಾರ್ ಸ್ಮರಣಾರ್ಥ ರಕ್ತದಾನ ಶಿಬಿರ