ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ಇತ್ತೀಚಿನ ದಿನದಲ್ಲಿ ಎಲ್ಲಾ ರಂಗದಲ್ಲೂ ಸ್ಪರ್ಧೆ ತೀವ್ರವಾಗಿದೆ. ಅದರಲ್ಲೂ ಛಾಯಾಗ್ರಾಹಕರ ನಡುವೆ ತೀವ್ರ ಪೈಪೋಟಿ ಇದೆ. ನೀವು ತೆಗೆಯುವ ಪೋಟೋ ನೋಡಿಯೇ ನಿಮಗೆ ಹೆಚ್ಚಿನ ಆರ್ಡರ್ ಸಿಗುವಂತೆ ನೀವು ಪೋಟೊಗ್ರಫಿಯಲ್ಲಿ ನೈಪುಣ್ಯ ಬೆಳೆಸಿಕೊಳ್ಳಬೇಕು ಎಂದು ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಎಚ್. ವಿ. ಸುರೇಶ್ ಕುಮಾರ್ ಸಲಹೆ ನೀಡಿದರು. ಪಟ್ಟಣದ ಹೌಸಿಂಗ್ ಬೋರ್ಡ್ ಬಡಾವಣೆಯ ಶ್ರೀ ಸಿಂಗಮ್ಮ ದೇವಿ ಕಲ್ಯಾಣ ಮಂಟಪದಲ್ಲಿ ತಾ. ಛಾಯಾಗ್ರಾಹಕರ ಸಂಘದ ವತಿಯಿಂದ ಆಯೋಜಿಸಿದ್ದ ೧೮೭ನೇ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಸ್ನೇಹ, ಪ್ರೀತಿ ಹಾಗೂ ನಂಬಿಕೆಗೆ ಧಕ್ಕೆ ಆಗದಂತೆ ವೃತ್ತಿಯಲ್ಲಿ ತೊಡಗಿಸಿಕೊಳ್ಳಿ ಜತೆಗೆ ನಿಮ್ಮಗಳ ನಡುವೆ ಆರೋಗ್ಯಕರ ರೀತಿಯಲ್ಲಿ ವೃತ್ತಿಯಲ್ಲಿ ಪೈಪೋಟಿ ಇರಲಿ, ಎಂದರು. ಸಂಘದ ಗೌರವಾಧ್ಯಕ್ಷ ಧನ್ಯಕುಮಾರ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ನಮ್ಮ ರಾಜ್ಯಕ್ಕೆ ಬೇರೆ, ಬೇರೆ, ರಾಜ್ಯಗಳಿಂದ ಛಾಯಾಗ್ರಾಹಕರು ಬರುತ್ತಿದ್ದು, ನಮಗೆ ಕೆಲಸ ಇಲ್ಲದಂತಾಗುತ್ತಿದೆ. ಇದಕ್ಕೆ ಕಾರಣ ಅವರುಗಳು ಆಧುನಿಕ ತಂತ್ರಜ್ಞಾನದ ಬಗ್ಗೆ ಹೆಚ್ಚು ತಿಳಿದುಕೊಂಡು ಒಳ್ಳೆಯ ಕ್ಯಾಮರಾಗಳನ್ನು ಬಳಸಿ ತಮ್ಮ ವ್ಯಾಪಾರವನ್ನು ಹೆಚ್ಚಿಸಿಕೊಂಡಿದ್ದಾರೆ. ನಾವೂ ಕೂಡ ಆಧುನಿಕ ತಂತ್ರಜ್ಞಾನ, ಅತ್ಯುತ್ತಮ ಕ್ಯಾಮರಾ ಬಗ್ಗೆ ತಿಳಿದುಕೊಂಡು ನಾವೂ ಕೂಡ ಅಪ್ಡೇಟ್ ಆಗಬೇಕು ಎಂದರು. ಛಾಯಾಗ್ರಾಹಕರ ಸಂಘ ರಾಜ್ಯ, ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಅತ್ಯಂತ ಕ್ರಿಯಾಶೀಲವಾಗಿದೆ. ನಮ್ಮ ಸಂಘದ ಸದಸ್ಯರು ಒಗ್ಗಟ್ಟಾಗಿದ್ದರೆ ನಾವೆಲ್ಲಾ ನಮ್ಮ ಗೌರವವನ್ನು ಹೆಚ್ಚಿಸಿಕೊಳ್ಳಬಹುದು ಎಂದರು. ತಾಲೂಕಿನಲ್ಲಿ ಮೂವರು ಮಹಿಳೆಯರೂ ಸೇರಿ ೧೨೫ ಜನ ಸದಸ್ಯರಿದ್ದಾರೆ ಎಂದು ಮಾಹಿತಿ ನೀಡಿದರು. ಪ್ರಧಾನ ಕಾರ್ಯದರ್ಶಿ ಗೋವಿಂದರಾಜು ಕಾರ್ಯಕ್ರಮ ನಿರೂಪಿಸಿದರು ಹಾಗೂ ತಾಲೂಕು ಛಾಯಾಗ್ರಾಹಕರಿಗೆ ಐಡಿ ಕಾರ್ಡ್ ವಿತರಿಸಲಾಯಿತು.ಚನ್ನರಾಯಪಟ್ಟಣದ ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಮಂಜುನಾಥ್, ಹೊ.ನ.ಪುರ ತಾಲೂಕು ಅಧ್ಯಕ್ಷ ಚಿರಂಜೀವಿ, ಆಲೂರು ತಾಲೂಕು ಅಧ್ಯಕ್ಷ ನಿಲೇಶ್, ಅರಕಲಗೂಡು ತಾಲೂಕು ಅಧ್ಯಕ್ಷ ಪ್ರಶಾಂತ್, ಹಿರಿಯ ಛಾಯಾಗ್ರಾಹಕ ಹಾಗೂ ಪುರಸಭೆ ಮಾಜಿ ಸದಸ್ಯ ರಂಗನಾಥ್, ನರಸಿಂಹ, ಅಶೋಕ್, ಹಳ್ಳಿಮೈಸೂರು ರಘು ಮಾತನಾಡಿದರು. ವಿನಾಯಕ, ಅಭಿಲಾಷ್, ಪ್ರಕಾಶ್, ಶಾಂತರಾಜು, ಯೋಗೇಶ್, ಗೋವಿಂದರಾಜು, ರವಿರಾಮ್, ಸತ್ಯಾನಂದ, ಆರವಿಂದ್, ಯಶವಂತ್, ಇತರರು ಇದ್ದರು.