ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ
ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಇಂದಿರಾ ಕ್ಯಾಂಟೀನ್‍ನಲ್ಲಿ ರಿಯಾಯಿತಿ ದರದಲ್ಲಿ ಉತ್ತಮ ಗುಣಮಟ್ಟದ ಊಟ ತಿಂಡಿ ಕೇವಲ ಒಂದು ತಿಂಗಳಲ್ಲಿ ಸಿಗಲಿದೆ ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ತಿಳಿಸಿದರು.ಪಟ್ಟಣದ ತಹಸೀಲ್ದಾರ್ ವಸತಿ ಗೃಹದ ಆವರಣದಲ್ಲಿ ಸುಮಾರು 80 ಲಕ್ಷ ರು.ಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಇಂದಿರಾ ಕ್ಯಾಂಟೀನ್ ಕಟ್ಟಡ ನಿರ್ಮಾಣ ಕಾಮಗಾರಿಗೆ ಪೂಜೆ ಸಲ್ಲಿಸಿ ಮಾತನಾಡಿ, ತಾಲೂಕಿನ ಜನರ ಬಹುದಿನಗಳ ಬೇಡಿಕೆಯಂತೆ ಇಲ್ಲಿ 80 ಲಕ್ಷ ರು.ಗಳ ವೆಚ್ಚದಲ್ಲಿ ಇಂದಿರಾ ಕ್ಯಾಂಟೀನ್‍ನ್ನು ಒಂದು ತಿಂಗಳೊಳಗೆ ಪ್ರಾರಂಭಿಸಲಾಗುವುದು. ಈ ಕ್ಯಾಂಟೀನಲ್ಲಿ ಬೆಳಗ್ಗೆ ಉಪಹಾರ, ಮಧ್ಯಾಹ್ನ ಮತ್ತು ಸಂಜೆ ಊಟ ರಿಯಾಯಿತಿ ದರದಲ್ಲಿ ಸಿಗಲಿದೆ ಎಂದರು.
ತಹಸೀಲ್ದಾರ್ ನಿವಾಸದ ಬಳಿ ಸ್ಥಾಪನೆಪಟ್ಟಣದ ಎಸ್ ಬಿ ಎಂ ರಸ್ತೆಯಲ್ಲಿನ ಸಂತೆ ಮೈದಾನದಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭಕ್ಕೆ ಎಲ್ಲಾ ಸಿದ್ಧತೆ ನಡೆದಿತ್ತು. ಆದರೆ ಕೆಲವು ಕಾರಣಾಂತರಗಳಿಂದ ಕಾಮಗಾರಿ ನಿಲ್ಲಿಸಬೇಕಾಯಿತು. ನಂತರ ಕ್ಯಾಂಟೀನ್ ಪ್ರಾರಂಭಿಸಲು ಪಟ್ಟಣದ ವಿವಿಧ ಕಡೆಗಳಲ್ಲಿ ಜಾಗ ಹುಡುಕಾಟದಿಂದ ತಡವಾಗಿದೆ. ನಂತರ ತಹಸೀಲ್ದಾರ್ ವಸತಿ ಗೃಹದ ಆವರಣದಲ್ಲಿ ಕ್ಯಾಂಟೀನ್ ನಿರ್ಮಾಣಕ್ಕೆ ಜಾಗ ಸಿಕ್ಕಿದೆ. ಈ ನಿಟ್ಟಿನಲ್ಲಿ ಇನ್ನೂ ಕೇವಲ ಒಂದು ತಿಂಗಳ ಒಳಗೆ ಜನರಿಗೆ ಇಲ್ಲಿ ಊಟ ತಿಂಡಿ ಸಿಗಲಿದೆ ಎಂದರು.
ರೈತರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ದೆಹಲಿ ಚೆಲೋ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ರೈರನ್ನು ತಡೆಯುವಂತಹ ಕೆಲಸ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ರೈತರು ತಮ್ಮ ವಿವಿಧ ಬೇಡಿಕೆಗಳನ್ನು ಹಾಗೂ ಸಮಸ್ಯೆಗಳ ಬಗ್ಗೆ ಅಳಲು ತೋಡಿಕೊಳ್ಳಲು, ಕಷ್ಟ ಸುಖಗಳನ್ನು ಹೇಳಿಕೊಳ್ಳಲು ದೆಹಲಿಗೆ ಬಂದಿದ್ದಾರೆ. ಆದರೆ ದೇಶದೊಳಕ್ಕೆ ನುಗ್ಗುವ ಭಯೋತ್ಪಾದಕರಿಗೆ ತಡೆಯಲು ಬೇಲಿ, ಮುಳ್ಳಿನ ತಂತಿ ಹಾಕುವಂತೆ ನಮ್ಮ ದೇಶದ ಅನ್ನ ನೀಡುವ ರೈತರಿಗೆ ಬೇಲಿ, ಮುಳ್ಳಿನ ತಂತಿ ಹಾಕುವುದು ಎಷ್ಟು ಸರಿ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಇಲ್ಲರಿಗೂ ಪ್ರತಿಭಟಿಸುವ ಹಕ್ಕು ಇದೆ
ದೇಶದ ಪ್ರತಿಯೊಬ್ಬ ನಾಗರಿಕರಿಗೂ ಸಂವಿಧಾನಬದ್ಧವಾಗಿ ಪ್ರತಿಭಟಿಸುವ ಹಕ್ಕು ಇದೆ. ಈ ಹಕ್ಕನ್ನು ಕಿತ್ತುಕೊಳ್ಳುವ ಕೆಲಸ ಮಾಡಬಾರದು, ಆದರೆ ಕೇಂದ್ರ ಸರ್ಕಾರ ರೈತರ ಪ್ರತಿಭಟನೆಯ ಹಕ್ಕನ್ನು ಮೊಟಕುಗೊಳಿಸುತ್ತಿರುವುದು ದುರ್ದೈವ ಎಂದರು.ಪಟ್ಟಣದಲ್ಲಿ ನಡೆದ ಇಂದಿರಾ ಕ್ಯಾಂಟೀನ್ ಕಾಮಗಾರಿಗೆ ಪೂಜಾ ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರು ಗೈರು ಹಾಜರಿಯಾಗಿರುವುದು ಕಾಣುತ್ತಿತ್ತು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಪ್ರಶಾಂತ್ ಕೆ ಪಾಟಿಲ್, ಪುರಸಭೆ ಮುಖ್ಯಾಧಿಕಾರಿ ರುದ್ರಮ್ಮ ಶರಣಪ್ಪ, ಪುರಸಭೆ ಸದಸ್ಯ ಗಡ್ಡಂ ರಮೇಶ್ ಮುಖಂಡರಾದ ಪಿ. ಮಂಜುನಾಥರೆಡ್ಡಿ, ಆಂಜನೇಯರೆಡ್ಡಿ, ಎ.ವಿ. ಪೂಜಪ್ಪ ಮತ್ತಿತರರು ಇದ್ದರು.