ಬೇಲೂರಲ್ಲಿ ಪ್ರೇಯಸಿ ಮದುವೆಗೆ ಪ್ರಿಯಕರನಿಂದ ಅಡ್ಡಿ: ಪ್ರೇಮಿಯೊಂದಿಗೇ ಮತ್ತೆ ವಿವಾಹ ನಿಶ್ಚಯ

KannadaprabhaNewsNetwork | Published : Mar 22, 2024 1:02 AM

ಸಾರಾಂಶ

ಭಗ್ನ ಪ್ರೇಮಿಯೊಬ್ಬ ಸಿನಿಮೀಯ ರೀತಿಯಲ್ಲಿ ಕಲ್ಯಾಣ ಮಂಟಪಕ್ಕೆ ನುಗ್ಗಿ ತನ್ನ ಪ್ರೇಯಸಿಯ ಕೊರಳಿಗೆ ವರ ಕಟ್ಟುತ್ತಿದ್ದ ತಾಳಿಯನ್ನು ಕಿತ್ತುಕೊಂಡು ಮಂಗಳ ಕಾರ್ಯಕ್ಕೆ ತಡೆಯೊಡ್ಡಿದ ಘಟನೆ ಬೇಲೂರಿನ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದಿದೆ.

ವಧುವಿನ ತಾಳಿ ಕಿತ್ತು ರಂಪ । ಮುರಿದ ಮದುವೆ

ಕನ್ನಡಪ್ರಭ ವಾರ್ತೆ ಬೇಲೂರು

ಭಗ್ನ ಪ್ರೇಮಿಯೊಬ್ಬ ಸಿನಿಮೀಯ ರೀತಿಯಲ್ಲಿ ಕಲ್ಯಾಣ ಮಂಟಪಕ್ಕೆ ನುಗ್ಗಿ ತನ್ನ ಪ್ರೇಯಸಿಯ ಕೊರಳಿಗೆ ವರ ಕಟ್ಟುತ್ತಿದ್ದ ತಾಳಿಯನ್ನು ಕಿತ್ತುಕೊಂಡು ಮಂಗಳ ಕಾರ್ಯಕ್ಕೆ ತಡೆಯೊಡ್ಡಿದ ಘಟನೆ ಪಟ್ಟಣದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದಿದೆ.

ಬೇಲೂರಿನ ತೇಜಸ್ವಿನಿ ಹಾಗೂ ಶಿವಮೊಗ್ಗ ಮೂಲದ ಪ್ರಮೋದ್‌ಕುಮಾರ್ ಮದುವೆ ಪಟ್ಟಣದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ನಿಗದಿಯಾಗಿತ್ತು. ವಧು-ವರರ ಕಡೆಯ ಬಂಧುಗಳು, ಆಪ್ತರು ಮದುವೆಯ ಸಂಭ್ರಮದಲ್ಲಿದ್ದರು. ಇನ್ನೇನು ಮಾಂಗಲ್ಯಧಾರಣೆ ಸಮಯದಲ್ಲಿ ವರ ತಾಳಿ ಕಟ್ಟಲು ಹೊರಟಾಗ ಪ್ರತ್ಯಕ್ಷನಾದ ಹಾಸನದ ಗವೇನಹಳ್ಳಿಯ ಯುವಕ ನವೀನ್ ತಾಳಿಯನ್ನು ಕಿತ್ತುಕೊಂಡಿದ್ದಾನೆ.

ತಾನು ಹಾಗೂ ವಧು ತೇಜಸ್ವಿನಿ ಪರಸ್ಪರ ಪ್ರೀತಿಸುತ್ತಿದ್ದು, ತನಗೇ ಮದುವೆ ಮಾಡಿಕೊಡಬೇಕು ಎಂದು ಪಟ್ಟುಹಿಡಿದಿದ್ದಾನೆ. ನವೀನ್‌ ಜತೆ ಸಂಬಂಧಿಕರೊಂದಿಗೆ ಮಾತಿನ ಚಕಮಕಿ ನಡೆದು ಉದ್ವಿಗ್ನ ವಾತಾವರಣ ಉಂಟಾಯಿತು.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ನವೀನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು. ಅತ್ತ ತಾನು ವಿವಾಹವಾಗಬೇಕಿದ್ದ ಯುವತಿಯ ಪ್ರೇಮ ಪ್ರಕರಣ ಬಯಲಾದ್ದರಿಂದ ವರ ಪ್ರಮೋದ್, ತೇಜಸ್ವಿನಿ ಕೈ ಹಿಡಿಯಲು ನಿರಾಕರಿಸಿದ್ದಾನೆ. ಇದರಿಂದ ವರನ ಕಡೆಯವರು ಕಲ್ಯಾಣ ಮಂಟಪ ಬಿಟ್ಟು ತೆರಳಿದರು.

ಪೊಲೀಸರು ನವೀನ್ ಹಾಗೂ ಯುವತಿಯ ಕುಟುಂಬದವರಿಂದ ಹೇಳಿಕೆ ಪಡೆದರು. ವರ ಪ್ರಮೋದ್ ಕುಟುಂಬದವರು ಮದುವೆ ಬೇಡವೆಂದು ಶಿವಮೊಗ್ಗಕ್ಕೆ ಹಿಂತಿರುಗಿದರು. ಈ ನಡುವೆ ಪ್ರೇಮಿ ನವೀನ್ ಕುಟುಂಬದವರು ಠಾಣೆಗೆ ಆಗಮಿಸಿದ್ದರು. ಇಬ್ಬರು ಕುಟುಂಬದವರ ಸಮಕ್ಷಮದ ನಡುವೆ ವಾದ ವಿವಾದ ನಡೆದು ಮುಂದಿನ ತಿಂಗಳಲ್ಲಿ ಇಬ್ಬರಿಗೂ ಮದುವೆ ಮಾಡಿಕೊಡಲು ತೀರ್ಮಾನವಾಗಿದೆ ಎಂದು ತಿಳಿದು ಬಂದಿದೆ.ಮದುವೆಗೆ ಅಡ್ಡಿಪಡಿಸಿದ ಪ್ರಿಯಕರ ನವೀನ್.

Share this article