ರಾಜ್ಯಪಾಲರ ನಡೆಯನ್ನು ಟೀಕಿಸುವ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಮೊದಲು ತಮ್ಮ ಪಕ್ಷದ ನಾಯಕರ ವರ್ತನೆ ಸರಿಯೇ ಎಂಬುದನ್ನು ನಾಡಿನ ಜನತೆ ಮುಂದೆ ಸ್ಪಷ್ಟಪಡಿಸಲಿ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ
ಮಂಗಳೂರು: ರಾಜ್ಯಪಾಲರ ನಡೆಯನ್ನು ಟೀಕಿಸುವ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಮೊದಲು ತಮ್ಮ ಪಕ್ಷದ ನಾಯಕರ ವರ್ತನೆ ಸರಿಯೇ ಎಂಬುದನ್ನು ನಾಡಿನ ಜನತೆ ಮುಂದೆ ಸ್ಪಷ್ಟಪಡಿಸಲಿ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದ್ದಾರೆ.
ಜಿಲ್ಲಾ ಗಣರಾಜ್ಯೋತ್ಸವದಲ್ಲಿ ಸಚಿವರು ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಮಾತನಾಡುವುದನ್ನು ಬಿಟ್ಟು ಆ ವೇದಿಕೆಯನ್ನು ರಾಜಕೀಯ ಭಾಷಣಕ್ಕೆ ಸೀಮಿತಗೊಳಿಸಿರುವುದು ಖೇದಕರ. ಕೇಂದ್ರ ಸರ್ಕಾರವು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಆಗುತ್ತಿದ್ದ ಸೋರಿಕೆ ತಡೆಗಟ್ಟುವುದಕ್ಕಾಗಿ ವಿಬಿ-ಜಿ ರಾಮ್ ಜಿ ಯೋಜನೆ ಜಾರಿಗೊಳಿಸಿದೆ. ಆದರೆ, ವಾಸ್ತವವನ್ನು ಒಪ್ಪಿಕೊಳ್ಳುವುದಕ್ಕೆ ಕಾಂಗ್ರೆಸಿಗರು ಸಿದ್ಧರಿಲ್ಲ. ಸುಳ್ಳಿನ ಸರಮಾಲೆ ಸೃಷ್ಟಿಸುವುದೇ ಕಾಂಗ್ರೆಸ್ ಸರ್ಕಾರದ ಕಾಯಕ ಹಾಗೂ ಅಜೆಂಡಾ ಆಗಿ ಬಿಟ್ಟಿದೆ. ಈ ಕಾರಣದಿಂದಲೇ ಸಚಿವ ದಿನೇಶ್ ಗುಂಡೂರಾವ್ ಅವರು ಗಣರಾಜ್ಯೋತ್ಸವ ವೇದಿಕೆಯನ್ನೇ ರಾಜಕೀಯವಾಗಿ ಬಳಸಿಕೊಂಡು ಗ್ರಾಮೀಣ ಭಾಗದ ಜನರ ಆರ್ಥಿಕತೆ ಬಲಪಡಿಸುವ ದೂರದೃಷ್ಟಿಯ ವಿಬಿ-ಜಿ ರಾಮ್ ಜಿ ಯೋಜನೆ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಇದು ಕಾಂಗ್ರೆಸಿಗರ ಬೌದ್ಧಿಕ ದಿವಾಳಿತನ ಹಾಗೂ ಅಭಿವೃದ್ಧಿ ವಿಚಾರಗಳಿಗೆ ಅಡ್ಡಗಾಲು ಹಾಕುವ ಮಾನಸಿಕತೆಯನ್ನು ತೋರಿಸುತ್ತದೆ ಎಂದು ಅವರು ಆರೋಪಿಸಿದ್ದಾರೆ.ರಾಜ್ಯಪಾಲರು ಕೇಂದ್ರ ಸರ್ಕಾರದ ಕಪಿಮುಷ್ಠಿಯಲ್ಲಿದ್ದಾರೆ ಎನ್ನುವ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕ್ಯಾ. ಚೌಟ, ಸಂವಿಧಾನ ಹಾಗೂ ಸಂವಿಧಾನಿಕ ಹುದ್ದೆಗಳಿಗೆ ಗೌರವ ಕೊಡದ ಸಚಿವರಿಂದ ಒಕ್ಕೂಟ ವ್ಯವಸ್ಥೆಯ ಬಗ್ಗೆ ಪಾಠ ಕಲಿಯಬೇಕಿಲ್ಲ. ಸದನದೊಳಗೆ ಅಧಿವೇಶನದ ವೇಳೆ ರಾಜ್ಯಪಾಲರು ಬಂದಾಗ ಕಾಂಗ್ರೆಸ್ ನಾಯಕರ ವರ್ತನೆ ಹೇಗಿತ್ತು ಎಂಬುದರ ಬಗ್ಗೆ ಪರಾಮರ್ಶಿಸಲಿ. ಹಾಗಾದರೆ, ಸದನದೊಳಗೆ ಐವನ್ ಡಿಸೋಜ ಅವರು ಕಾಂಗ್ರೆಸ್ ಹೈಕಮಾಂಡ್‌ನ ಸೂಚನೆ ಮೇರೆಗೆ ರಾಜ್ಯಪಾಲರನ್ನು ಅಡ್ಡಗಟ್ಟಿ ಅಗೌರವಿಸುವ ಪ್ರಯತ್ನ ನಡೆಸಿದ್ದಾರೆಯೇ? ರಾಜ್ಯಪಾಲರ ನಡೆ ಟೀಕಿಸುವ ಉಸ್ತುವಾರಿ ಸಚಿವರು ಮೊದಲು ತಮ್ಮ ಕಾಂಗ್ರೆಸ್ ನಾಯಕರ ವರ್ತನೆ ಎಷ್ಟು ಸರಿಯೇ ಎಂಬುದನ್ನು ನಾಡಿನ ಜನತೆ ಮುಂದೆ ಸ್ಪಷ್ಟಪಡಿಸಲಿ ಎಂದು ಕಿಡಿಕಾರಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.