ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪುರುಷರಿಗಿಂತ ಮಹಿಳಾ ಮತದಾರರೆ ಅಧಿಕ

KannadaprabhaNewsNetwork | Published : Jan 31, 2024 2:16 AM

ಸಾರಾಂಶ

ಜಿಲ್ಲೆಯ 5 ಕ್ಷೇತ್ರಗಳ ವಿಧಾನಸಭಾ ಕ್ಷೇತ್ರಗಳ ಆರು ತಾಲೂಕುಗಳಲ್ಲಿನ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ನಂತರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಜಿಲ್ಲಾದ್ಯಂತ 10,49,896 ಮಂದಿ ಮತದಾರರು ಇದ್ದಾರೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

2024 ರ ಮಾರ್ಚ್ ಅಥವಾ ಏಪ್ರಿಲ್ ನಲ್ಲಿ ಘೋಷಣೆಯಾಗಲಿರುವ ಲೋಕಸಭಾ ಚುನಾವಣೆಗೆ ಮತದಾನ ಮಾಡಲಿರುವ ಮತದಾರರ ಪರಿಷ್ಕೃತ ಮತದಾರರ ಪಟ್ಟಿಯನ್ನು ಜಿಲ್ಲಾಡಳಿತ ಪ್ರಕಟಿಸಿದ್ದು, ಜಿಲ್ಲೆಯಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಜಿಲ್ಲೆಯ 5 ಕ್ಷೇತ್ರಗಳ ವಿಧಾನಸಭಾ ಕ್ಷೇತ್ರಗಳ ಆರು ತಾಲೂಕುಗಳಲ್ಲಿನ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ನಂತರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಜಿಲ್ಲಾದ್ಯಂತ 10,49,896 ಮಂದಿ ಮತದಾರರು ಇದ್ದಾರೆ. ಇದರಲ್ಲಿ 5,18,151 ಪುರುಷ ಮತದಾರರು, 5,31,642 ಮಹಿಳಾ ಮತದಾರರು ಮತ್ತು 99 ಮಂದಿ ಇತರರು ಇದ್ದಾರೆ.

12,286 ಹೊಸ ಮತದಾರರು

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವೇಳೆ 18 ವರ್ಷ ತುಂಬಿದ 12,286 ಮಂದಿ ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ. ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ 2,032,ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ 2,397, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 2,593, ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ 2,340 ಮತ್ತು ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ 2,924 ಮಂದಿ ಸೇರ್ಪಡೆಗೊಂಡಿದ್ದಾರೆ. 11,691 ತಿದ್ದುಪಡಿಗಳು ಆಗಿದ್ದು, ಗೌ ರಿಬಿದನೂರು, ಚಿಕ್ಕಬಳ್ಳಾಪುರ ಮತ್ತು ಚಿಂತಾಮಣಿ ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚು ತಿದ್ದುಪಡಿಗಳಾಗಿವೆ. ಜಿಲ್ಲೆಯ ಮತದಾರರ ಲಿಂಗಾನುಪಾತದಲ್ಲಿ ಸಾವಿರ ಪುರುಷರಿಗೆ ಸರಾಸರಿ 1026 ಮಂದಿ ಮಹಿಳೆಯರು ಇದ್ದಾರೆ. ಅದರಲ್ಲಿ ಗೌರಿಬಿದನೂರಲ್ಲಿ 1,030, ಬಾಗೇಪಲ್ಲಿ ಕ್ಷೇತ್ರದಲ್ಲಿ 1032, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 1,036. ಶಿಡ್ಲಘಟ್ಟ ವಿಧಾನ ಸಭಾ ಕ್ಷೇತ್ರದಲ್ಲಿ 1,009, ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ 1032 ಲಿಂಗಾನುಪಾತ ಕಂಡುಬಂದಿದೆ.

11,978 ಮಂದಿ ಪಟ್ಟಿಯಿಂದ ಹೊರಕ್ಕೆಜಿಲ್ಲೆಯಲ್ಲಿ 5 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 11,978 ಮಂದಿ ಮತದಾರರಿಗೆ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ನಮೂನೆ-7ರಲ್ಲಿ ಮರಣ ಹೊಂದಿದೆ. ಹಾಗೂ ಮತದಾರರ ಪಟ್ಟಿಯಲ್ಲಿ ಎರಡು ಕಡೆ ಹೆಸರು ಹೊಂದಿದ ಕಾರಣಗಳಿಗೆ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವೇಳೆ ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ 2,416, ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ 2,508, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ2,795, ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ1,566 ಮತ್ತು ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ 2,693 ಮಂದಿಯನ್ನು ಮತದಾರರ ಪಟ್ಟಿಯಿಂದ ಕೈ ಬಿಡಲಾಗಿದೆ.ಲೋಕಸಭಾ ಕ್ಷೇತ್ರ ವ್ಯಾಪ್ತಿ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ 8 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 19,50,443 ಮತದಾರರು ಇದ್ದಾರೆ. ಇದರಲ್ಲಿ 9,80,641 ಮಹಿಳೆಯರು ಹಾಗೂ 9,69,538 ಪುರುಷರು ಹಾಗೂ ಇತರರು 264 ಮಂದಿ ಮತದಾರರು ಇದ್ದಾರೆ.

ಇವರಲ್ಲಿ ಬೆಂಗಳೂರು ನಗರ ಜಿಲ್ಲೆಯ ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ 4,45,861 ಮಂದಿ ಮತದಾರರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 2,16,824, ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 2,13,408, ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ 2,18,929, ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 2,35,907, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ 2,09,531, ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ 2,01,555 ಹಾಗೂ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ 2,08,428 ಮಂದಿ ಮತದಾರರು ಇದ್ದಾರೆ.

Share this article