ದಾವಣಗೆರೆಯಲ್ಲಿ ಕೊಡ ಹಿಡಿದು ಬೀದಿಗಿಳಿಯೋ ಸ್ಥಿತಿ ಇಲ್ಲ: ಮೇಯರ್‌

KannadaprabhaNewsNetwork | Published : Mar 23, 2024 1:01 AM

ಸಾರಾಂಶ

ನೀರಿನ ಸಮಸ್ಯೆ ಇಡೀ ರಾಜ್ಯದಲ್ಲೇ ಇದ್ದು, ದಾವಣಗೆರೆಯಲ್ಲಿ ಪಾಲಿಕೆ ವಿಪಕ್ಷ ಬಿಜೆಪಿಯವರು ಆರೋಪಿಸಿದಂತೆ ಕೊಡ ಹಿಡಿದು, ಬೀದಿಗೆ ಬರುವ ಪರಿಸ್ಥಿತಿಯಂತೂ ಇಲ್ಲ. ಸದ್ಯಕ್ಕೆ ಭದ್ರಾ ನಾಲೆಗೆ ಬಿಟ್ಟಿರುವ ನೀರನ್ನು ಟಿವಿ ಸ್ಟೇಷನ್ ಕೆರೆ, ಕುಂದುವಾಡ ಕೆರೆಗೆ ತುಂಬಿಸಿ, ನೀರು ಪೂರೈಸಲು ಪಾಲಿಕೆ ಬದ್ಧವಿದೆ ಎಂದು ಮೇಯರ್ ಬಿ.ಎಚ್. ವಿನಾಯಕ ಪೈಲ್ವಾನ್ ದಾವಣಗೆರೆಯಲ್ಲಿ ಹೇಳಿದರು.

ಕನ್ನಡಪ್ರಭ ವಾರ್ತೆ, ದಾವಣಗೆರೆ

ನೀರಿನ ಸಮಸ್ಯೆ ಇಡೀ ರಾಜ್ಯದಲ್ಲೇ ಇದ್ದು, ದಾವಣಗೆರೆಯಲ್ಲಿ ಪಾಲಿಕೆ ವಿಪಕ್ಷ ಬಿಜೆಪಿಯವರು ಆರೋಪಿಸಿದಂತೆ ಕೊಡ ಹಿಡಿದು, ಬೀದಿಗೆ ಬರುವ ಪರಿಸ್ಥಿತಿಯಂತೂ ಇಲ್ಲ. ಸದ್ಯಕ್ಕೆ ಭದ್ರಾ ನಾಲೆಗೆ ಬಿಟ್ಟಿರುವ ನೀರನ್ನು ಟಿವಿ ಸ್ಟೇಷನ್ ಕೆರೆ, ಕುಂದುವಾಡ ಕೆರೆಗೆ ತುಂಬಿಸಿ, ನೀರು ಪೂರೈಸಲು ಪಾಲಿಕೆ ಬದ್ಧವಿದೆ ಎಂದು ಮೇಯರ್ ಬಿ.ಎಚ್. ವಿನಾಯಕ ಪೈಲ್ವಾನ್ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದುಗ್ಗಮ್ಮನ ಜಾತ್ರೆ ಹಾಗೂ ಬೇಸಿಗೆ ದಿನಗಳ ಹಿನ್ನೆಲೆ ಮುನ್ನೆಚ್ಚರಿಕೆಯಾಗಿ ಅಧಿಕಾರಿಗಳ ಸಭೆ ನಡೆಸಿ, ವ್ಯವಸ್ಥಿತವಾಗಿ ನೀರು ಪೂರೈಸಲು ಕ್ರಮ ಕೈಗೊಂಡಿದ್ದೇವೆ. ಜಾತ್ರೆ ದಿನಗಳಲ್ಲಿ ನೀರಿನ ಸಮಸ್ಯೆ ಆಗದಂತೆ ಹಳೇ ಭಾಗದಲ್ಲಿ ಮೂರು ದಿನ ಸಮರ್ಪಕ ನೀರು ಪೂರೈಸಿದ್ದೇವೆ ಎಂದರು.

ದಾವಣಗೆರೆ ಹಳೇ ಭಾಗಕ್ಕೆ ಜಾತ್ರೆಗಾಗಿ ಸೋಮವಾರದಿಂದ ಬುಧವಾರದವರೆಗೆ ನೀರು ಪೂರೈಸಿದ್ದೇವೆ. ಎಲ್ಲಿಯೂ ನೀರಿನ ಸಮಸ್ಯೆ ಕಾಡಲಿಲ್ಲ. ಜಿಲ್ಲಾ ಕೇಂದ್ರದಲ್ಲಿ 1110 ಕೊಳ‍ವೆಬಾವಿಗಳೂ ಇದ್ದು, ಇವುಗಳ ಮೂಲಕವೂ ನೀರು ಪೂರೈಸಲಾಗಿದೆ. 300-400 ಕೊಳವೆ ಬಾವಿಗಳಲ್ಲಿ ಅಂತರ್ಜಲ ಕೆಳಗೆ ಹೋಗಿದ್ದು, 40 ಕಡೆ ರೀ ಬೋರ್ ಮಾಡಿಸಲು ಡಿಸಿಗೆ ಮನವಿ ಮಾಡಿದ್ದೇವೆ. ಈಗ ಮಾ.19ರಿಂದ ಭದ್ರಾ ಜಲಾಶಯದಿಂದ ಭದ್ರಾ ನಾಲೆಗೆ ನೀರು ಬಿಡಲಾಗಿದೆ. ನೀರು ದಾವಣಗೆರೆ ತಲುಪಿದ್ದು, ಟಿವಿ ಸ್ಟೇಷನ್ ಕೆರೆ, ಕುಂದುವಾಡ ಕೆರೆ ತುಂಬಿಸುವ ಕೆಲಸವಾಗುತ್ತಿದೆ ಎಂದರು.

ಕುಡಿಯುವ ನೀರಿನ ಸಮಸ್ಯೆ ಆಗದಂತೆ 10 ಟ್ಯಾಂಕರ್ ಮೂಲಕ ಎಲ್ಲ 45 ವಾರ್ಡ್‌ಗಳಿಗೂ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಪ್ರತಿ ಟ್ಯಾಂಕರ್ ದಿನಕ್ಕೆ 6 ಟ್ರಿಪ್ ಮಾಡುತ್ತಿವೆ. ಟ್ಯಾಂಕರ್‌ ನೀರು ಪೂರೈಸುವ ಕೆಲಸಕ್ಕೆ ಸಹಾಯಕ ಎಂಜಿನಿಯರ್‌ ಪ್ರಕಾಶರನ್ನು ನೇಮಿಸಲಾಗಿದೆ. ಜಾತ್ರೆ ವೇಳೆ ಬುಧವಾರದವರಗೂ ಸಮಸ್ಯೆ ಆಗಿಲ್ಲ. ರಾಜನಹಳ್ಳಿ ಪಂಪ್ ಹೌಸ್ ಬಳಿ ತುಂಗಭದ್ರಾ ನದಿ ಖಾಲಿಯಾಗಿದೆ. ಜೆಸಿಬಿಗಳ ಸಹಾಯದಿಂದ ಪಂಪ್‌ವರೆಗೆ ನೀರು ಬರುವಂತೆ ಮಾಡುವ ಕೆಲಸ ಸಾಗಿದೆ. ನದಿಯಲ್ಲೂ ನೀರಿಲ್ಲದೇ ನೀರು ಪೂರೈಕೆಗೆ ಸಮಸ್ಯೆ ಇದೆ. ಆದರೂ ಶಕ್ತಿ ಮೀರಿ ನೀರು ಪೂರೈಸಲಾಗುತ್ತಿದೆ ಎಂದು ಅವರು ಹೇಳಿದರು.

ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಲತೀಫ್, ಸದಸ್ಯರಾದ ಜಿ.ಎಸ್.ಮಂಜುನಾಥ ಗಡಿಗುಡಾಳ್, ಕೆ.ಚಮನ್ ಸಾಬ್‌, ವೆಂಕಟೇಶ ಇತರರು ಇದ್ದರು.

- - - ಬಾಕ್ಸ್‌ ಸುಳ್ಳು ಹೇಳಿ ಬೇಳೆ ಬೇಯಿಸಿಕೊಳ್ಳದಿರಿ

ಸಧ್ಯಕ್ಕೆ 8-10 ದಿನಕ್ಕೆ ನೀರು ಪೂರೈಸಿದರೂ 45 ವಾರ್ಡ್‌ಗಳಿಗೂ ಕೊಡಬಹುದು. ತೀರಾ ನೀರು ಇಲ್ಲದ ಸ್ಥಿತಿಯಂತೂ ಇಲ್ಲ ಎಂದು ಸದಸ್ಯ ನಾಗರಾಜ ಹೇಳಿದರು.

ಬಿಜೆಪಿಯ ವಿಪಕ್ಷ ನಾಯಕ, ಸದಸ್ಯರು ಜನರಿಗೆ ಸುಳ್ಳು ಮಾಹಿತಿ ನೀಡಿ, ತಮ್ಮ ಬೇಳೆ ಬೇಯಿಸಿಕೊಳ್ಳುವ ಕೆಲಸ ಮಾಡಬಾರದು. ಬಿಜೆಪಿ ಸದಸ್ಯರು ಆರೋಪಿಸಿದಂತೆ ಯಾವ್ಯಾವ 25ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ನೀರು ಬಿಟ್ಟಿಲ್ಲವೆಂದು ತೋರಿಸಲಿ. ಜಲಸಿರಿಯಡಿ 20 ವಾರ್ಡ್‌ಗೆ ನೀರು ನೀಡಲಾಗುತ್ತಿದೆ. ರಾಜನಹಳ್ಳಿಯಲ್ಲಿ ಪಂಪ್‌ಗೆ ನೀರು ಸಿಗುತ್ತಿಲ್ಲ. ನದಿಗೆ ನೀರು ಬಿಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಕಾಡಾ ಅಧಿಕಾರಿಗಳು, ನೀರಾವರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಎಂಥದ್ದೇ ಬರ ಪರಿಸ್ಥಿತಿ ಬಂದರೂ ನೀರಿನ ಸಮಸ್ಯೆಯಾಗಲು ಸಚಿವರಾಗಲೀ, ಪಾಲಿಕೆಯಾಗಲೀ ಬಿಡುವುದಿಲ್ಲ. ಏಪ್ರಿಲ್ 4ರ ವೇಳೆಗೆ ನೀರು ಬರಲಿದೆ ಎಂದು ಎ.ನಾಗರಾಜ ಹೇಳಿದರು.

- - - -22ಕೆಡಿವಿಜಿ63:

ದಾವಣಗೆರೆಯಲ್ಲಿ ಮೇಯರ್ ಬಿ.ಎಚ್. ವಿನಾಯಕ ಪೈಲ್ವಾನ್, ಸದಸ್ಯ ಎ.ನಾಗರಾಜ ಸುದ್ದಿಗೋಷ್ಟಿಯಲ್ಲಿ ಭದ್ರಾ ನಾಲೆ ನೀರನ್ನು ಕೆರೆಗೆ ತುಂಬಿಸುತ್ತಿರುವ ಚಿತ್ರ ಪ್ರದರ್ಶಿಸಿದರು.

Share this article