ಶೇಷಮೂರ್ತಿ ಅವಧಾನಿ
ಬಿಸಿಲೂರು ಕಲಬುರಗಿಯಲ್ಲಿಂದು ಲೋಕಸಭೆಗೆ ನಡೆದ 2ನೇ ಹಂತದ ಮತದಾನದ ಪ್ರಕ್ರಿಯೆಯಲ್ಲಿ ಮತದಾರರ ಸಮೂಹದಿಂದ ಪುಟಿದು ಬಂದ ಮತೋತ್ಸಾಹದ ಮುಂದೆ ಉರಿ ಬಿಸಿಲೇ ಮಂಕಾಯ್ತು!
ತಂಡೋಪತಂಡದಲ್ಲಿ ಬಂದು ಮತದಾನದಲ್ಲಿ ಪಾಲ್ಗೊಂಡಿದ್ದ ಉತ್ಸಾಹಿ ಮತದಾರರು ಜಿಲ್ಲಾದ್ಯಂತ 46.1ರಷ್ಟು ಪ್ರಖರತೆಯಲ್ಲಿ ಉರಿ ಬಿಸಿಲಿದ್ದರೂ ಕೂಡಾ ಅದನ್ನು ಲೆಕ್ಕಿಸದೆ ಮತದಾನ ಮಾಡುತ್ತ ಬಿಸಿಲನ್ನೇ ಸೋಲಿಸಿದರು. ಮತದಾನದ ದಿನವಾದ ಮಂಗಳವಾರ ಜಿಲ್ಲಾದ್ಯಂತ ಸರಾಸರಿ 46.1 ಡಿಗ್ರಿ ಸೆಲ್ಸಿಯಸ್ ಪ್ರಖರ ಬಿಸಿಲು ದಾಖಲಾದರೂ ಸಹ ಇದು ಮತದಾನದ ಮೇಲೆ ಯಾವುದೇ ರೀತಿ ಪರಿಣಾಮ ಬೀರಲಿಲ್ಲ. ಮತದಾರರು ಬೆಳಗಿನ 7 ಗಂಟೆಯಿಂದಲೇ ಮತಗಟ್ಟೆಗಳತ್ತ ಹೆಜ್ಜೆ ಹಾಕುತ್ತ ಗಂಟೆಗಟ್ಟಲೇ ತಮ್ಮ ಸರತಿಗಾಗಿ ಕಾಯತ್ತಿರುವ ನೋಟಗಳು ಜಿಲ್ಲಾದ್ಯಂತ ಕಂಡು ಬಂದವು. ಬಿಸಿಲು ಲೆಕ್ಕಿಸದೆ ವಿಶೇಷ ಚೇತನರು, ಹಿರಿಯ ನಾಗರಿಕರು ಕೂಡಾ ಹಲವರ ನೆರವಿನಿಂದ ಮತ ಚಲಾಯಿಸಲು ಮತಗಟ್ಟೆಗೆ ಬಂದರು. ಅದರಲ್ಲೂ ಯುವ ಮತದಾರರ ಲವಲವಿಕೆಯಂತೂ ಮುಗಿಲು ಮುಟ್ಟಿತ್ತು.ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ 10,49,959 ಪುರುಷರು, 10,47,961 ಮಹಿಳೆಯರು ಹಾಗೂ 282 ಇತರೆ ಸೇರಿ ಒಟ್ಟು 20,98,202 ಜನ ಮತ ಚಲಾವಣೆ ಹಕ್ಕು ಹೊಂದಿದ್ದು, ಇದರಲ್ಲಿ ಮತಗಟ್ಟೆಗೆ ಬಂದು ಮತ ಚಲಾಯಿಸಲು ಆಗದ 85 ವರ್ಷ ಮೇಲ್ಪಟ್ಟ 1,149 ಜನ ಹಿರಿಯ ನಾಗರಿಕರು ಮತ್ತು 396 ವಿಶೇಷಚೇತನರು ಹಾಗೂ ಅಗತ್ಯ ಸೇವಾ ವಲಯದಡಿ ಬರುವ 952 ಜನ ಮತದಾರರು ಈಗಾಗಲೆ ಪೋಸ್ಟಲ್ ಬ್ಯಾಲೆಟ್ ಮೂಲಕ ಮತ ಚಲಾಯಿಸಿರುತ್ತಾರೆ.
ಯುವ ಮತದಾರರು, ಮಹಿಳಾ ಮತದಾರರು, ವಿಶೇಷ ಚೇತನರು, ಹಿರಿಯ ನಾಗರಿಕರು ಬಿಸಿಲಿಗೆ ಹೆದರದೆ ಹುರುಪಿನಿಂದ ಮತದಾನ ಮಾಡಿದರು. ಮೊದಲ ಬಾರಿಗೆ ಮತ ಚಲಾಯಿಸಿದ ಯುವ ಮತದಾರರು ಸಂತಸದಲ್ಲಿದ್ದರು.
ಮತಗಟ್ಟೆಗಳಲ್ಲಿ ಹೆಣ್ಮಕ್ಕಲೇ ಹೆಚ್ಚು: ಜಿಲ್ಲಾದ್ಯಂತ ಶೇ.60ಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ಹೆಮ್ಮಕ್ಕಳೇ ತುಂಬ ಉತ್ಸಾಹದಿಂದ ಬಂದು ಮತದಾನ ಮಾಡಿದ ನೋಟಗಳು ಕಂಡವು. ಹಿಳೆಯರಿಗಾಗಿಯೇ ಮಾಡಲಾಗಿದ್ದ ಸಖಿ ಮತಗಟ್ಟೆಯಲ್ಲಿ ಸಹಜವಾಗಿಯೇ ಮಹಿಳೆಯರು ಅಧಿಕವಾಗಿದ್ದರು. ಜೇವರ್ಗಿ ಪಟ್ಟಣದ ಸಖಿ ಪಿಂಕ್ ಬೂತ್ ಸ.ಕ.ಹಿ.ಪ್ರಾ.ಶಾಲೆ ಮತಗಟ್ಟೆ ಸಂಖ್ಯೆ 89ರಲ್ಲಿ ಬೆಳಗ್ಗೆಯಿಂದ ಮಹಿಳಾ ಮತದಾರರು ಸರದಿಯಲ್ಲಿ ನಿಂತು ಮತ ಚಲಾಯಿಸಿದರು. ಮಧ್ಯಾಹ್ನದ ಹೊತ್ತಿಗೂ ಮಹಿಳಾ ಮತದಾರರು ಸಂಖ್ಯೆ ಇಳಿಮುಖವಾಗಲಿಲ್ಲ. ಮಹಿಳೆಯರು ಮತ್ತು ಪರುಷರಿಂದ ಮತಗಟ್ಟೆ ತುಂಬಿ ಹೋಗಿತ್ತು.
ಯುವ ಮತದಾರರಿಂದ ಮತದಾನ,ಅಭಿನಂದನಾ ಪತ್ರ ವಿತರಣೆ: ಜೇವರ್ಗಿ ಮತಕ್ಷೇತ್ರದ ಮತಗಟ್ಟೆ ಸಂ.101ರಲ್ಲಿ ಸ್ಥಳೀಯ ನಿವಾಸಿ ಬಿ.ಎ. ವ್ಯಾಸಂಗ ಮಾಡುತ್ತಿರುವ ರಾಧಿಕಾ ಅವರು ಪ್ರಥಮ ಬಾರಿಗೆ ಮತ ಚಲಾಯಿಸಿ ಸಂತಸ ಹಂಚಿಕೊಂಡರು. ಗುಲಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೋಟನೂರ ‘ಡಿ’ ಮತಗಟ್ಟೆ ಸಂಖ್ಯೆ 217ರಲ್ಲಿ ಯುವತಿಯರು ಮೊದಲ ಬಾರಿಗೆ ಮತ ಚಲಾಯಿಸಿದ ನಂತರ ಮತದಾರರ ಗುರುತಿನ ಚಿಟ್ಟಿಯೊಂದಿಗೆ ನಗೆ ಬೀರಿದರು.
ಜೇವರ್ಗಿ ಮತಕ್ಷೇತ್ರದ ಮತಗಟ್ಟೆ ಸಂ.101ರಲ್ಲಿ ಇತ್ತೀಚೆಗೆ ಪಾರ್ಶ್ವವಾಯುಗೆ ಒಳಗಾದ ಪುರಸಭೆ ಸದಸ್ಯ ಪರಶುರಾಮ ದೊಡ್ಡಮನಿ ಆಟೋ ಸಹಾಯದಿಂದ ಮತಗಟ್ಟೆಗೆ ಬಂದು ತಮ್ಮ ಪತ್ನಿ, ತಾಯಿಯೊಂದಿಗೆ ಮತ ಚಲಾಯಿಸಿದರು.
ಕಣದಲ್ಲಿರುವ 14 ಅಭ್ಯರ್ಥಿಗಳ ಹಣೆಬರಹ ಇವಿಎಂಗಳಲ್ಲಿ ಭದ್ರ: ಕಲಬುರಗಿ ಲೋಕಸಭೆ ಕಣದಲ್ಲಿರುವ 14 ಅಭ್ಯರ್ಥಿಗಳ ಭವಿಷ್ಯ ಮತದಾರರು ಇಂದು ಗುಂಡಿ ಅದುಮಿ ಇವಿಎಂಗಳಲ್ಲಿ ಭದ್ರಪಡಿಸಿದ್ದಾರೆ.