ಹುಬ್ಬಳ್ಳಿ ತಾಲೂಕಿನಲ್ಲಿ ದಾಖಲೆಗಳೆಲ್ಲ ಶೀಘ್ರ ಗಣಕೀಕೃತ

KannadaprabhaNewsNetwork | Published : Aug 16, 2024 12:58 AM

ಸಾರಾಂಶ

ಹುಬ್ಬಳ್ಳಿ ತಾಲೂಕಿನ ಎಲ್ಲ ಜನರಿಗೆ ರಾಜ್ಯದಲ್ಲಿ ಮೊದಲ ಬಾರಿಗೆ ಗಣಕೀಕರಣ ದಾಖಲೆ ಪಡೆದುಕೊಳ್ಳಲು ಅನುಕೂಲವಾಗುವುದು. ಹುಬ್ಬಳ್ಳಿ ನಗರ ತಾಲೂಕಿನಲ್ಲಿ ಒಟ್ಟು 1.37,310 ದಾಖಲೆಗಳು ಇದ್ದು, ಇದರಲ್ಲಿ ಈಗಾಗಲೇ 48,088 ದಾಖಲೆ ಗಣಕೀಕೃತಗೊಳಿಸಲಾಗಿದೆ.

ಹುಬ್ಬಳ್ಳಿ:

ರಾಜ್ಯದ ಜನರಿಗೆ ಕಂದಾಯದ ಹಳೇ ದಾಖಲೆಗಳು ಸುಲಭವಾಗಿ ಮತ್ತು ಯಾವುದೇ ಲೋಪದೋಷ ಇಲ್ಲದೇ ನಿಖರವಾಗಿ ಸಿಗಲು ಅಭಿಲೇಖಾಲಯವನ್ನು ಗಣಕೀಕರಣ ಮಾಡಲು ಮಾದರಿಯಾಗಿ ಹುಬ್ಬಳ್ಳಿ ನಗರ ತಾಲೂಕು ಆಯ್ಕೆ ಮಾಡಿಕೊಂಡಿದೆ ಎಂದು ಹುಬ್ಬಳ್ಳಿ ಶಹರ ತಹಸೀಲ್ದಾರ್‌ ಕಲಗೌಡ ಪಾಟೀಲ ಹೇಳಿದರು.

ಇಲ್ಲಿನ ನೆಹರು ಮೈದಾನದಲ್ಲಿ ಹುಬ್ಬಳ್ಳಿ ಶಹರ ತಾಲೂಕು ಸ್ವಾತಂತ್ರ್ಯೋತ್ಸವ ಸಮಿತಿ ವತಿಯಿಂದ ಆಯೋಜಿಸಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಹುಬ್ಬಳ್ಳಿ ತಾಲೂಕಿನ ಎಲ್ಲ ಜನರಿಗೆ ರಾಜ್ಯದಲ್ಲಿ ಮೊದಲ ಬಾರಿಗೆ ಗಣಕೀಕರಣ ದಾಖಲೆ ಪಡೆದುಕೊಳ್ಳಲು ಅನುಕೂಲವಾಗುವುದು. ಹುಬ್ಬಳ್ಳಿ ನಗರ ತಾಲೂಕಿನಲ್ಲಿ ಒಟ್ಟು 1.37,310 ದಾಖಲೆಗಳು ಇದ್ದು, ಇದರಲ್ಲಿ ಈಗಾಗಲೇ 48,088 ದಾಖಲೆ ಗಣಕೀಕೃತಗೊಳಿಸಲಾಗಿದೆ ಎಂದರು.

ಸ್ಲಂ ಬೋರ್ಡ್‌ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಕೊಳಚೆ ಪ್ರದೇಶಾಭಿವೃದ್ಧಿ ಮಂಡಳಿಯಿಂದ 1.80 ಲಕ್ಷ ಮನೆ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದರು. ಶಾಸಕ ಮಹೇಶ ಟೆಂಗಿನಕಾಯಿ, ಹುಬ್ಬಳ್ಳಿ-ಧಾರವಾಡ ಸ್ವಚ್ಛ ಸುಂದರ ನಗರವಾಗಬೇಕು. ಅವಳಿ ನಗರದ ಅಭಿವೃದ್ಧಿಗೆ ಒಳ್ಳೆಯ ಯೋಜನೆಗಳನ್ನು ರೂಪಿಸಬೇಕಿದೆ ಎಂದರು.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ಪಥ ಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾದ ತಂಡಗಳಿಗೆ ಪ್ರಶಸ್ತಿ ಪ್ರಮಾಣಪತ್ರ ವಿತರಿಸಲಾಯಿತು.

ಈ ವೇಳೆ ಪಾಲಿಕೆ ಮೇಯರ್ ರಾಮಣ್ಣ ಬಡಿಗೇರ, ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಗ್ರಾಮೀಣ ತಹಸೀಲ್ದಾರ್‌ ಪ್ರಕಾಶ ನಾಶಿ, ಅಪರ ತಹಸೀಲ್ದಾರ್ ಜಿ.ವಿ. ಪಾಟೀಲ, ಶಿವಾನಂದ ಹೆಬ್ಬಳ್ಳಿ, ತಾಪಂ ಇಒ ಉಮೇಶ ಬೊಮ್ಮಕ್ಕನವರ, ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಪ್ಪಗೌಡ್ರ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು, ಸಾರ್ವಜನಿಕರಿದ್ದರು.ಶಾಸಕರ ಆರೋಪ, ಪ್ರತ್ಯಾರೋಪಕ್ಕೆ ಸಾಕ್ಷಿಯಾದ ವೇದಿಕೆ

ನೆಹರು ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಲಕಾಲ ಕಾಂಗ್ರೆಸ್‌ ಹಾಗೂ ಬಿಜೆಪಿ ಶಾಸಕರ ಆರೋಪ, ಪ್ರತ್ಯಾರೋಪಕ್ಕೆ ವೇದಿಕೆ ಸಾಕ್ಷಿಯಾಯಿತು.

ತಹಸೀಲ್ದಾರ್‌ ಮಾತನಾಡಿದ ಬಳಿಕ ಮಾತನಾಡಲು ಆರಂಭಿಸಿದ ಶಾಸಕ ಮಹೇಶ ಟೆಂಗಿನಕಾಯಿ, 2014ರ ಪೂರ್ವದಲ್ಲಿ ಭಾರತ ಆರ್ಥಿಕವಾಗಿ 11ನೇ ಸ್ಥಾನದಲ್ಲಿ ಇತ್ತು. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದ ಮೇಲೆ 5ನೇ ಸ್ಥಾನಕ್ಕೆ ಬಂದಿದೆ. ಇದೇ ರೀತಿ ಅಭಿವೃದ್ಧಿಯ ಕನಸು ಕಂಡಿರುವ ಮೋದಿ ನಾಯಕತ್ವಕ್ಕೆ ಎಲ್ಲರೂ ಕೈಜೋಡಿಸುವಂತೆ ತಿಳಿಸಿದರು. ತಮ್ಮ ಭಾಷಣ ಪೂರ್ಣಗೊಳಿಸಿ ಅವರು ಅಲ್ಲಿಂದ ತೆರಳಿದರು.

ನಂತರ ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, 2014ರ ಪೂರ್ವದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಮೋದಿ ಅಧಿಕಾರಕ್ಕೆ ಬಂದ ನಂತರ ನಿರುದ್ಯೋಗ ಹೆಚ್ಚಾಗಿದೆ. ಅಲ್ಲದೇ, ಹತ್ತು ಹಲವು ಸಮಸ್ಯೆಗಳನ್ನು ದೇಶ ಎದುರಿಸುವಂತಾಗಿದೆ ಎಂದು ಈಗಿನ ಕೇಂದ್ರ ಸರ್ಕಾರದ ಹಲವು ವೈಫಲ್ಯ ವಿವರಿಸಿದರು. ಇಂಥವರ ವಿರುದ್ಧ ಯುವಕರು ಜಾಗೃತಿ ಹೊಂದುವುದು ಅವಶ್ಯವಾಗಿದೆ ಎಂದರು.

ಹೀಗೆ ಇಬ್ಬರೂ ಶಾಸಕರು ತಮ್ಮ ತಮ್ಮ ಭಾಷಣಗಳಲ್ಲಿ ದೇಶಭಕ್ತಿಗಿಂತಲೂ ಆರೋಪ, ಪ್ರತ್ಯಾರೋಪಗಳೆ ಹೆಚ್ಚಾಗಿ ಕಂಡುಬಂದವು.

Share this article