ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ:
ವಿವಿಧೆತೆಯಲ್ಲಿ ಏಕತೆ ಕಾಣುವ ದೇಶ ನಮ್ಮದು. ಭಾರತವು ಮಠ-ಮಂದಿರಗಳ ದೇಶವಾಗಿದೆ. ನಮ್ಮ ದೇಶದ ಜನರು ಧರ್ಮ, ಗುರು, ಧರ್ಮ, ಆಧ್ಯಾತ್ಮ ವಿಷಯಗಳಿಗೆ ಅತ್ಯಂತ ಗೌರವ ಶ್ರದ್ಧೆ, ಭಕ್ತಿ-ಭಾವ ಹೊಂದಿದ್ದು, ಇದು ಹೆಮ್ಮೆಯ ಸಂಗತಿಯಾಗಿದೆ ಎಂದು ಉಜ್ಜಯಿನಿ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಹೇಳಿದರು.ತಾಲೂಕಿನ ಮಸಬಿನಾಳ ಗ್ರಾಮದ ಕಟ್ಟಿಮನಿ ಹಿರೇಮಠದಲ್ಲಿ ವೀರಭದ್ರೇಶ್ವರ ದೇವಾಲಯದ ಲೋಕಾರ್ಪಣೆಯಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಧರ್ಮಸಭೆಯ ಸಾನಿಧ್ಯವಹಿಸಿ ಅವರು ಮಾತನಾಡಿದರು. ಭಾರತ ಶಾಸ್ತ್ರ ಪರಂಪರೆಯಲ್ಲಿ ಮೂರು ಕೋಟಿ ದೇವರ ಉಲ್ಲೇಖವಿದೆ. ಎಲ್ಲ ದೇವಾನುದೇವತೆಗಳ ಆರಾಧನೆ ಮಾಡುವದು. ಬಹುದೇವತಾರಾಧನೆ ಸಂಸ್ಕೃತಿ ಈ ದೇಶದ್ದು. ಪಾಶ್ಚಾತ್ಯ ದೇಶದ ಜನರು ದೇವರಕ್ಕಿಂತ ಹೆಚ್ಚಾಗಿ ತಮ್ಮ ದೇಹದ ಕುರಿತು ಹೆಚ್ಚು ಪ್ರೀತಿ ಮಾಡುತ್ತಾರೆ. ಇಡೀ ಪ್ರಪಂಚದಲ್ಲಿಯೇ ಇದಕ್ಕೆ ಭಾರತ ದೇಶದ ಜನರು ಅಪವಾದವಾಗಿದ್ದಾರೆ. ಭಾರತ ದೇಶದ ಜನರು ತಮ್ಮ ದೇಹದ ಪ್ರೀತಿ ಬದಲಾಗಿ ದೇವರನ್ನು ಪ್ರೀತಿ ಮಾಡುತ್ತಾರೆ ಎಂದು ಶ್ಲಾಘಿಸಿದರು.ಪಂಚೇಂದ್ರಿಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡವರು ವೀರರು. ಸಮಾಜದಲ್ಲಿ ಪರಸ್ತ್ರೀಯರನ್ನು ಗೌರವದಿಂದ ಕಾಣಬೇಕು. ವರದಕ್ಷಿಣೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ವರದಕ್ಷಿಣೆ ತೆಗೆದುಕೊಳ್ಳುವುದನ್ನು, ಕೊಡುವದನ್ನು ಕಾಣುತ್ತೇವೆ. ಸಂವಿಧಾನದ ಆಶಯದಂತೆ ಲಂಚ ತೆಗೆದುಕೊಳ್ಳುವದು ಸಹ ತಪ್ಪು. ವರದಕ್ಷಿಣೆ, ಲಂಚ ಪಡೆಯುವದು ಸಮಾಜದಲ್ಲಿ ನಿಲ್ಲಬೇಕು. ನಾಡಿನಲ್ಲಿ ಒಳ್ಳೆಯ ಮಳೆ-ಬೆಳೆಯಾಗಿ ರೈತ ಬಾಂಧವರು ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಉತ್ತಮ ಮೌಲ್ಯ ಸಿಗುವಂತಾಗಿ ರೈತನ ಬದುಕು ಉತ್ತಮವಾಗಬೇಕು. ನಾಡಿನಲ್ಲಿರುವ ಎಲ್ಲ ಜನರ ಬದುಕು ಉಜ್ವಲವಾಗಿರಬೇಕೆಂದು ಆಶೀರ್ವದಿಸಿದರು. ಕಾಶಿ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು ಮಾತನಾಡಿ, ವೀರಶೈವ ಪಂಚಪೀಠಗಳು ಭಾರತದ ಉದ್ದಗಲಕ್ಕೂ ಜೀವಂತ ಸಾಕ್ಷಿಯಾಗಿವೆ. ಪರಮಾತ್ಮ ಒಂದೇಯಾದರೂ ಅವನ ರೂಪಗಳು ಹಲವಾರು. ದೇಶದ ರಕ್ಷಣೆಗೆ, ಧರ್ಮದ ರಕ್ಷಣೆಗೆ, ಕುಟುಂಬದ ರಕ್ಷಣೆಗಾಗಿ ಪ್ರತಿಯೊಬ್ಬ ಹಿಂದುಗಳು ಮೂರು ಮಕ್ಕಳನ್ನು ಹೊಂದಬೇಕು. ಪ್ರತಿಯೊಬ್ಬರೂ ದೇಶ-ಧರ್ಮದ ರಕ್ಷಣೆಗೆ ಕಂಕಣಬದ್ಧರಾಗಬೇಕು ಎಂದು ಕರೆ ನೀಡಿದರು.ಸಾನಿಧ್ಯ ವಹಿಸಿದ್ದ ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು, ಅಧ್ಯಕ್ಷತೆ ವಹಿಸಿದ್ದ ಕಟ್ಟಿಮನಿ ಹಿರೇಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಮನಗೂಳಿಯ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಇತರರು ಮಾತನಾಡಿದರು.ವೇದಿಕೆಯಲ್ಲಿ ಆಲಮೇಲದ ಚಂದ್ರಶೇಖರ ಶಿವಾಚಾರ್ಯರು, ಬಸವನಬಾಗೇವಾಡಿಯ ಶಿವಪ್ರಕಾಶ ಶಿವಾಚಾರ್ಯರು, ತಡವಲಗದ ಅಭಿನವ ರಾಚೋಟೇಶ್ವರ ಸ್ವಾಮೀಜಿ, ಇಂಗಳೇಶ್ವರದ ಭೃಂಗೀಶ್ವರ ಶಿವಾಚಾರ್ಯರು, ಮನಗೂಳಿಯ ಅಭಿನವ ಸಂಗನಬಸವ ಶಿವಾಚಾರ್ಯರು, ಮುತ್ತಗಿಯ ವೀರರುದ್ರಮನಿ ಶಿವಾಚಾರ್ಯರು, ಭಾಗ್ಯಶ್ರೀ ಪಾಟೀಲ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಅಪ್ಪುಗೌಡ ಪಾಟೀಲ, ಮುಖಂಡರಾದ ಚಂದ್ರಶೇಖರಗೌಡ ಪಾಟೀಲ, ಕುಶರಾಜ ಪರಣ್ಣನವರ, ಎಸ್.ಎಂ.ಸಿಂದಗಿ, ರಮೇಶ ಕೌಲಗಿ, ರಾಜುಗೌಡ ಪಾಟೀಲ, ಬಾಬಾಗೌಡ ಪಾಟೀಲ, ಟಿ.ಸಿ.ಯಳಮೇಲಿ, ಶಾಂತಪ್ಪ ಬೈಚಬಾಳ, ಸಿದ್ದಯ್ಯ ಹಿರೇಮಠ, ದಾನಪ್ಪ ತೋಟದ ಇತರರು ಇದ್ದರು. ಡಾ.ಅಕ್ಕಮಹಾದೇವಿ ಹಿರೇಮಠ ಪ್ರಾಸ್ತವಿಕವಾಗಿ ಮಾತನಾಡಿದರು. ಸಾಹಿತಿ ಶಂಕರ ಬೈಚಬಾಳ ಸ್ವಾಗತಿಸಿದರು. ಭೀಮರಾಯ ಅಗಸಬಾಳ ನಿರೂಪಿಸಿದರು.