ಪರಶಿವಮೂರ್ತಿ ದೋಟಿಹಾಳ
ಪ್ರಸಕ್ತ ವರ್ಷ ಮುಂಗಾರು ಹಾಗೂ ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಭೂಮಿ ಬರಡಾಗುತ್ತಿದೆ. ಬಿಸಿಲಿನ ಝಳ ಮತ್ತಷ್ಟು ಜನರನ್ನು ಹೈರಾಣಾಗಿಸುತ್ತಿದೆ. ನೆತ್ತಿ ಮೇಲೆ ಬಿಸಿಲಿನ ತಾಪ ಜೋರಾಗಿದೆ. ಫೆಬ್ರವರಿ ತಿಂಗಳಲ್ಲಿಯೇ ಬಿಸಿಲಿನ ಝಳಕ್ಕೆ ರಸ್ತೆಗಳು ಕಾದು ಕೆಂಡವಾಗುತ್ತಿವೆ. ಈಗಲೇ ಹೀಗಾದರೆ ಮುಂದಿನ ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿನ ಉರಿ ಬಿಸಿಲಿನ ಸೆಕೆ ಊಹಿಸಿಕೊಳ್ಳಲು ಅಸಾಧ್ಯವೆನಿಸುತ್ತಿದೆ.
ಬೆಳಿಗ್ಗೆ 9-10 ಗಂಟೆಗೆಲ್ಲ ಉರಿ ಬಿಸಿಲಿನಿಂದ ಜನ ಕಂಗಾಲಾಗುತ್ತಿದ್ದಾರೆ. ಅದರಲ್ಲೂ ಮಧ್ಯಾಹ್ನ 12 ಗಂಟೆ ನಂತರದ ಬಿಸಿಲಿನ ತಾಪದ ಬಗ್ಗೆ ಮಾತನಾಡುವಂತಿಲ್ಲ. ವ್ಯಾಪಾರ ವಹಿವಾಟಿನ ಮೇಲೂ ಬಿಸಿಲು ಪ್ರತಿಕೂಲ ಪರಿಣಾಮ ಬೀರಿದೆ. ಮಾರುಕಟ್ಟೆ, ಮುಖ್ಯ ರಸ್ತೆಗಳಲ್ಲಿ ಜನಸಂಚಾರ ಕಡಿಮೆ ಆಗಿದೆ. ತಾಪಮಾನ ಹೆಚ್ಚಾಗಿರುವ ಕಾರಣ ತಂಪು ಪಾನೀಯ ಅಂಗಡಿಗಳಿಗೆ ಜನರು ಲಗ್ಗೆ ಇಡುತ್ತಿದ್ದಾರೆ. ಅಂಗಡಿಯವರಿಗೂ ಡಬಲ್ ಧಮಾಕಾ ಎಂಬಂತೆ ವ್ಯಾಪಾರ ಜೋರಾಗಿ ನಡೆಯುತ್ತಿದೆ.ಬೇಸಿಗೆಯಲ್ಲಿ ಉಳಿದ ತಂಪು ಪಾನೀಯಗಳಿಗಿಂತ ಎಳನೀರು ಸೇವನೆ ಅತ್ಯಂತ ಉಪಯುಕ್ತವಾಗಿದ್ದು, ಇದರಿಂದ ಬಾಯಾರಿಕೆ ಕಡಿಮೆಯಾಗುತ್ತದೆ. ಬೇಸಿಗೆಯಲ್ಲಿ ಉಂಟಾಗುವ ಕಾಯಿಲೆಗಳಿಗೆ ರಾಮಬಾಣದಂತಿದೆ. ದೇಹದ ಉಷ್ಣವನ್ನು ಸಮತೋಲನದಲ್ಲಿ ಇಡುತ್ತದೆ. ಹೆಚ್ಚು ಎಳನೀರು ಸೇವಿಸಿ ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವಂತೆ ಹಿರಿಯರು ಹೇಳುತ್ತಾರೆ.
ಹಣ್ಣುಗಳಿಗೆ ಮೊರೆ:
ಫೆಬ್ರುವರಿ ತಿಂಗಳಿನಲ್ಲಿ ಭಾರಿ ಬಿಸಿಲು ಇದೆ. ಇನ್ನು ಮೂರು ತಿಂಗಳು ಹೇಗೆ ಜೀವನ ಕಳೆಯಬೇಕು ಎಂಬುದೇ ತಿಳಿಯುತ್ತಿಲ್ಲ. ದೇಹವನ್ನು ತಂಪು ಮಾಡಿಕೊಳ್ಳಲು ಪ್ರತಿದಿನ ನೂರಾರು ರುಪಾಯಿ ಖರ್ಚು ಮಾಡಿದರೂ ಸಮಾಧಾನ ಇಲ್ಲ ಎನ್ನುತ್ತಾರೆ ಕುಷ್ಟಗಿ ನಿವಾಸಿ ಮಲಕಾಜಪ್ಪ ಹೊಸವಕ್ಕಲ.