ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ನಿಡಘಟ್ಟ ಗ್ರಾಮ ಸಮೀಪದ ತೋಟದಲ್ಲಿ ಎರಡು ಕಾಡಾನೆಗಳು ಸೋಮವಾರ ಪ್ರತ್ಯಕ್ಷಗೊಂಡು ಜನರಲ್ಲಿ ಆತಂಕ ಉಂಟು ಮಾಡಿವೆ.ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕೂರಣಗೆರೆ ಮೀಸಲು ಅರಣ್ಯ ಪ್ರದೇಶದಿಂದ ಆಹಾರ ಹರಸಿ ವಲಸೆ ಬಂದಿರುವ ಎರಡು ಸಲಗಗಳು ನಿಡಘಟ್ಟ ಗ್ರಾಮದ ಅಣ್ಣೇಗೌಡರ ತೋಟದ ಮನೆಯಲ್ಲಿ ಬೀಡು ಬಿಟ್ಟಿವೆ. ಮಾರ್ಗ ಮಧ್ಯೆ ಮಾರಸನಹಳ್ಳಿ, ತಿಪ್ಪೂರು, ಮಾದನಾಯಕನಹಳ್ಳಿ ಹಾಗೂ ತೈಲೂರು ಮಾರ್ಗವಾಗಿ ರಾತ್ರಿ ವೇಳೆ ಧಾವಿಸಿರುವ ಆನೆಗಳು ಮುಂಜಾನೆ ಹೊಳೆ ಆಂಜನೇಯ ಸ್ವಾಮಿ ದೇಗುಲದ ಎದುರಿನ ಶಿಂಷಾ ನದಿ ಪಾತ್ರದಲ್ಲಿ ಕಾಣಿಸಿಕೊಂಡಿವೆ.
ನಂತರ ಬೂದಗುಪ್ಪೆ, ಕೆ. ಕೋಡಿಹಳ್ಳಿ ಮಾರ್ಗವಾಗಿ ಸಾಗಿ ಬಂದಿರುವ ಆನೆಗಳು ಬೆಳಕು ಹರಿದ ಕಾರಣ ನಿಡಘಟ್ಟ ಅಣ್ಣೇಗೌಡರ ತೋಟದ ಮನೆಯಲ್ಲಿ ಅಡಗಿ ಕುಳಿತಿವೆ.ಮಾರಸನಹಳ್ಳಿ, ತಿಪ್ಪೂರು, ಮಾದನಾಯಕನಹಳ್ಳಿ ಗ್ರಾಮಗಳ ನಡುವೆ ರೈತರ ಜಮೀನುಗಳಿಗೆ ಲಗ್ಗೆ ಹಾಕಿ ಕಬ್ಬು, ತೆಂಗು ಹಾಗೂ ಬಾಳೆ ತೋಟಗಳಿಗೆ ಬೆಳೆದು ನಿಂತಿದ್ದ ಫಸಲನ್ನು ತಿಂದು ನಾಶಪಡಿಸಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತ ಪಡಿಸಿದ್ದಾರೆ. ಈ ಬಗ್ಗೆ ರೈತರಿಂದ ಬೆಳೆ ಹಾನಿ ಕುರಿತು ಇನ್ನು ಯಾವುದೇ ದೂರು ಬಂದಿಲ್ಲ ಎಂದು ವಲಯ ಅರಣ್ಯ ಅಧಿಕಾರಿ ಗವಿಯಪ್ಪ ತಿಳಿಸಿದ್ದಾರೆ.
ತೋಟದಲ್ಲಿ ಬೀಡು ಬಿಟ್ಟಿರುವ ಆನೆಗಳನ್ನು ಸಂಜೆ ವೇಳೆಗೆ ಏರ್ ಗನ್ ಅಥವಾ ಪಟಾಕಿ ಸಿಡಿಸಿ ಮತ್ತೆ ಕಾಡಿಗಟ್ಟುವ ಕಾರ್ಯಾಚರಣೆ ನಡೆಸಲಾಗುವುದು.ಸದ್ಯ ತೋಟದ ಸುತ್ತಮುತ್ತ ಅರಣ್ಯ ಇಲಾಖೆ ಸಿಬ್ಬಂದಿಗಳು ಆನೆಗಳು ಅಕ್ಕ ಪಕ್ಕದ ಗ್ರಾಮಗಳಿಗೆ ತೆರಳದಂತೆ ತೀವ್ರಕಟ್ಟೆಚರ ವಹಿಸಲಾಗಿದೆ. ಗ್ರಾಮದ ಜನರು ರಾತ್ರಿ ವೇಳೆ ಮನೆಯಿಂದ ಹೊರಗೆ ಓಡಾಡದೆ ಎಚ್ಚರಿಕೆಯಿಂದ ಇರುವಂತೆ ಅರಣ್ಯಾಧಿಕಾರಿ ಗವಿಯಪ್ಪ ಮನವಿ ಮಾಡಿದ್ದಾರೆ.ಫೆ.7 ರಿಂದ 25 ರವರೆಗೆ ಉದರ ದರ್ಶಕ ಶಸ್ತ್ರ ಚಿಕಿತ್ಸಾ ಶಿಬಿರ
ಮಂಡ್ಯ:ಜಿಲ್ಲಾ ಪಂಚಾಯ್ತಿ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಫೆ.7 ರಿಂದ 25 ರವರೆಗೆ ಜಿಲ್ಲೆಯ ವಿವಿಧೆಡೆ ಉದರ ದರ್ಶಕ ಶಸ್ತ್ರ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ. ಫೆ.7ರಂದು ಪಾಂಡವಪುರ ಉಪ ವಿಭಾಗ ಆಸ್ಪತ್ರೆ, ಫೆ.11 ರಂದು ಕೆ.ಆರ್.ಪೇಟೆ ತಾಲೂಕು ಆಸ್ಪತ್ರೆ, ಫೆ.12ರಂದು ಕೆ. ಎಂ ದೊಡ್ಡಿ ಸರ್ಕಾರಿ ಆರೋಗ್ಯ ಕೇಂದ್ರ, ಫೆ.13 ರಂದು ಕೀಲಾರ ಸರ್ಕಾರಿ ಆರೋಗ್ಯ ಕೇಂದ್ರ, ಫೆ.18 ರಂದು ಬೆಳಗ್ಗೆ ಬಿಂಡಿಗನವಿಲೆ ಸರ್ಕಾರಿ ಆರೋಗ್ಯ ಕೇಂದ್ರ ಮತ್ತು ಮಧ್ಯಾಹ್ನ 1 ಗಂಟೆಗೆ ನಾಗಮಂಗಲ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ, ಫೆ.19 ರಂದು ಕಿರುಗಾವಲು ಸರ್ಕಾರಿ ಆರೋಗ್ಯ ಕೇಂದ್ರ, ಫೆ.20 ರಂದು ಮದ್ದೂರು ತಾಲೂಕು ಆಸ್ಪತ್ರೆ, ಫೆ.21 ರಂದು ಅರಕೆರೆ ಸರ್ಕಾರಿ ಆರೋಗ್ಯ ಕೇಂದ್ರ, ಫೆ.25 ರಂದು ಶಿವಳ್ಳಿ ಸರ್ಕಾರಿ ಅರೋಗ್ಯ ಕೇಂದ್ರದ ಆಸ್ಪತ್ರೆಗಳಲ್ಲಿ ಬೆಳಗ್ಗೆ 10 ಗಂಟೆಗೆ ಉದರ ದರ್ಶಕ ಶಸ್ತ್ರ ಚಿಕಿತ್ಸಾ ಶಿಬಿರ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.