ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ
ಹೋಬಳಿಯ ಹೆಬ್ಬಳಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.ಮುಖ್ಯ ಶಿಕ್ಷಕ ಎಸ್ ಸಿದ್ದರಾಜು ಮಾತನಾಡಿ, ಬಿ ಬಿ ಗೌಡರು ಮತ್ತು ಗಣೇಶ್ ಗೌಡರು ದೇಶಕ್ಕೆ ಯೋಧರ ಸೇವೆ ಶಿಕ್ಷಕರ ಸೇವೆ ಅತ್ಯಮೂಲ್ಯವಾದದು ಎಂದರು. ವೀರಯೋಧ ಎಂ.ಕೆ.ಗಣೇಶ ಗೌಡ ಮಾತನಾಡಿ, 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಹೋರಾಟ ಮಾಡಿದ ಮಹಾವೀರ ಯೋಧ ಇವರು ಶಾಲೆಗೆ ಆಗಮಿಸಿ, ಕಾರ್ಗಿಲ್ ಯುದ್ಧದಲ್ಲಿ ಹೋರಾಟ ಮಾಡಿ ನಾಲ್ಕು ಜನ ವೈರಿಗಳನ್ನು ಸದೆಬಡಿದು ದೇಶಕ್ಕೆ ಕೀರ್ತಿ ತಂದಿದ್ದೇನೆ. ಇಲ್ಲಿ 20 ಡಿಗ್ರಿ 30 ಡಿಗ್ರಿ ಉಷ್ಣಾಂಶವಿರುತ್ತದೆ. ಅಲ್ಲಿ ಮೈನಸ್ 16, 17 ಡಿಗ್ರಿ ಉಷ್ಣಾಂಶವಿರುತ್ತದೆ. ಇಂತಹ ಜಾಗದಲ್ಲಿ ಧೈರ್ಯವಾಗಿ ಹೋರಾಡಿದ್ದೇನೆ. ದೇಶಕ್ಕಾಗಿ ನಿಮ್ಮ ಮಕ್ಕಳನ್ನು ಸೈನ್ಯಕ್ಕೆ ಸೇರಿಸಿ. ದೇಶ ಸೇವೆಯೇ ಈಶ ಸೇವೆ ಬೇರೆ ದೇಶಗಳಲ್ಲಿ ಒಬ್ಬ ಮಗನನ್ನು ದೇಶಕ್ಕಾಗಿ ಮೀಸಲಿಡುತ್ತಾರೆ. ಆದರೆ ನಮ್ಮ ದೇಶದಲ್ಲಿ ಸೈನ್ಯಕ್ಕೆ ಸೇರಿಸಲು ಆಸಕ್ತಿಯೇ ಇಲ್ಲ. ಸೈನ್ಯಕ್ಕೆ ಸೇರಲು ಶಾಲೆಗಳಲ್ಲಿ ದೇಶಭಕ್ತಿ ಪಾಠ ಕಲಿಸಬೇಕು. ಮನೆಗಳಲ್ಲಿ ಪೋಷಕರು ಸೈನಿಕರ ಬಗ್ಗೆ ದೇಶದ ಬಗ್ಗೆ ರಾಷ್ಟ್ರದ ಬಗ್ಗೆ ಮಾತನಾಡಬೇಕು. ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರಲಾಂಛನ, ರಾಷ್ಟ್ರಭಕ್ತಿ ತುಂಬಿಸಬೇಕು. ದೇಶಕ್ಕೆ ಮುಂದೆ ಏನಾದರೂ ಗಂಡಾಂತರ ಒದಗಿದ್ದರೆ ಅದನ್ನು ಎದುರಿಸುವ ಧೈರ್ಯ ಮಕ್ಕಳಿಗೆ ತುಂಬಬೇಕು ಎಂದರು.
ರಾಷ್ಟ್ರಪ್ರಶಸ್ತಿ ಪುರಸ್ಕೃತ ದೈಹಿಕ ಶಿಕ್ಷಣ ಶಿಕ್ಷಕ ವಿಶ್ರಾಂತ ಬಿ.ಬಿ. ಗೌಡರು ಮಾತನಾಡಿ, ಮಕ್ಕಳು ಸ್ವಚ್ಛಂದ ತೋಟದ ಹೂಗಳಿದ್ದ ಹಾಗೆ. ಶಾಲೆಯೇ ದೇಗುಲ ಮಕ್ಕಳೇ ದೇವರು ಶಿಕ್ಷಕರೇ ಪೂಜಾರಿಯಂತೆ, ಮಕ್ಕಳಿಗೆ ಆತ್ಮಸ್ಥೈರ್ಯ ಸಹನೆ, ತಾಳ್ಮೆ, ಪ್ರೀತಿ, ಕರುಣೆ, ಅನುಕಂಪ, ಸೌಹಾರ್ದತೆ, ನೈತಿಕತೆ, ದೇಶದ ಬಗ್ಗೆ ಗೌರವ, ಗುರು ಹಿರಿಯರ ಬಗ್ಗೆ ಗೌರವ, ತಂದೆತಾಯಿಗಳ ಬಗ್ಗೆ ಗೌರವ, ಶಾಲೆಯ ಬಗ್ಗೆ ಪ್ರೀತಿ, ಶ್ರದ್ಧೆಯಿಂದ ಓದುವ ಮನಸ್ಸನ್ನು ಮಕ್ಕಳು ಮಾಡಿ ಈ ಸೈನಿಕರಂತೆ ನೀವು ಕೂಡ ಸೈನಿಕರಾಗಿ ಬೆಳೆಯಿರಿ. ಮಹಿಳೆಯರೂ ಕೂಡ ಸೈನಿಕ ಸೇರಬಹುದು. ಈಗ ಒಳ್ಳೆಯ ಅವಕಾಶಗಳಿವೆ. ಶಾಲೆಯ ಪೋಷಕರು ಎಸ್‌ಡಿಎಂಸಿಯವರು ಅವರು ಮಕ್ಕಳನ್ನು ಶಾಲೆಗೆ ಸೇರಿಸುವ ಗಮನ ಹರಿಸಬೇಕು. ಸರ್ಕಾರಿ ಶಾಲೆ ಉಳಿದರೆ ಬಡ ಮಕ್ಕಳಿಗೆ ತುಂಬಾ ಅನುಕೂಲವಾಗುತ್ತದೆ ಎಂದರು.ಪ್ರೌಢಶಾಲೆ ಮುಖ್ಯ ಶಿಕ್ಷಕಿಯಾದ ಲೀಲಾ ಮೇಡಂ ರವರು ಮಾತನಾಡಿ, ಇಲ್ಲಿ ಓದುತ್ತಿರುವ ಎಲ್ಲಾ ಏಳನೇ ತರಗತಿ ಮಕ್ಕಳು ನಮ್ಮ ಶಾಲೆಗೆ ಸೇರಿ ಶಾಲೆಯನ್ನು ಮುಚ್ಚದಂತೆ ನೋಡಿಕೊಳ್ಳಿ. ಒಂದು ಸಾರಿ ಶಾಲೆ ಏನಾದರೂ ಮುಚ್ಚಿದರೆ ಖಾಸಗಿ ಶಾಲೆಗೆ ಲಕ್ಷಾಂತರ ರುಪಾಯಿ ಡೊನೇಷನ್ ಕೊಡಬೇಕಾಗುತ್ತದೆ. ಬಡಮಕ್ಕಳು ಎಲ್ಲಿ ಓದುತ್ತಾರೆ, ಓದಲು ಆಗೋದೇ ಇಲ್ಲ. ಅದರಿಂದ ಶಾಲೆಯನ್ನು ಉಳಿಸೋಣ ಎಲ್ಲರೂ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವಂತೆ ಪ್ರೇರೇಪಿಸೋಣ ನಮ್ಮ ಜೊತೆ ಕೈಜೋಡಿಸಿ ಎಂದರು.
ಕಾರ್ಯಕ್ರಮದಲ್ಲಿ ಬಿ ಎನ್ ಗೋಪಾಲ್, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರವಿಕುಮಾರ್, ಬಾಣನಕೆರೆ ಹಾಲಿನ ಡೇರಿಯ ಅಧ್ಯಕ್ಷರು ಸಂಪತ್ ಕುಮಾರ್, ಬಸವರಾಜು, ನಟರಾಜು, ಶಶಿಕಲಾ, ಸದಸ್ಯರಾದ ಶುಭ, ಕಾವ್ಯ,ಲೋಕೇಶ್, ಆಶಾ, ಪದ್ಮ ದೀಪ, ಮಂಗಳಮ್ಮ, ಸಹ ಶಿಕ್ಷಕಿಯರಾದ ರೋಜ್ ಮೇರಿ, ಜ್ಯೋತಿ, ಅಶ್ವಿನಿ, ಮಕ್ಕಳು ಹಾಜರಿದ್ದರು.