ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ
ಪಿರಿಯಾಪಟ್ಟಣದಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ಮನೆಗಳಿಗೆ ನೀರು ನುಗ್ಗಿದ್ದಲ್ಲದೆ, ರಸ್ತೆಗಳು ಜಲಾವೃತವಾಗಿ ಸಂಚಾರ ಅಸ್ತವ್ಯಸ್ತಗೊಂಡು ಜನತೆ ಪರಿತಪಿಸುವಂತಾಗಿದೆ.ಶಿವಪ್ಪ ಬಡಾವಣೆಯಲ್ಲಿರುವ ಮನೆಗಳಿಗೆ ನೀರು ನುಗ್ಗಿ ಗೃಹಬಳಕೆ ವಸ್ತುಗಳು, ಪಕ್ಕದಲ್ಲೇ ಇರುವ ತೋಟದಲ್ಲಿ ಅಡಿಕೆ ಮತ್ತು ತೆಂಗಿನ ಸಸಿಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಅಲ್ಲದೆ ಮಳೆ ಬಿದ್ದ ಸಂದರ್ಭದಲ್ಲಿ ಮನೆಯಲ್ಲಿದ್ದ ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಸ್ಥಳಾಂತರಿಸಲು ಕಣ್ಣಿರಿಟ್ಟ ಘಟನೆ ನಡೆದಿದೆ.
ಈ ಬಗ್ಗೆ ಶಿವಪ್ಪ ಬಡಾವಣೆಯ ನಿವಾಸಿ ರವಿಕುಮಾರ್ ಎಂಬವರು ಮಾತನಾಡಿ, ಮನೆಯ ಮುಂದಿನ ಬಿ. ಖರಾಬ್ ಕೆರೆಯನ್ನು ಪುರಸಭಾ ಸದಸ್ಯರು ಹಾಗೂ ಅಧಿಕಾರಿಗಳು ಕಬಳಿಸುವ ಹುನ್ನಾರ ನಡೆಸಿ ಕೆರೆಯನ್ನು ಮುಚ್ಚಲು ಅವಣಿಸಿರುವ ಕಾರಣ ಬಿದ್ದ ಮಳೆ ನೀರು ಹೊರ ಹೋಗಲು ಜಾಗವಿಲ್ಲದೆ ನಮ್ಮ ಮನೆ ಜಲಾವೃತವಾಗಿ, ತೋಟದಲ್ಲಿದ್ದ ಅಡಿಕೆ ಮತ್ತು ತೆಂಗಿನ ಸಸಿಗಳು ನೀರಿನಲ್ಲಿ ಕೊಚ್ಚಿ ಹೋಗಿವೆ, ಇದಕ್ಕೆಲ್ಲ ಪುರಸಭಾ ಅಧಿಕಾರಿಗಳು ನೇರ ಹೊಣೆ, ನೀರು ಹರಿಯಲು ಇರುವ ರಾಜಕಾಲುವೆಯನ್ನು ಅನೇಕರು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿಕೊಂಡಿದ್ದಾರೆ, ಇದರಿಂದ ನೀರು ಹೊರ ಹೋಗಲು ಸಾಧ್ಯವಾಗದೆ, ಹಳ್ಳದಲ್ಲಿರುವ ನಮ್ಮ ಮನೆಗಳು ಕುಸಿದು ಬೀಳುವ ಹಂತಕ್ಕೆ ತಲುಪಿದೆ ಎಂದು ಆಕ್ರೋಶ ಹೊರ ಹಾಕಿದರು.ಹಾಸನ- ಬೆಟ್ಟದಪುರ ರಸ್ತೆ ಜಲಾವೃತವಾಗಿ ಸಂಚಾರ ಅಸ್ತವ್ಯಸ್ತಗೊಂಡು ಜನತೆ ಪರಿತಪಿಸುವಂತಾಗಿದೆ. ಅಲ್ಲದೆ, ಚರಂಡಿಗಳ ನೀರು ರಸ್ತೆ ಮೇಲೆ ಹರಿದು ಜನರು ಸಂಚರಿಸದಂತಹ ಸ್ಥಿತಿ ನಿರ್ಮಾಣವಾಗಿತ್ತು.
ಪಟ್ಟಣದ ಬಹುತೇಕ ವಾರ್ಡ್ಗಳಲ್ಲಿ ಅಧಿಕಾರಿಗಳ ದಿವ್ಯ ನಿರ್ಲಕ್ಷತನಕ್ಕೆ ರಸ್ತೆಗಳೆಲ್ಲ ಹಾಳಾಗಿದೆ. ಮಳೆಯ ನೀರು ರಸ್ತೆಯಲ್ಲಿ ನಿಂತು ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಯಿತು.ಪಟ್ಟಣದಿಂದ ಗ್ರಾಮೀಣ ಭಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಸ್ಥಿತಿಯೂ ಶೋಚನೀಯವಾಗಿದ್ದು, ಪ್ರಯಾಣಿಕರಿಗೆ ರಸ್ತೆ ಸಂಚಾರ ಸಂಚಕಾರವಾಗಿ ಮಾರ್ಪಟ್ಟಿತು.
ಒಟ್ಟಾರೆ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿ ಜನರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಹಳೇ ಪೇಟೆ ಕಂಠಾಪುರ ಸೇರಿದಂತೆ ಪಟ್ಟಣದ ಹೊಸ ವಾರ್ಡ್ಗಳಲ್ಲಿ ಡಾಂಬರೀಕರಣದ ರಸ್ತೆಯ ಕಾಮಗಾರಿಯು ನನೆಗುದಿಗೆ ಬಿದ್ದಿದ್ದು, ರಸ್ತೆ ಇಲ್ಲದೆ ಕೆಸರು, ಕೊಚ್ಚೆಯಿಂದ ತುಂಬಿಹೋಗಿದೆ.ಮಳೆಯಿಂದ ಹಾನಿಯಾದ ಸ್ಥಳಕ್ಕೆ ತಹಸೀಲ್ದಾರ್ ಸುರೇಶ್ ಮೂರ್ತಿ, ಪುರಸಭಾ ಮುಖ್ಯಾಧಿಕಾರಿ ಮುತ್ತಪ್ಪ ಸೇರಿದಂತೆ ಕಂದಾಯ ಹಾಗೂ ಪುರಸಭಾ ನೌಕರರು ಭೇಟಿ ನೀಡಿ ಪರಿಶೀಲಿಸಿದರು.