ರಾಣಿಬೆನ್ನೂರಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕೃತಿ ದಹಿಸಿ ಆಕ್ರೋಶ

KannadaprabhaNewsNetwork |  
Published : Dec 13, 2024, 12:46 AM IST
ಫೋಟೋ)೧೨-ಆರ್‌ಎನ್‌ಆರ್-೦೩ | Kannada Prabha

ಸಾರಾಂಶ

ಬೆಳಗಾವಿ ಸುವರ್ಣಸೌಧ ಬಳಿ ೨ಎ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಪಂಚಮಸಾಲಿ ಸಮಾಜದವರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿರುವುದನ್ನು ಖಂಡಿಸಿ ಪಂಚಮಸಾಲಿ ರಾಣಿಬೆನ್ನೂರು ತಾಲೂಕು ಸಮಾಜದ ವತಿಯಿಂದ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಕೃತಿ ದಹಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ರಾಣಿಬೆನ್ನೂರು: ಬೆಳಗಾವಿ ಸುವರ್ಣಸೌಧ ಬಳಿ ೨ಎ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಪಂಚಮಸಾಲಿ ಸಮಾಜದವರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿರುವುದನ್ನು ಖಂಡಿಸಿ ಪಂಚಮಸಾಲಿ ತಾಲೂಕು ಸಮಾಜದ ವತಿಯಿಂದ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಕೃತಿ ದಹಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ನಗರದ ಮಿನಿ ವಿಧಾನಸೌಧ ಎದುರಿನ ಹಳೇ ಪಿ.ಬಿ. ರಸ್ತೆಯಲ್ಲಿ ಜಮಾಯಿಸಿದ ಸಮಾಜದ ನೂರಾರು ಕಾರ್ಯಕರ್ತರು ಅರ್ಧಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ತಡೆದರು. ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ. ಪರಮೇಶ್ವರ ವಿರುದ್ಧ ಘೋಷಣೆ ಕೂಗಿದರು. ಆನಂತರ ಸಿಎಂ ಸಿದ್ದರಾಮಯ್ಯ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆದು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಅರುಣಕುಮಾರ ಪೂಜಾರ, ಪಂಚಮಸಾಲಿ ಸಮಾಜದವರ ಮೇಲೆ ಲಾಠಿ ಚಾರ್ಜ್ ಮಾಡಿಸಿರುವ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ಗೃಹ ಸಚಿವರು ಕೂಡಲೇ ರಾಜೀನಾಮೆ ಕೊಡಬೇಕು. ೨ಎ ಮೀಸಲಾತಿ ಹೋರಾಟ ಮಾಡುತ್ತಿರುವ ಸಮಾಜದ ಸ್ವಾಮೀಜಿಯವರಿಗೆ ಗೌರವ ನೀಡದವರನ್ನು ಕರ್ತವ್ಯದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಘಟನಾ ಸ್ಥಳಕ್ಕೆ ಬಂದ ತಹಸೀಲ್ದಾರ್ ಆರ್.ಎಚ್. ಭಾಗವಾನ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಅರ್ಧ ಗಂಟೆಗೂ ಅಧಿಕ ಕಾಲ ರಸ್ತೆ ತಡೆ ಮಾಡಿದ್ದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಯಿತು. ಪೊಲೀಸರು ವಾಹನಗಳನ್ನು ಬೇರೆ ಮಾರ್ಗವಾಗಿ ಸಂಚರಿಸಲು ವ್ಯವಸ್ಥೆ ಮಾಡಿದರು.

ಸಮಾಜದ ನಗರ ಘಟಕದ ಅಧ್ಯಕ್ಷ ಶಿವಪ್ಪ ಗುರಿಕಾರ, ಗ್ರಾಮೀಣ ಘಟಕದ ಅಧ್ಯಕ್ಷ ಸಿದ್ದು ಚಿಕ್ಕಬಿದರಿ, ಪ್ರಮುಖರಾದ ಬಸವರಾಜ ಹುಲ್ಲತ್ತಿ, ಮಲ್ಲಣ್ಣ ಅಂಗಡಿ, ರಾಜಣ್ಣ ಮೋಟಗಿ, ಬಸವರಾಜ ಪಾಟೀಲ, ಕೆ. ಶಿವಲಿಂಗಪ್ಪ, ಎಸ್.ಎಸ್. ರಾಮಲಿಂಗಣ್ಣನವರ, ಸಂತೋಷಕುಮಾರ ಪಾಟೀಲ, ವಸಂತಾ ಹುಲ್ಲತ್ತಿ, ಮುತ್ತಣ್ಣ ಕಾಕೋಳ, ಭಾರತಿ ಜಂಬಗಿ, ಗೀತಾ ಕಾಕೋಳ, ಪೂರ್ಣಿಮಾ ಬೆನ್ನೂರ, ಕಸ್ತೂರಿ ಚಿಕ್ಕಬಿದರಿ, ಮುತ್ತಣ್ಣ ಪಾಟೀಲ, ವಿನೋದ ಜಂಬಗಿ, ಹನುಮಂತಪ್ಪ ಕಬ್ಬಾರ, ಈರಣ್ಣ ಹಲಗೇರಿ, ಕಿರಣ ಅಂಗಡಿ, ಶಿವರಾಜ ರೊಡ್ಡನವರ ಸೇರಿ ನೂರಾರು ಜನ ಪಾಲ್ಗೊಂಡಿದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ