ಪಿ.ಎಸ್. ಪಾಟೀಲ
ಮನೆ ಮತ್ತು ಅಂಗಡಿಗಳಿಂದ ತ್ಯಾಜ್ಯ ಸಂಗ್ರಹಕ್ಕಾಗಿ ನಿತ್ಯ 6 ಕಸ ಸಂಗ್ರಹ ವಾಹನಗಳು ಪಟ್ಟಣದಾದ್ಯಂತ ಸಂಚರಿಸುತ್ತವೆ. ಅಲ್ಲಲ್ಲಿ ಬಿದ್ದಿರುವ ಕಸದ ರಾಶಿ ತೆರವಿಗೆ ಮತ್ತು ಚರಂಡಿಗಳ ಹೂಳು ತೆರವಿಗೆ 3 ಟ್ರ್ಯಾಕ್ಟರ್, 1 ಜೆಸಿಬಿ 19 ಸ್ವಚ್ಛತಾ ಸಿಬ್ಬಂದಿ, ಒಬ್ಬ ಆರೋಗ್ಯ ನಿರೀಕ್ಷಕರು, ಒಬ್ಬ ಮುಖ್ಯಾಧಿಕಾರಿ, 11 ನೈರ್ಮಲ್ಯ ಕಾರ್ಯಕರ್ತರು ನಿತ್ಯ ಕಾರ್ಯ ನಿರ್ವಹಿಸುತ್ತಾರೆ. ಆದರೂ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಆಗುತ್ತಿಲ್ಲ. ಚರಂಡಿಗಳು ತ್ಯಾಜ್ಯದಿಂದ ತುಂಬಿವೆ.
ಬಹುತೇಕ ತ್ಯಾಜ್ಯ ವಸ್ತುಗಳನ್ನು ಸಾರ್ವಜನಿಕರು ಚರಂಡಿಗೆ ಎಸೆಯುತ್ತಾರೆ. ಇದರಿಂದ ಚರಂಡಿಯಲ್ಲಿ ನೀರು ಹರಿಯದೆ ನಿಂತಲ್ಲೆ ನಿಲ್ಲುತ್ತಿದೆ. ಸೊಳ್ಳೆಗಳ ಕಾಟ, ಗಬ್ಬು ವಾಸನೆ ವಿಪರೀತವಾಗಿದೆ. ಚರಂಡಿಗಳಿಗೆಯೇ ಜನತೆ ತ್ಯಾಜ್ಯ ಯಾಕೆ ಎಸೆಯುತ್ತಾರೆ? ಜನರಲ್ಲಿ ಸ್ವಚ್ಛತಾ ಕುರಿತು ಜಾಗೃತಿ ಕೊರತೆಯೇ? ಪುರಸಭೆ ಉದಾಸೀನವೋ ಎಂಬುದು ಯಕ್ಷಪ್ರಶ್ನೆಯಾಗಿದೆ.ಕಾಟಾಚಾರಕ್ಕೆ ವಾಹನ ಓಡಾಟ: ಮನೆಗಳಲ್ಲಿನ ಹಸಿ ಕಸ, ಒಣ ಕಸ ಮತ್ತು ಅಂಗಡಿ, ಹೋಟೆಲ್‌ಗಳಲ್ಲಿನ ಕಸ ಸಂಗ್ರಹಕ್ಕೆ 6 ವಾಹನ ವ್ಯವಸ್ಥೆ ಮಾಡಲಾಗಿದೆ. ಆದರೆ ವಾಸ್ತವವಾಗಿ ವಾಹನಗಳು ನಿತ್ಯ ಮನೆ ಮನೆಗೆ, ಅಂಗಡಿಗಳಿಗೆ ತೆರಳದಿರುವುದರಿಂದ ಮನೆ ಮತ್ತು ಅಂಗಡಿಕಾರರು ರಸ್ತೆ ಮತ್ತು ಚರಂಡಿಗೆ ರಾಶಿ ರಾಶಿ ಕಸ ತಂದು ಸುರಿಯುತ್ತಾರೆ. ಇದರಿಂದ ಗಟಾರಗಳು ತ್ಯಾಜ್ಯದಿಂದ ತುಂಬಿವೆ. ಕಸ ಸಂಗ್ರಹ ವಾಹನಗಳು ಕೆಲವೇ ಕೆಲ ಎಗ್ ರೈಸ್ ಅಂಗಡಿ, ಹೋಟೆಲ್‌ಗಳಿಗೆ ಸಿಮೀತವಾಗಿವೆ ಎಂಬ ದೂರುಗಳು ಜನರಿಂದ ಕೇಳಿಬಂದಿವೆ.
ಪಟ್ಟಣದಲ್ಲಿನ ಬಹುತೇಕ ಚರಂಡಿಗಳು ಘನತ್ಯಾಜ್ಯದಿಂದ ತುಂಬಿದ್ದು, ನೀರು ಹರಿಯದೇ ನಿಂತಲ್ಲೆ ನಿಲ್ಲುತ್ತಿದೆ. ಶಿವಾನಂದ ನಗರ, ಶಿವಪೇಟಿ ಬಡಾವಣೆ, ಶ್ರೀನಗರ, ಕಲ್ಯಾಣ ನಗರ, ತಳವಾರ ಓಣಿ, ಕುರಬಗಲ್ಲಿ ಬಡಾವಣೆ, ಹಕಾರಿಯವರ ಓಣಿ, ಜಗ್ಗಲರವರ ಓಣಿ ಸೇರಿದಂತೆ ಬಹುಕೇತ ಕಡೆ ಚರಂಡಿಗಳು ಘನತ್ಯಾಜ್ಯದಿಂದ ತುಂಬಿವೆ. ಒಮ್ಮೆಯೂ ಗಟಾರ್ ಸ್ವಚ್ಛತೆಗೆ ಮುಂದಾಗದ ಪುರಸಭೆ ವಿರುದ್ಧ ಹರಿಹಾಯ್ದ ಜನ ತಾವೇ ಸ್ವತಃ ಸಲಿಕೆ, ಪುಟ್ಟಿ ಹಿಡಿದು ಗಟಾರ್ ಸ್ವಚ್ಛ ಮಾಡಿಕೊಳ್ಳುತ್ತಿದ್ದಾರೆ ಎಂಬುದು ವಿಪರ್ಯಾಸ ಸಂಗತಿ.
ಜಾಗೃತಿ ಮುಖ್ಯ: ಚರಂಡಿ ನಿರ್ಮಿಸಿದಾಗಿನಿಂದ ಒಮ್ಮೆಯೂ ಸ್ವಚ್ಛ ಮಾಡಿಲ್ಲ. ನಮ್ಮ ಮನೆಯ ಮುಂದಿನ ಗಟಾರನ್ನು ನಾವೇ ಸ್ವಚ್ಛ ಮಾಡಿಕೊಳ್ಳುತ್ತೇವೆ. ನಾವಷ್ಟೆ ಸ್ವಚ್ಛ ಮಾಡಿದರೇ ಸಾಲದು. ಗಟಾರಕ್ಕೆ ಗಲೀಜು ನೀರು ಹೊರತು ಬೇರೆ ವಸ್ತು ಎಸೆಯದಂತೆ ಜಾಗೃತಿ ಮುಖ್ಯವಾಗಿದೆ. ಈ ಕುರಿತು ಪುರಸಭೆ ಜಾಗೃತಿ ಮೂಡಿಸಬೇಕಿದೆ ಎಂದು ಪಟ್ಟಣದ ನಿವಾಸಿ ಮಹೇಶ ಹಿರೇಮಠ ತಿಳಿಸಿದರು.