ವಿಜ್ಞಾನಯುಗದಲ್ಲಿ ಭಾರತದ ಆಧ್ಯಾತ್ಮ ಶಕ್ತಿಯೇ ದೊಡ್ಡ ಟೆಕ್ನಾಲಜಿ: ಶ್ರೀ ಭಟ್ಟಾರಕ ಸ್ವಾಮೀಜಿ

KannadaprabhaNewsNetwork |  
Published : Mar 24, 2025, 12:33 AM IST
ಭಟ್ಟಾರಕ | Kannada Prabha

ಸಾರಾಂಶ

ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ೧೫ ನೇ ವಾರ್ಷಿಕೋತ್ಸವ ಸಮಾರಂಭ ನಡೆಯಿತು.

ಕನ್ನಡಪ್ರಭ ವಾರ್ತೆ ಕಾಪು

ಭಾರತದ ಸನಾತನ ಸಂಸ್ಕೃತಿಯಲ್ಲಿ ಭಗವಂತನೇ ಇಂಜಿನಿಯರ್ ಮಯ, ವಿಶ್ವಕರ್ಮರೇ ಶಿಲ್ಪಿಗಳು, ಋಷಿಮುನಿಗಳೇ ವಿಜ್ಞಾನಿಗಳು. ಪುರಾಣ ಕಾಲದಲ್ಲಿಯೂ ಯಂತ್ರ ತಂತ್ರ ಮಂತ್ರ ವಿದ್ಯೆಯ ಮೂಲಕ ತಂತ್ರಜ್ಞಾನ ಬೆಳೆದಿತ್ತು. ಅಂದಿನ ಪುಷ್ಪಕ ವಿಮಾನ, ಯುದ್ಧಕಾಲದ ಬಾಣ, ಶಸ್ತ್ರಾಸ್ತ್ರಗಳು ಈ ತಂತ್ರಜ್ಞಾನದ ಕೊಡುಗೆಗಳಾಗಿದ್ದವು. ಇಂದಿಗೂ ಈ ವಿಜ್ಞಾನಯುಗದಲ್ಲಿ ಭಾರತದ ಆಧ್ಯಾತ್ಮಿಕ ಶಕ್ತಿಯೇ ಬಹುದೊಡ್ಡ ಟೆಕ್ನಾಲಜಿಯಾಗಿದೆ ಎಂದು ಮೂಡುಬಿದಿರೆ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ನುಡಿದರು.

ಶನಿವಾರ ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ೧೫ ನೇ ವಾರ್ಷಿಕೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಭಾರತದಲ್ಲಿರುವ ತಾಂತ್ರಿಕತೆ ಜಗತ್ತಿನ ಬೇರೆಲ್ಲಿಯೂ ಇಲ್ಲ. ಆಧ್ಯಾತ್ಮವಿಲ್ಲದ ಯಾವ ತಾಂತ್ರಿಕತೆಯೂ ಉಪಯೋಗಕ್ಕೆ ಬರುವುದಿಲ್ಲ ಎಂದ ಸ್ವಾಮೀಜಿ, ಭವಿಷ್ಯ ಇಂಜಿನಿಯರುಗಳಾದ ವಿದ್ಯಾರ್ಥಿಗಳು ಆಧ್ಯಾತ್ಮವನ್ನು ಅರ್ಥ ಮಾಡಿಕೊಂಡು, ತಮ್ಮ ವೃತ್ತಿಜೀವನದಲ್ಲಿ ನೆಲ, ಜಲ, ಪ್ರಕೃತಿ ಸಂರಕ್ಷಣೆಗೆ ಒತ್ತು ನೀಡಬೇಕು ಎಂದು ಕಿವಿಮಾತು ಹೇಳಿದರು.

ಉಡುಪಿ ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಸಮಾರಂಭದ ಅಧ್ಯಕ್ಷತೆ ವಹಿಸಿ ತಮ್ಮ ಆಶೀರ್ವಚನದಲ್ಲಿ ವಿದ್ಯಾರ್ಥಿಗಳು ಸಿಗಪ ಅವಕಾಶಗಳಲ್ಲಿ ಜಾಣ್ಮೆಯನ್ನು ಬಳಸಿ, ಬೆಳೆಸಿಕೊಂಡು, ಆದರ್ಶ ವ್ಯಕ್ತಿಗಳನ್ನು ಅನುಕರಣೆ ಮಾಡುವ ಬದಲು ಅನುಸರಣೆ ಮಾಡಬೇಕೆಂದು ತಿಳಿಸಿದರು.

ಬೆಂಗಳೂರಿನ ಡಾಟಾ ಪ್ಯಾಟರ್ನ್ಸ್ ಲಿಮಿಟೆಡ್ ಇದರ ಮುಖ್ಯಸ್ಥ ಶ್ರೀನಿವಾಸ ಗೋಪಾಲನ್ ರಂಗರಾಜನ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ರೇಖಾಮೂರ್ತಿ ರಂಗರಾಜನ್ ಉಪಸ್ಥಿತರಿದ್ದರು.

ಪ್ರತಿಷ್ಠಾನದಿಂದ ನೀಡಲಾಗುವ ವಿದ್ಯಾರ್ಥಿವೇತನವನ್ನು ವಿತರಿಸಲಾಯಿತು. ಅಂತಿಮ ವರ್ಷದ ಉತ್ತಮ ಸಾಧಕ ವಿದ್ಯಾರ್ಥಿಗಳಿಗೆ ಕೊಡುವ ‘ಶ್ರೀ ಮಧ್ವ ವಾದಿರಾಜ ಪ್ರಶಸ್ತಿ’ಯನ್ನು ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಮತ್ತು ಡಾಟಾ ಸೈನ್ಸ್ ವಿಭಾಗದ ಪ್ರಥಮ್ ಎಲ್. ಕಾಮತ್ ಮತ್ತು ಹಿತಾಶ್ರೀ ಇವರಿಗೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ದ್ವಿತೀಯ ಮತ್ತು ತೃತೀಯ ವರ್ಷದ ಉತ್ತಮ ವಿದ್ಯಾರ್ಥಿಗಳಿಗೆ ಹಯವದನ ಪ್ರಶಸ್ತಿಯನ್ನು ನೀಡಲಾಯಿತು. ಡಾಕ್ಟರೇಟ್ ಪದವಿ ಪಡೆದುಕೊಂಡ ಅಧ್ಯಾಪಕರನ್ನು ಗೌರವಿಸಲಾಯಿತು.

ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿ ರತ್ನಕುಮಾರ್ ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ತಿರುಮಲೇಶ್ವರ ಭಟ್ ವರದಿ ಮಂಡಿಸಿದರು. ಪ್ರತಿಷ್ಠಾನದ ಉಪಾಧ್ಯಕ್ಷ ಶ್ರೀನಿವಾಸ ತಂತ್ರಿ, ಉಪಪ್ರಾಂಶುಪಾಲ ಡಾ. ಗಣೇಶ್ ಐತಾಳ್, ಆಡಳಿತ ಮಂಡಳಿ ಸದಸ್ಯರಾದ ಡಾ. ಎಸ್. ಜಿ. ಗೋಪಾಲಕೃಷ್ಣ, ಹರೀಶ್ ಬೆಳ್ಮಣ್, ವಿದ್ಯಾರ್ಥಿ ಮಂಡಳಿ ಅಧ್ಯಕ್ಷ ಅನುರಾಗ್ ಆರ್. ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ರಾಧ್ಯಾಪಕರಾದ ಸೌಮ್ಯಾ ಭಟ್ ಮತ್ತು ಮಲ್ಯ ಅನಂತ್ ಮೋಹನ್ ನಿರೂಪಿಸಿದರು. ಪ್ರಾಧ್ಯಾಪಕ ಸಚಿನ್ ಪ್ರಭು ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ