ವಿಸ್ಮಯಕಾರಿ ಕೀಟ ಪ್ರಪಂಚದಲ್ಲಿ ಆಕರ್ಷಣೀಯ ಇನಸೆಕ್ಟ್‌ ಫುಡ್‌ !

KannadaprabhaNewsNetwork |  
Published : Sep 14, 2025, 01:04 AM IST
13ಡಿಡಬ್ಲೂಡಿ5,6 | Kannada Prabha

ಸಾರಾಂಶ

ಮೈ ಜುಮ್‌ ಎನಿಸುವ ಕೀಟಗಳಿಂದ ಸಿದ್ಧಪಡಿಸಿದ ಡ್ರೈ, ಚಿಲ್ಲಿ,ಪಿಜ್ಜಾ..!

ಬಸವರಾಜ ಹಿರೇಮಠ ಧಾರವಾಡ

ಆಧುನಿಕ ಸಂದರ್ಭದ ಆಹಾರ ಸಂಸ್ಕೃತಿಯಲ್ಲಿ ಅನೇಕ ಬದಲಾವಣೆ ಕಾಣುತ್ತಿದ್ದೇವೆ. ಆ ಬದಲಾವಣೆಗೆ ಭಾರತೀಯರು ಸಹ ಹೊರತಾಗಿಲ್ಲ. ಭಾರತೀಯ ಆಹಾರ ಪದ್ಧತಿಯಲ್ಲಿ ಮಾಂಸಹಾರಿ ಇದ್ದರೂ ಕೀಟಗಳ ಆಹಾರ ಅಷ್ಟು ಪರಿಚಿತವಲ್ಲ. ಆದರೆ, ಇದೀಗ ಇನಸೆಕ್ಟ್‌ ಫುಡ್‌ ಎಂದು ಕೀಟಗಳಿಂದ ಸಿದ್ಧಪಡಿಸಿದ ಆಹಾರ ಭಾರತದಲ್ಲೂ ಹೆಚ್ಚು ಜನಪ್ರಿಯವಾಗುತ್ತಿದ್ದು, ಈ ಮಾದರಿಯು ಧಾರವಾಡದ ಕೃಷಿ ಮೇಳದಲ್ಲಿ ಲಕ್ಷಾಂತರ ಜನರನ್ನು ಆಕರ್ಷಿಸುತ್ತಿದೆ.

ಸಾಮಾನ್ಯವಾಗಿ ಗೋಬಿ ಡ್ರೈ, ವೆಜ್‌, ಚಿಕನ್‌ ಪಿಜ್ಜಾ, ವಿವಿಧ ರೀತಿಯ ಫ್ರೈಗಳು, ಚಿಕನ್‌, ಮಟನ್‌, ಫಿಶ್‌ ತಂದೂರಿ ಅಂತಹ ಸ್ನ್ಯಾಕ್ಸ್‌ಗಳನ್ನು ಸೇವಿಸಿರುತ್ತೇವೆ. ಆದರೆ, ವಿವಿಧ ಕೀಟಗಳಿಂದ ಇಂತಹ ಹಲವಾರು ಖಾದ್ಯ ಮಾಡಬಹುದು ಎಂಬುದು ಕೃಷಿ ಮೇಳದ ಕೀಟಶಾಸ್ತ್ರ ವಿಭಾಗವು ಪ್ರಾತ್ಯಕ್ಷಿಕೆ ಮೂಲಕ ತೋರ್ಪಡಿಸಿದೆ. ರೈತರ ಜ್ಞಾನಾಭಿವೃದ್ಧಿ ಕೇಂದ್ರದ ಮೇಲಿನ ಮಹಡಿಯಲ್ಲಿರುವ ಕೀಟ ಪ್ರಪಂಚದಲ್ಲಿ ಇನಸೆಕ್ಟ್‌ ಫುಡ್‌ ಗಮನ ಸೆಳೆಯುತ್ತಿದೆ. ಇಲ್ಲಿ ರೇಷ್ಮೆ ಹುಳುವಿನ ಡ್ರೈ ಚಿಲ್ಲಿ, ರೇಷ್ಮೆ ಹುಳುವಿನ ಸೂಪ್‌, ಜಿರಳೆಯ ಡ್ರೈ, ಶಿವನಕುದುರೆಯ ತಂದೂರಿ, ಕಪ್ಪು ಸೈನಿಕ ನೊಣದ ಮಸಾಲಾ, ಕೀಟ ಮಿಶ್ರಣ ಪಿಜ್ಜಾ, ಮಿಡತೆಯ 65 ಆಕರ್ಷಣೆಯ ಜತೆಗೆ ಮೈ ಜುಮ್‌ ಎನಿಸುತ್ತಿದೆ.

ಕೀಟಶಾಸ್ತ್ರರ ಅಭಿಪ್ರಾಯದ ಪ್ರಕಾರ ಎಲ್ಲ ರೀತಿಯ ಆಹಾರಗಳಿಗಿಂತ ಸುಲಭ ಹಾಗೂ ಅತ್ಯಧಿಕ ಪ್ರಮಾಣದ ಪ್ರೋಟೀನ್‌ ಒದಗಿಸುವ ಕೀಟಗಳು ಒಳ್ಳೆಯ ಆಹಾರ. ಭಾರತೀಯರು ಇತ್ತೀಚಿನ ವರ್ಷಗಳಲ್ಲಿ ಇನಸೆಕ್ಟ್‌ ಫುಡ್‌ ಬಗ್ಗೆ ಆಸಕ್ತಿ ವಹಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳಿಂದ ನಮ್ಮ ವಿಭಾಗವು ಕೀಟ ಪ್ರಪಂಚದ ಪ್ರದರ್ಶನದಲ್ಲಿ ಕೀಟಗಳಿಂದ ತಯಾರಿಸಿರುವ ಆಹಾರ ಖಾದ್ಯಗಳ ಬಗ್ಗೆ ಜನರಿಗೆ ಮಾಹಿತಿ ನೀಡಲಾಗುತ್ತಿದೆ ಎಂದು ಕೀಟಶಾಸ್ತ್ರ ವಿಭಾಗದ ಪಿಎಚ್‌ಡಿ ಅಭ್ಯರ್ಥಿ ಶಿವಕುಮಾರ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.

ಇನಸೆಕ್ಟ್‌ ಫುಡ್‌ ಮಾತ್ರವಲ್ಲದೇ, ನಿತ್ಯ ನಮ್ಮೆದುರಿಗೆ ಇರುವ ಸಾವಿರಾರು ಕೀಟಗಳ ಬಗ್ಗೆ ಕುತೂಹಲಕಾರಿ ಅಪೂರ್ವ ಸಂಗತಿ ಇಲ್ಲಿ ಪ್ರದರ್ಶಿಸಲಾಗಿದೆ. ಕೀಟಗಳ ಜೀವಶಾಸ್ತ್ರ, ಸಂತಾನೋತ್ಪತ್ತಿ ಹಾಗೂ ಮಾನವನ ಜೊತೆಗಿನ ಸಂಬಂಧ ಬರವಣಿಗೆ ಮೂಲಕ ಪ್ರದರ್ಶಿಸಲಾಗಿದೆ. ಜತೆಗೆ ಕೀಟಭಕ್ಷ ಸಸ್ಯಗಳು, ಕೀಟಗಳಲ್ಲಿ ಇರುವ ಮೀಸೆಗಳ ವೈವಿಧ್ಯತೆ, ಕಾಲುಗಳ ವೈವಿಧ್ಯತೆ, ವಿವಿಧ ಕೀಟಗಳ ದೇಹ ರಚನೆ, ಕೀಟಗಳಿಂದಲೇ ವಿವಿಧ ಕಲಾಕೃತಿಗಳನ್ನು ಸಹ ಇಲ್ಲಿ ಪ್ರದರ್ಶಿಸಿದ್ದು, ಮಕ್ಕಳು, ಮಹಿಳೆಯರು ಹಾಗೂ ಸಾರ್ವಜನಿಕರನ್ನು ಈ ಕೀಟ ಪ್ರಪಂಚ ತುಂಬಾ ಸೆಳೆಯುತ್ತಿದೆ.

ಕೀಟಗಳ ಆಹಾರ ಇತ್ತೀಚಿಗೆ ಭಾರತದಲ್ಲಿ ಜನಪ್ರಿಯಗೊಳ್ಳುತ್ತಿದೆ. ಅದರಲ್ಲೂ ಈಶಾನ್ಯ ಭಾರತದಲ್ಲಿ ಇನಸೆಕ್ಟ್‌ ಫುಡ್‌ಗಳಿದ್ದು, ದಕ್ಷಿಣ ಭಾರತಕ್ಕೂ ನಿಧಾನವಾಗಿ ವ್ಯಾಪಿಸುತ್ತಿದೆ. ಪೂರ್ಣ ಪ್ರಮಾಣ ಪ್ರೋಟಿನ್ ಕೀಟಗಳಲ್ಲಿದ್ದು, ಬರುವ ದಿನಗಳಲ್ಲಿ ಬೇಡಿಕೆಯಂತೆ ಇದರ ಆಹಾರದ ಕೈಗಾರಿಕೆಗಳು ಸಹ ಶುರುವಾಗಬಹುದು. ಈ ಹಿನ್ನೆಲೆಯಲ್ಲಿ ಕೀಟ ಪ್ರಪಂಚ ಪ್ರದರ್ಶನದಲ್ಲಿ ಇನಸೆಕ್ಟ್‌ ಫುಡ್‌ ಪ್ರಮುಖ ಸ್ಥಾನ ಪಡೆದಿದೆ ಎಂದು ಕೀಟ ಶಾಸ್ತ್ರ ವಿಭಾಗದ ಮುಖ್ಯಸ್ಥರು ಡಾ. ಗಣಪತಿ ಹೆಗಡೆ ಹೇಳಿದ್ದಾರೆ.

PREV

Recommended Stories

ದಸರಾ ಹಬ್ಬ ಅದ್ಧೂರಿ ಆಚರಣೆಗೆ ಎಲ್ಲರೂ ಸಹಕರಿಸಿ: ಏಗಪ್ಪ ಸವದಿ
ಬಿಡಿಸಿಸಿ ಬ್ಯಾಂಕ್‌ ಹಿತರಕ್ಷಣೆಗೆ ನಾವು ಬದ್ಧ