ಕನಕರಾಯನ ಜಾತ್ರೆಯಲ್ಲಿ ಶಂಖ, ಜಾಗಟೆ ನಾದ

KannadaprabhaNewsNetwork | Published : Mar 20, 2025 1:19 AM

ಸಾರಾಂಶ

ಬಡವರ ತಿರುಪತಿ ಎಂದು ಹೆಸರಾದ ಕನಕಗಿರಿಯ ಕನಕರಾಯನ ಜಾತ್ರೆಗೂ ಮುನ್ನ ಬ್ರಾಹ್ಮಣ, ಕ್ಷತ್ರಿಯ, ರೆಡ್ಡಿ, ನಾಯಕ, ಕುರುಬ, ಗಂಗಾಮತ, ಲಿಂಗಾಯತ, ಗೊಲ್ಲ, ಕುಂಬಾರ ಸೇರಿ ನಾನಾ ಸಮುದಾಯದವರು ದಾಸಪ್ಪನ ಕಾರ್ಯಕ್ರಮದ ಮೂಲಕ ವಿಶಿಷ್ಟ ಆಚರಣೆ ಮಾಡಲಾರಂಭಿಸುತ್ತಾರೆ.

ಎಂ. ಪ್ರಹ್ಲಾದ

ಕನಕಗಿರಿ:

ಜಾತ್ರೆ ಎಂದಾಕ್ಷಣ ಸಾಮಾನ್ಯವಾಗಿ ರಥೋತ್ಸವ, ಉಚ್ಛಾಯಗಳು ನಡೆಯುವುದು ಸಾಮಾನ್ಯ. ಆದರೆ, ಕನಕಗಿರಿ ಕನಕಾಚಲಪತಿ ಜಾತ್ರೆಗೂ ಮೊದಲು ಭಕ್ತರ ಮನೆ-ಮನೆಗಳಲ್ಲಿ ದಾಸಪ್ಪನ ಕಾರ್ಯಕ್ರಮದ ಜತೆಗೆ ಶಂಖನಾದ, ಜಾಗಟೆಯ ಸದ್ದು ಮೊಳಗುತ್ತಿದೆ.

ಬಡವರ ತಿರುಪತಿ ಎಂದು ಹೆಸರಾದ ಕನಕಗಿರಿಯ ಕನಕರಾಯನ ಜಾತ್ರೆಗೂ ಮುನ್ನ ಬ್ರಾಹ್ಮಣ, ಕ್ಷತ್ರಿಯ, ರೆಡ್ಡಿ, ನಾಯಕ, ಕುರುಬ, ಗಂಗಾಮತ, ಲಿಂಗಾಯತ, ಗೊಲ್ಲ, ಕುಂಬಾರ ಸೇರಿ ನಾನಾ ಸಮುದಾಯದವರು ದಾಸಪ್ಪನ ಕಾರ್ಯಕ್ರಮದ ಮೂಲಕ ವಿಶಿಷ್ಟ ಆಚರಣೆ ಮಾಡಲಾರಂಭಿಸುತ್ತಾರೆ. ದಾಸಪ್ಪನವರನ್ನು ಮನೆಗೆ ಕರೆತಂದು ದಾಸಪ್ಪನ ಕಾರ್ಯಕ್ರಮ ಮಾಡುವ ಸಂಪ್ರದಾಯ ರೂಢಿಯಲ್ಲಿದೆ.

ದಾಸಪ್ಪನ ಪಾದಗಳಿಗೆ ನೀರು ಹಾಕಿ, ಮಡಿಯಿಂದ ಮನೆಯೊಳಗೆ ಕರೆತರುತ್ತಾರೆ. ಬಳಿಕ ಕಂಬಳಿ ಹಾಸಿ, ಗರುಡಗಂಭಕ್ಕೆ, ಮನೆಯ ಜಗಲಿ (ದೇವರಮನೆ) ಪೂಜೆ ಸಲ್ಲಿಸಿ ದಾಸಪ್ಪನವರ ಗೋಪಾಳಕ್ಕೆ ದವಸ, ಧಾನ್ಯ ತುಂಬಿ, ಶಂಖ, ಜಾಗಟೆಗಳಿಗೆ ಪೂಜೆಗೈದು ಆರತಿ ಬೆಳಗುತ್ತಾರೆ. ಸಂಪ್ರದಾಯದಂತೆ ಸಿಹಿ ಬೇಳೆ, ಕಡಬು, ಪಲ್ಲೆ, ಅನ್ನ-ಸಾಂಬಾರ, ಸಂಡಿಗೆ ತಯಾರಿಸಿ ನೈವೈದ್ಯ ಸಮರ್ಪಿಸುವ ಪೂರ್ವಜರ ಪದ್ಧತಿ ಇಂದಿಗೂ ನಡೆಯುತ್ತಿದೆ. ಎಲ್ಲ ಕಾರ್ಯಕ್ರಮಗಳು ಮುಕ್ತಾಯಗೊಳ್ಳುವ ಮುನ್ನ ದಾಸಪ್ಪನವರಿಂದ ಶಂಖನಾದ, ಜಾಗಟೆಯ ಸದ್ದು ಮೊಳಗಿಸಿ, ಗೋವಿಂದನನ್ನು ಸ್ಮರಿಸುವ ಈ ವಿಶಿಷ್ಟ ಕಾರ್ಯಕ್ರಮ ನಡೆಯುವುದು ವರ್ಷಕ್ಕೊಮ್ಮೆ ಮಾತ್ರ.

ಶಂಖ, ಜಾಗಟೆ ಬಾರಿಸುವುದೇಕೆ?

ಹಿರಿಯರ ಮತ್ತು ಶಾಸ್ತ್ರದ ಪ್ರಕಾರ ಶಂಖನಾದ ಹಾಗೂ ಜಾಗಟೆಯ ಸದ್ದಿನಿಂದ ಮನೆಯಲ್ಲಿರುವ ಪಿಶಾಚಿ, ಪೀಡೆ ಇರುವುದಿಲ್ಲ. ವರ್ಷಕ್ಕೊಮ್ಮೆ ಬರುವ ಜಾತ್ರಾ ಸಮಯದಲ್ಲಿ ಈ ಕಾರ್ಯಕ್ರಮ ಮಾಡುವುದರಿಂದ ಕುಟುಂಬಕ್ಕೆ ಒಳಿತಾಗಲಿದೆ ಎಂಬ ನಂಬಿಕೆಯಿಂದ ಪಟ್ಟಣದ ಗಲ್ಲಿ-ಗಲ್ಲಿಗಳಲ್ಲಿಯೂ ದಾಸಪ್ಪನವರು ಜಾಗಟೆ-ಶಂಖ ಊದುವ ಮೂಲಕ ಮೂಲ ಪರಂಪರೆ ಇಂದಿಗೂ ಮುಂದುವರಿದಿದೆ.

ಯಾರು ಈ ದಾಸಪ್ಪನವರು?

ಹಿಂದಿನ ಕಾಲದಿಂದಲೂ ಗೊಲ್ಲ ಅಥವಾ ಯಾದವ ಕುಲಕ್ಕೆ ಸೇರಿದವರೇ ಈ ದಾಸಪ್ಪನವರಾಗಿದ್ದು, ಜಾತ್ರೆ ಸಂದರ್ಭಗಳಲ್ಲಿ ಅಲ್ಲದೇ ವರ್ಷವಿಡಿ ನಡೆಯುವ ಹಲವು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮೊದಲ ಆದ್ಯತೆ ದಾಸಪ್ಪನವರಿಗೆ ನೀಡಲಾಗುತ್ತಿದೆ. ದಾಸಪ್ಪನ ಕಾರ್ಯಕ್ರಮ ಮುಗಿದ ಮೇಲೆ ಎಲ್ಲ ಕಾರ್ಯಗಳು ಸಾಂಗವಾಗಿ ನಡೆಯಲಿವೆ ಎಂಬ ನಂಬಿಕೆಯಿಂದಾಗಿಯೇ ದಾಸಪ್ಪನವರನ್ನು ಮೊದಲಿಗೆ ಆಹ್ವಾನಿಸಿ ಪೂಜಾ ಕಾರ್ಯವೆಲ್ಲ ಶ್ರದ್ಧೆಯಿಂದ ಮುಗಿಸುತ್ತಾರೆ. ಪ್ರತಿಯೊಂದು ಧಾರ್ಮಿಕ ಕಾರ್ಯ ನಡೆಯಲು ದಾಸಪ್ಪನವರು ಪಾಲ್ಗೊಳ್ಳಬೇಕೆಂಬುದು ನಿಯಮವಿದೆ. ಈಗಲೂ ಎಲ್ಲ ಕಾರ್ಯಗಳಲ್ಲಿಯೂ ತಪ್ಪದೆ ಭಾಗವಹಿಸುತ್ತಾರೆ.

ಬಳ್ಳಾರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಯ ನಾನಾ ಗ್ರಾಮಗಳಲ್ಲಿನ ದಾಸರು, ಗೊಲ್ಲ ಸಮುದಾಯಕ್ಕೆ ಸೇರಿದ ದಾಸಪ್ಪನವರು ಕನಕರಾಯನ ಜಾತ್ರೆಗೆ ಬಂದು ಹರಿಕೆ ಹೊತ್ತ ಭಕ್ತರ ಮನೆಗಳಿಗೆ ತೆರಳಿ ಪೂಜೆ ಸಲ್ಲಿಸುವುದು ಪೂರ್ವಜರ ಕಾಲದಿಂದಲೂ ಇದೆ. ಹಿರಿಯರಂತೆ ಈಗಲೂ ಪದ್ಧತಿ ಮುಂದುವರಿಸುತ್ತಿದ್ದೇವೆ. ಈ ಜಾತ್ರೆಯಲ್ಲಿ ಶಂಖ, ಜಾಗಟೆಯ ನಾದ ಕೇಳುವುದೇ ಒಂದು ವಿಶೇಷ ಎಂದು ಮಂಜುನಾಥ ಯಾದವ ಹೇಳಿದರು.ಕನಕರಾಯನ ಜಾತ್ರೆ ಮೂರುದಿನ ಮುಂಚಿತವಾಗಿ ಪಟ್ಟಣದ ತುಂಬೆಲ್ಲ ದಾಸಪ್ಪನ ಕಾರ್ಯಕ್ರಮ ಮಾಡುತ್ತಾರೆ. ಕುಟುಂಬಕ್ಕೆ ಒಳತಿಗಾಗಿ ಈ ಧಾರ್ಮಿಕ ಕಾರ್ಯಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಶಂಖ, ಜಾಗಟೆ ಮೂಲ ಆಳ್ವರ್ ಅವರದ್ದಾಗಿದೆ. ಪನ್ನಿದ್ಧರಾಳ್ವರ್ ಪರಂಪರೆ ಕನಕಗಿರಿಯಲ್ಲಿರುವುದು ವಿಶೇಷ ಎಂದು ಇತಿಹಾಸಕಾರ

ಪಂಪಾರೆಡ್ಡಿ ಗಚ್ಚಿನಮನಿ ತಿಳಿಸಿದ್ದಾರೆ.

Share this article