ನಗರಸಭೆ ಸಾಮಾನ್ಯ ಸಭೆಯಲ್ಲಿ ಪೌರಾಯುಕ್ತ ವಿರುದ್ಧ ಅಸಮಾಧಾನ ಸ್ಫೋಟ!

KannadaprabhaNewsNetwork | Published : Dec 22, 2023 1:30 AM

ಸಾರಾಂಶ

ಮಡಿಕೇರಿಯಲ್ಲಿ ಗುರುವಾರ ನಡೆದ ನಗರ ಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರಿಂದ ಅಸಮಧಾನ ಸ್ಫೋಟಗೊಂಡು, ಪೌರಾಯುಕ್ತರ ಮೇಲೆ ನೇರ ಆರೋಪಗಳ ಸುರಿಮಳೆಯೇ ಕೇಳಿ ಬಂತು. ಭಾವುಕರಾದ ಪೌರಾಯುಕ್ತ ವಿಜಯ್, ನನ್ನ ಕರ್ತವ್ಯದಲ್ಲಿ ನಾನು ತಪ್ಪು ಮಾಡಿದ್ದು ಸಾಬೀತಾದರೆ ನನಗೆ ಮರಣ ದಂಡನೆ ನೀಡಿ ಎಂದರು.

ಕನ್ನಡಪ್ರಭ ವಾರ್ತೆ ಮಡಿಕೇರಿ ಮಡಿಕೇರಿಯಲ್ಲಿ ಗುರುವಾರ ನಡೆದ ನಗರ ಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರಿಂದ ಅಸಮಧಾನ ಸ್ಫೋಟಗೊಂಡು, ಪೌರಾಯುಕ್ತರ ಮೇಲೆ ನೇರ ಆರೋಪಗಳ ಸುರಿಮಳೆಯೇ ಕೇಳಿ ಬಂತು.ಈ ಸಂದರ್ಭ ಭಾವುಕರಾದ ಪೌರಾಯುಕ್ತ ವಿಜಯ್, ನನ್ನ ಕರ್ತವ್ಯದಲ್ಲಿ ನಾನು ತಪ್ಪು ಮಾಡಿದ್ದು ಸಾಬೀತಾದರೆ ನನಗೆ ಮರಣ ದಂಡನೆ ನೀಡಿ ಎಂದು ನುಡಿದರು.ನಾನು ಬಂದಾಗ ಉತ್ಸಾಹದಿಂದ ಕೆಲಸ ಮಾಡುತ್ತಿದ್ದೆ. ಆದರೆ ಬಳಿಕ ಹಲವು ಅಧಿಕಾರಿ, ಸಿಬ್ಬಂದಿ ವರ್ಗಾವಣೆಯಾದರು ಇದರಿಂದಾಗಿ ಒಬ್ಬಂಟಿ ಆಗಿ ಕೆಲಸ ಮಾಡಲು ನನಗೆ ಅಸಾಧ್ಯವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.ನಡೆದದ್ದೇನು?: ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಅನಿತಾ ಪೂವಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಗರ ಸಭೆಯ ಆಡಳಿತ ವೈಫಲ್ಯ ಹಾಗೂ ಅಧಿಕಾರಿಗಳು ತೋರುತ್ತಿರುವ ಅಸಹಾಯಕತೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸ್ವಪಕ್ಷೀಯರೇ ಪೌರಾಯುಕ್ತರ ವಿರುದ್ಧ ವಾಗ್ದಾಳಿ ನಡೆಸಿದರು.ನಗರಸಭೆ ಬಗ್ಗೆ ಜನ ವಿಶ್ವಾಸ ಕಳೆದುಕೊಂಡಿದ್ದಾರೆ. ಅಧಿಕಾರಿಗಳು ಕೆಲಸ ಮಾಡದೆ ಆಡಳಿತ ಮಂಡಳಿಗೆ ಕೆಟ್ಟ ಹೆಸರು ತರುತಿದ್ದಾರೆ ಎಂದು ಬಿಜೆಪಿ ಸದಸ್ಯರಾದ ಸತೀಶ್ ಹಾಗೂ ಉಮೇಶ್ ಸುಬ್ರಮಣಿ ಗಂಭೀರ ಆರೋಪ ಮಾಡಿದರು ಜನಪ್ರತಿನಿಧಿಗಳು ಮತ್ತು ಜನರ ನಡುವೆ ಪೌರಾಯುಕ್ತರು ಕೆಟ್ಟ ಅಭಿಪ್ರಾಯ ಬರಲು ಕಾರಣರಾಗಿದ್ದಾರೆ. ನನ್ನ ಸ್ವಂತ ಕಟ್ಟಡಕ್ಕೆ ಫಾರಂ.3 ಪಡೆಯಲು ಅಸಾದ್ಯವಾಗುವ ಸ್ಥಿತಿ ಇದೇ ಎಂದು ಸದಸ್ಯೆ ಶ್ವೇತಾ ಪ್ರಶಾಂತ್ ಅಸಮಾಧಾನ ವ್ಯಕ್ತಪಡಿಸಿದರೆ. ಸದಸ್ಯ ಅಪ್ಪಣ್ಣ ಮಾತನಾಡಿ, ಜನಪ್ರತಿನಿಧಿಗಳ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ. ಗೂಟ ಹೊಡೆದು ಕುಳಿತ ಅಧಿಕಾರಿಗಳನ್ನು ಇಲ್ಲಿಂದ ಕಳುಹಿಸಬೇಕು ಎಂದು ಆಕ್ರೋಶ ಹೊರಹಾಕಿದ ಅವರು, ನಗರಸಭೆಯಲ್ಲಿ ಜನರ ಕೆಲಸ ಆಗುತ್ತಿಲ್ಲ. ನನಗೇ ನಗರಸಭೆಗೆ ಬರಲು ಕಷ್ಟ ಆಗುತ್ತಿದೆ ಎಂದು ಆರೋಪಿಸಿದರು.ಎಸ್‌ಡಿಪಿಐ ಮುಖಂಡ ಹಾಗೂ ನಗರಸಭೆ ಸದಸ್ಯ ಅಮೀನ್ ಮೋಹಿಸಿನ್ ಮಾತನಾಡಿ, ಯಾರದ್ದೋ ಮಾತು ಕೇಳಿ ಅಧ್ಯಕ್ಷರು ದಾರಿ ತಪ್ಪಿದ್ದಾರೆ. ಇನ್ನಾದರೂ ಅಧಿಕಾರಿಗಳನ್ನು ಸರಿಯಾದ ಮಾರ್ಗ ದರ್ಶನ ಮೂಲಕ ಆಡಳಿತ ಸರಿ ಪಡಿಸಿಕೊಳ್ಳಲಿ ಎಂದರು.ಕಲ್ಲು ಹೊಡೆಯುವ ಪರಿಸ್ಥಿತಿ: ಕಾಂಗ್ರೆಸ್ ಸದಸ್ಯ ರಾಜೇಶ್ ಎಲ್ಲಪ್ಪ ಮಾತನಾಡಿ, ಆಡಳಿತ ಅವಧಿ ಮುಕ್ತಾಯ ಹಂತದಲ್ಲಿ ಇದೆ. ಹೀಗಾಗಿ ನೀವು ಆಸಕ್ತಿ ಕಳೆದುಕೊಂಡ ಹಾಗೆ ಕಾಣುತ್ತ ಇದೇ. 25 ವರ್ಷಗಳಲ್ಲಿ ಇಂಥ ಆಡಳಿತ ಮಡಿಕೇರಿ ಜನ ನೋಡಿಲ್ಲ. ನನಗೂ ನಗರಸಭೆಗೆ ಬರಲು ಆಗದ ಪರಿಸ್ಥಿತಿ ಇದೆ. ಇಂಥ ಸ್ಥಿತಿ ಮುಂದುವರಿದರೆ ಜನ ನಗರಸಭೆಗೆ ಕಲ್ಲು ಹೊಡೆಯುವ ದಂಗೆ ಏಳುವ ಪರಿಸ್ಥಿತಿ ಇದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರುಕೆ.ಎಸ್. ರಮೇಶ್ ಮಾತನಾಡಿ, ಅಧಿಕಾರಿಗಳ ಮೇಲೆ ಕೋರ್ಟ್ ಗೆ ಹೋಗಿ. ಕೆಲಸ ಮಾಡದ ಅಧಿಕಾರಿಗಳು ಮಡಿಕೇರಿಗೆ ಬೇಡ. ನಮ್ಮ ಆಡಳಿತದ ಮೇಲೆ ಆರೋಪ ಮಾಡುವ ದುಃಸ್ಥಿತಿ ಇದೆ. ಇದಕ್ಕೆ ಪೌರಾಯುಕ್ತರೇ ಮೂಲ ಕಾರಣ ಎಂದರು.ಮಹೇಶ್ ಜೈನಿ ಮಾತನಾಡಿ, ಸದಸ್ಯರು ಹೇಳಿದ ಕೆಲ್ಸ ಮಾಡಬಾರದು ಎಂದು ಸಿಬ್ಬಂದಿಗೆ ಪೌರಾಯುಕ್ತ ಸೂಚನೆ ನೀಡಿದ್ದಾರೆ. ವಿಚಿತ್ರ ವರ್ತನೆ ಸಿಬ್ಬಂದಿ ಮೂಲಕ ಆಗ್ತಾ ಇದೆ ಎಂದು ಆರೋಪ ಮಾಡಿದರು. ಫಾರಂ ನಂಬರ್ 3 ಆಗದೆ ಜನ ಹೈರಾಣ ಆಗಿದ್ದಾರೆ ಎಂದು ಹಿಗ್ಗಾ ಮುಗ್ಗಾ ಆರೋಪ ಕೇಳಿ ಬಂದಿದೆ ಎಂದರು ರಸ್ತೆ ದು:ಸ್ಥಿತಿ ಬಗ್ಗೆ ಪ್ರಸ್ತಾಪ:ಮಡಿಕೇರಿ ನಗರಸಭೆ ಸಾಮಾನ್ಯ ಸಭೆಯಲ್ಲಿ ನಗರದ ರಸ್ತೆ ದುಃಸ್ಥಿತಿ ಬಗ್ಗೆ ಪ್ರಸ್ತಾಪಿಸಿದ ಎಸ್ಡಿಪಿಐ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ ಅಡಳಿತ ಪಕ್ಷ ಸಭೆ ಕೂಡ ಕರೆಯುವುದಿಲ್ಲ. ರಸ್ತೆ ಕೂಡ ದುರಸ್ತಿ ಮಾಡುವುದಿಲ್ಲ. ಜನರ ಕೆಲಸ ಕೂಡ ಆಗುತ್ತಿಲ್ಲ. ಜನ ನಗರಸಭೆ ಆಡಳಿತದ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದಾರೆ. ನಿನ್ನೆ ಕೂಡ ರಸ್ತೆ ದುಸ್ಥಿತಿ ಬಗ್ಗೆ ವಿಡಿಯೋ ವೈರಲ್ ಆಗಿದೆ ಎಂದು ಸದಸ್ಯರಾದ ಅಮೀನ್ ಮೋಹಿಸಿನ್, ಮನ್ಸೂರ್ ಅಸಮಾಧಾನ ಹೊರಹಾಕಿದರು.ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಅನಿತಾ ಪೂವಯ್ಯ, ಟೆಂಡರ್ ಕರೆಯದೇ ರಸ್ತೆ ಕಾಮಗಾರಿ ಅಸಾದ್ಯ.ನಾಳೆಯೇ ಟೆಂಡರ್ ಕರೆದು ಕಾಮಗಾರಿ ಆರಂಭ ಮಾಡುತ್ತೇವೆ. ಅಕೌಂಟೆಂಟ್ ಕೊರತೆ ಹಿನ್ನಲೆ ಸಭೆ ಕರೆಯಲು ವಿಳಂಬ ಆಗಿದೆ. ಸದ್ಯದಲ್ಲೇ ಶಾಸಕರ ಬಳಿ ನಿಯೋಗ ತೆರಳಿ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

Share this article