ಕನ್ನಡಪ್ರಭ ವಾರ್ತೆ ಉಚ್ಚಿಲ
ಇಲ್ಲಿನ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವೀಣಾಪಾಣಿ ಶಾರದೆಯ ಸನ್ನಿಧಿಯಲ್ಲಿ ಸೋಮವಾರ ನೂರೊಂದು ವೀಣೆಗಳ ಸುಶ್ರಾವ್ಯ ವಾದನವು ವೈಶಿಷ್ಟ್ಯಪೂರ್ಣ ನಾದಲೋಕವನ್ನು ಸೃಷ್ಟಿಸಿತು.ಇಲ್ಲಿ ನಡೆಯುತ್ತಿರುವ ಉಡುಪಿ ಉಚ್ಚಿಲ ದಸರದಂಗವಾಗಿ ಸೋಮವಾರ ಲಲಿತಾ ಪಂಚಮಿಯಂದು ವಿದುಷಿ ಪವನ ಬಿ. ಆಚಾರ್ ಅವರ ನೇತೃತ್ವದಲ್ಲಿ ಏಕಕಾಲದಲ್ಲಿ ನೂರೊಂದು ವೀಣೆಗಳ ವಾದನ ಕಾರ್ಯಕ್ರಮವು ಶಾಲಿನಿ ಡಾ. ಜಿ.ಶಂಕರ್ ತೆರೆದ ಸಭಾಂಗಣದಲ್ಲಿ ಅಭೂತಪೂರ್ವವಾಗಿ ನಡೆಯಿತು.ಮೃದಂಗದಲ್ಲಿ ಡಾ. ಬಾಲಚಂದ್ರ ಆಚಾರ್, ರಿದಮ್ ಪ್ಯಾಡ್‌ನಲ್ಲಿ ಕಾರ್ತಿಕ್ ಭಟ್ ಇನ್ನಂಜೆ, ತಂಬೂರಿಯಲ್ಲಿ ವಿದುಷಿ ಸುರೇಖಾ ಎ. ಭಟ್, ತಾಳ ಹೇಮಲತಾ ರಾವ್ ಅವರ ಜೊತೆ ಉಡುಪಿ ಮತ್ತು ದ.ಕ. ಜಿಲ್ಲೆಯ ೧೦೮ ವೀಣಾ ವಾದಕ ಶಿಷ್ಯಂದಿರು ಸಹಕರಿಸಿದ್ದರು.ಈ ಸಂದರ್ಭ ದ.ಕ. ಮೊಗವೀರ ಮಹಾಜನ ಸಂಘ ಗೌರವ ಸಲಹೆಗಾರ ನಾಡೋಜ ಡಾ. ಜಿ.ಶಂಕರ್, ಸಂಘ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಉಪಾಧ್ಯಕ್ಷ ಮೋಹನ್ ಬೇಂಗ್ರೆ, ಪ್ರ. ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಜೊತೆ ಕಾರ್ಯದರ್ಶಿ ಸುಜಿತ್ ಸಾಲ್ಯಾನ್ ಮೂಲ್ಕಿ, ಕೋಶಾಧಿಕಾರಿ ರತ್ನಾಕರ ಸಾಲ್ಯಾನ್, ದೇವಳದ ಪ್ರಧಾನ ಅರ್ಚಕ ಕೆ.ವಿ. ರಾಘವೇಂದ್ರ ಉಪಾಧ್ಯಾಯ, ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಗಿರಿಧರ ಸುವರ್ಣ ಮೂಳೂರು, ಕಾರ್ಯದರ್ಶಿ ನಾರಾಯಣ ಸಿ. ಕರ್ಕೇರ, ಕೋಶಾಧಿಕಾರಿ ಸುಧಾಕರ್ ಕುಂದರ್, ದಸರಾ ಮಹೋತ್ಸವ ಸಂಚಾಲಕ ವಿನಯ ಕರ್ಕೆರ ಮಲ್ಪೆ, ಮಹಿಳಾ ಮಂಡಳಿ ಅಧ್ಯಕ್ಷೆ ಉಷಾರಾಣಿ ಬೋಳೂರು, ಪ್ರಧಾನ ಕಾರ್ಯದರ್ಶಿ ಉಷಾ ಲೋಕೇಶ್, ಕಾಪು ನಾಲ್ಕುಪಟ್ಣ ಮೊಗವೀರ ಸಭಾ ಉಚ್ಚಿಲ ಅಧ್ಯಕ್ಷ ಮನೋಜ್ ಪಿ. ಕಾಂಚನ್, ಮಹಿಳಾ ಸಭಾ ಅಧ್ಯಕ್ಷೆ ಸುಗುಣ ಎಸ್. ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು. ದೇವಳದ ಪ್ರಬಂಧಕ ಸತೀಶ್ ಅಮೀನ್ ಪಡುಕೆರೆ ನಿರೂಪಿಸಿ, ವಂದಿಸಿದರು.