ಉತ್ತರ ಕನ್ನಡದಲ್ಲಿ ಮತ್ತೆ ಪ್ರತ್ಯೇಕ ಜಿಲ್ಲೆಯ ಕೂಗು ಮುನ್ನೆಲೆಗೆ

KannadaprabhaNewsNetwork |  
Published : Dec 14, 2024, 12:46 AM IST
ಸಾಂದರ್ಭಿಕ ಚಿತ್ರ | Kannada Prabha

ಸಾರಾಂಶ

ಪ್ರತ್ಯೇಕ ಜಿಲ್ಲೆ ಬೇಕು, ಬೇಡ ಎಂಬ ವಾದ ವಿವಾದ ಕೂಡ ಜಿಲ್ಲೆಯಲ್ಲಿ ಕೇಳಿಬರುತ್ತಿದೆ. ಘಟ್ಟದ ಮೇಲಿನ ಜನತೆ ಅಭಿವೃದ್ಧಿಯ ವಿಚಾರವನ್ನು ಮುಂದಿಡುತ್ತಿದ್ದರೆ, ಕರಾವಳಿ ಜನತೆ ಭಾವನಾತ್ಮಕ ವಿಚಾರ ಮುಂದಿಡುತ್ತಿದ್ದಾರೆ. ಆ ಬೇಕು, ಬೇಡಗಳ ಕೆಲವು ಸ್ಯಾಂಪಲ್ ಇಲ್ಲಿದೆ.

ವಸಂತಕುಮಾರ್ ಕತಗಾಲಕಾರವಾರ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ವ್ಯಾಪಕವಾಗಿ ಕೇಳಿಬಂದಿದ್ದ ಜಿಲ್ಲಾ ವಿಭಜನೆಯ ಕೂಗು ಈಗ ಜೋರಾಗಿದೆ. ರಾಜಕೀಯ ಕಾರಣವಾಗಲಿ, ಸಾಮಾಜಿಕ ಕಾರಣವೇ ಆಗಿರಲಿ ಪ್ರತ್ಯೇಕ ಜಿಲ್ಲೆಯ ಕೂಗು ಈಗ ಮುನ್ನೆಲೆಗೆ ಬಂದಿದೆ. ಬೆಳಗಾವಿ ಸುವರ್ಣ ಸೌಧಕ್ಕೆ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರು ಶಿರಸಿ ಜಿಲ್ಲೆಯ ಬಗ್ಗೆ ಬೇಡಿಕೆ ಮಂಡಿಸಲು ಪ್ರತ್ಯೇಕ ಜಿಲ್ಲೆಯ ಬಗ್ಗೆ ಹೋರಾಟ ನಡೆಸುತ್ತಿರುವ ಅನಂತಮೂರ್ತಿ ಹೆಗಡೆ ಮುಂದಾಗಿದ್ದಾರೆ. ಪ್ರತ್ಯೇಕ ಜಿಲ್ಲೆ ಬೇಕು, ಬೇಡ ಎಂಬ ವಾದ ವಿವಾದ ಕೂಡ ಜಿಲ್ಲೆಯಲ್ಲಿ ಕೇಳಿಬರುತ್ತಿದೆ. ಘಟ್ಟದ ಮೇಲಿನ ಜನತೆ ಅಭಿವೃದ್ಧಿಯ ವಿಚಾರವನ್ನು ಮುಂದಿಡುತ್ತಿದ್ದರೆ, ಕರಾವಳಿ ಜನತೆ ಭಾವನಾತ್ಮಕ ವಿಚಾರ ಮುಂದಿಡುತ್ತಿದ್ದಾರೆ. ಆ ಬೇಕು, ಬೇಡಗಳ ಕೆಲವು ಸ್ಯಾಂಪಲ್ ಇಲ್ಲಿದೆ. ಕರಾವಳಿಯಲ್ಲಿ ಸೀಬರ್ಡ್ ನೌಕಾನೆಲೆ ಇದೆ. ಇದರಿಂದ ಸ್ಥಳೀಯರಿಗೆ ಪರೋಕ್ಷವಾಗಿ ಉದ್ಯೋಗ ಸೃಷ್ಟಿಯಾಗಿದೆ. ಕೊಂಕಣ ರೈಲ್ವೆ ಇದೆ. ಕರಾವಳಿ ಜನರ ಸುಗಮ ಸಂಚಾರಕ್ಕೆ ಅನುಕೂಲವಾಗಿದೆ. ಕೈಗಾ ಅಣು ವಿದ್ಯುತ್ ಯೋಜನೆ ಇದೆ. ಸ್ಥಳೀಯರಿಗೆ ಗುತ್ತಿಗೆ ಮತ್ತಿತರ ಉದ್ಯೋಗ ಲಭಿಸುತ್ತದೆ. ಕದ್ರಾ, ಕೊಡಸಳ್ಳಿ ಜಲ ವಿದ್ಯುತ್ ಯೋಜನೆಗಳೂ ಇವೆ. ಕಾರವಾರದಲ್ಲಿ ವಾಣಿಜ್ಯ ಬಂದರು ಇದೆ. ಸಾಲು ಸಾಲಾಗಿ ಮೀನುಗಾರಿಕಾ ಬಂದರುಗಳಿವೆ. ಹೊನ್ನಾವರ, ಕೇಣಿಯಲ್ಲಿ ಬಂದರು ಬರಲಿದೆ.

ಕಾರವಾರದಲ್ಲಿ ಸರ್ಕಾರದ ಮೆಡಿಕಲ್ ಕಾಲೇಜು, ಎಂಜಿನಿಯರಿಂಗ್ ಕಾಲೇಜು ಆಗಿದೆ. ಯಾವುದೆ ಯೋಜನೆಗಳು ಬಂದರೂ ಕರಾವಳಿ ಪಾಲಾಗುತ್ತಿದೆ. ಘಟ್ಟದ ಮೇಲಿನ ತಾಲೂಕುಗಳಲ್ಲಿ ಅಭಿವೃದ್ಧಿ ಆಗುತ್ತಿಲ್ಲ ಎನ್ನುವುದು ಘಟ್ಟದ ಮೇಲಿನ ತಾಲೂಕುಗಳ ಜನತೆಯ ಅಂಬೋಣ.

ಜತೆಗೆ ಯಾವುದೆ ಸರ್ಕಾರಿ ಕೆಲಸಕ್ಕೆ ಜಿಲ್ಲಾ ಕೇಂದ್ರಕ್ಕೆ ಹೋಗಬೇಕೆಂದರೆ ಕಾರವಾರ ತುಂಬಾ ದೂರ ಆಗಲಿದೆ. ಒಂದು ದಿನ ಜಿಲ್ಲಾ ಕೇಂದ್ರದಲ್ಲಿ ವಾಸ್ತವ್ಯ ಮಾಡಬೇಕಾಗಿ ಬರಲಿದೆ. ಘಟ್ಟದ ಮೇಲಿನ ತಾಲೂಕುಗಳನ್ನು ಸೇರಿಸಿ ಶಿರಸಿ ಜಿಲ್ಲೆಯಾದರೆ ಅಭಿವೃದ್ಧಿ ಸಾಧ್ಯವಾಗಲಿದೆ. ಜಿಲ್ಲಾ ಕೇಂದ್ರ ಸಮೀಪವೂ ಆಗಲಿದೆ ಎಂಬ ಹಿನ್ನೆಲೆ ಪ್ರತ್ಯೇಕ ಜಿಲ್ಲೆಯ ಕೂಗು ಮತ್ತೆ ಎದ್ದಿದೆ. ಕರಾವಳಿ ಜನತೆ ಭಾವನಾತ್ಮಕ ಸಂಬಂಧವನ್ನು ಮುಂದಿಡುತ್ತಿದ್ದಾರೆ. ಅಖಂಡ ಉತ್ತರ ಕನ್ನಡವನ್ನು ವಿಭಜಿಸಿದರೆ ಸರಿಯಾಗಲಾರದು. ಕರಾವಳಿ, ಮಲೆನಾಡು, ಬಯಲುಸೀಮೆ ಇವೆಲ್ಲವನ್ನೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ನೋಡಬಹುದು. ಅಭಿವೃದ್ಧಿಗಾಗಿ ಒತ್ತಾಯಿಸೋಣ. ಜಿಲ್ಲಾದ್ಯಂತ ಅಭಿವೃದ್ಧಿ ಆಗಲಿ. ಆದರೆ ಅದನ್ನು ಬಿಟ್ಟು ಜಿಲ್ಲೆಯನ್ನು ಒಡೆಯುವುದು ಬೇಡ ಎಂಬ ಅಭಿಪ್ರಾಯವನ್ನು ಮುಂದಿಡುತ್ತಿದ್ದಾರೆ. ಅಭಿವೃದ್ಧಿಯ ವಿಕೇಂದ್ರೀಕರಣ ಆಗದೆ ಇರುವುದೇ ಪ್ರತ್ಯೇಕ ಜಿಲ್ಲೆಯ ಕೂಗು ಕೇಳಿಬರಲು ಕಾರಣವಾಗಿದೆ. ಜಿಲ್ಲೆಯ ಎಲ್ಲೆಡೆ ಅಭಿವೃದ್ಧಿ ಆದಲ್ಲಿ ಜಿಲ್ಲೆಯನ್ನು ವಿಭಜಿಸುವ ಮಾತುಗಳು ಮುನ್ನೆಲೆಗೆ ಬರುತ್ತಿರಲಿಲ್ಲ ಎನ್ನುವುದು ಕೆಲ ಪ್ರಮುಖರ ಅಭಿಪ್ರಾಯವಾಗಿದೆ.

ರಾಜಕೀಯ ಉದ್ದೇಶಕ್ಕಲ್ಲ: ಪ್ರತ್ಯೇಕ ಜಿಲ್ಲೆಯ ಬಗ್ಗೆ ಹೋರಾಟ ನಡೆಸುತ್ತಿರುವುದು ರಾಜಕೀಯ ಉದ್ದೇಶಕ್ಕಲ್ಲ. ಅಭಿವೃದ್ಧಿಯ ಹಿನ್ನೆಲೆಯಲ್ಲಿ ಪ್ರತ್ಯೇಕ ಜಿಲ್ಲೆ ಆಗಲೇಬೇಕು. ನಮ್ಮ ಗುರಿ ಪ್ರತ್ಯೇಕ ಜಿಲ್ಲೆಯೇ ಹೊರತೂ ನಾಯಕತ್ವ ಅಲ್ಲ ಎಂದು ಪ್ರತ್ಯೇಕ ಜಿಲ್ಲೆಯ ಹೋರಾಟಗಾರ ಅನಂತಮೂರ್ತಿ ಹೆಗಡೆ ತಿಳಿಸಿದರು.

ಏಳು ತಾಲೂಕು ಸೇರಿ ಪ್ರತ್ಯೇಕ ಜಿಲ್ಲೆಯಾಗಲಿ...

ಕದಂಬ ಕನ್ನಡ ಹೆಸರಿನಲ್ಲಿ ಘಟ್ಟದ ಮೇಲಿನ ಶಿರಸಿ, ಸಿದ್ಧಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ದಾಂಡೇಲಿ ಹಾಗೂ ಜೋಯಿಡಾ ಏಳು ತಾಲೂಕುಗಳನ್ನು ಸೇರಿಸಿ ಪ್ರತ್ಯೇಕ ಜಿಲ್ಲೆ ರಚಿಸಲು ಹೋರಾಟ ನಡೆಯುತ್ತಿದೆ. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ಈ ಐದು ಕರಾವಳಿ ತಾಲೂಕುಗಳು ಒಂದು ಜಿಲ್ಲೆಯಾಗಿರಲಿ ಎನ್ನುವುದು ಪ್ರತ್ಯೇಕ ಜಿಲ್ಲೆ ಹೋರಾಟಗಾರರ ಅಭಿಪ್ರಾಯ.ಉತ್ತರ ಕನ್ನಡ ಜಿಲ್ಲೆ ವಿಭಜನೆ ಬೇಡ: ಕರವೇ

ಶಿರಸಿ: ಉತ್ತರ ಕನ್ನಡ ಅಖಂಡ ಜಿಲ್ಲೆಯಾಗಿಯೇ ಇರಬೇಕು. ಯಾವುದೇ ಕಾರಣಕ್ಕೆ ಒಡೆಯಬಾರದು. ಇಂತಹ ಪ್ರಯತ್ನಕ್ಕೆ ಮುಂದಾದರೆ ರಕ್ತಕ್ರಾಂತಿ ಆಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಎಚ್ಚರಿಸಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುಂದರ ಕರಾವಳಿ, ಮಲೆನಾಡು, ಬಯಲುಸೀಮೆ ಒಳಗೊಂಡ ಪ್ರದೇಶ ಉತ್ತರಕನ್ನಡ ಜಿಲ್ಲೆಯಲ್ಲಿ ಮಾತ್ರ ಕಾಣಬಹುದು. ಅಖಂಡವಾಗಿ ಅಭಿವೃದ್ಧಿಯಾಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಅನೇಕ ಜಿಲ್ಲಾ ಕಚೇರಿಗಳು ಶಿರಸಿಯಲ್ಲೂ ಇವೆ. ಇಡಿಯಾಗಿ ಜಿಲ್ಲೆ ಇರಬೇಕು. ಅಭಿವೃದ್ಧಿಗೆ ಹಣ ತರಬೇಕಿದೆ. ಅದಕ್ಕೆ ಒತ್ತಾಯ ಮಾಡೋಣ. ಜ. ೭ಕ್ಕೆ ಕಾರವಾರದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಬಗ್ಗೆ ಹಕ್ಕೊತ್ತಾಯದ ಮನವಿ ನೀಡಲಾಗುತ್ತದೆ ಎಂದ ಅವರು, ಜಿಲ್ಲೆಯನ್ನು ವಿಭಜನೆ ಮಾಡಲು ಹೊರಟಿರುವುದು ರಾಜಕೀಯ ಉದ್ದೇಶದಿಂದ. ರಾಜಕೀಯ ಅಸ್ತಿತ್ವ ಮತ್ತು ಪ್ರಚಾರಕ್ಕಾಗಿ ವಿಭಜನೆ ಮಾಡಲು ಹೊರಟಿಸಿದ್ದಾರೆ ಎಂದು ಆರೋಪಿಸಿದರು.ಅಭಿವೃದ್ಧಿ ಬಗ್ಗೆ ಹೋರಾಟ ಮಾಡಬೇಕು. ಅದು ಬಿಟ್ಟು ಬಿಜೆಪಿಯ ಹುದ್ದೆಯಲ್ಲಿರುವವರು ಈ ಹೇಳಿಕೆ ಮಾಡುವುದು ಸರಿಯಲ್ಲ. ೨೫ ವರ್ಷದಿಂದ ಬಿಜೆಪಿ ಆಡಳಿತದಲ್ಲಿದ್ದದ್ದು ಮರೆತರೋ ಹೇಗೋ ಎಂದು ಪ್ರಶ್ನಿಸಿದ ಅವರು, ಜಿಲ್ಲೆ ಇಬ್ಭಾಗ ಮಾಡದೇ ಅಖಂಡತೆ ಬಗ್ಗೆ ಮಾತನಾಡಬೇಕು. ಅಭಿವೃದ್ಧಿ ಬಗ್ಗೆ ಹೋರಾಡಲು ನಾವೂ ಬರುತ್ತೇವೆ ಎಂದ ಅವರು, ಸ್ವಾರ್ಥ, ರಾಜಕೀಯಕ್ಕಾಗಿ ಜಿಲ್ಲೆಯ ಹಿತ ಬಲಿ ನೀಡಬಾರದು. ನಮ್ಮ ಜಲ, ನೆಲ ಬಳಸಿಕೊಂಡು ಅನ್ಯ ಭಾಷಿಕರು ಹಣ ಮಾಡಲು ಹೊರಟಿದ್ದಾರೆ. ಈ ಬಗ್ಗೆ ಹೋರಾಟ ಮಾಡಲಿ ಎಂದು ಕುಟುಕಿದರು.ಕಾರವಾರ ಜಿಲ್ಲಾ ಕೇಂದ್ರ ದೂರವಾಗುತ್ತದೆ. ಕುಮಟಾ ಅದರೆ ಎಲ್ಲರಿಗೂ ಸಮೀಪವಾಗುತ್ತದೆ ಎಂದು ಮಾಧ್ಯಮದವರು ಪ್ರಶ್ನಿಸಿದಾಗ, ಗಡಿನಾಡ ಪ್ರದೇಶ ಆಗಿದ್ದರಿಂದ ಅಲ್ಲೇ ಇರಬೇಕು. ಅಖಂಡ ಜಿಲ್ಲೆ ಇರುವುದರಿಂದ ಯಾರಿಗೂ ಸಮಸ್ಯೆ ಇಲ್ಲ ಎಂದು ಭಾಸ್ಕರ ಪಟಗಾರ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಯುವರಾಜ ನಾಯ್ಕ, ಸಂತೋಷ ಗೌಡ, ಯಲ್ಲಾಪುರದ ಗಣೇಶ, ಶ್ರೀಕಾಂತ ಗೌಡ, ಲೀಲಾ ಮಾದರ ಮಂಜುನಾಥ ಗೌಡ, ಭಟ್ಕಳ ಘಟಕದ ರಂಜನ ದೇವಾಡಿಗ, ಸಂತೋಷ ನಾಯ್ಕ, ಅನುಸೂಯಾ ದಾಂಡೇಲಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಾಳಿಪಟ ದಾರ ಕುತ್ತಿಗೆ ಸೀಳಿ ಮಗಳನ್ನು ಹಾಸ್ಟೆಲ್‌ನಿಂದ ಕರೆತರಲು ಹೊರಟಿದ್ದ ಅಪ್ಪ ದಾರುಣ ಸಾವು
ಪೌರಾಯುಕ್ತೆಗೆ ಬೆಂಕಿ: ಕಾಂಗ್ರೆಸ್ಸಿಗನಿಂದ ಧಮ್ಕಿ