ವಯನಾಡಲ್ಲಿ ಭೀಕರ ಭೂಕುಸಿತ ದುರಂತ : ಮಕ್ಕಳ ಆಕ್ರಂದನ, ಗುರುತು ಸಿಗದ ಶವಗಳ ರಾಶಿ...

KannadaprabhaNewsNetwork |  
Published : Aug 06, 2024, 12:30 AM ISTUpdated : Aug 06, 2024, 02:02 PM IST
ಕಾವೇರಿ ಆಟೋ ಚಾಲಕರ ಸಂಘದ ಸದಸ್ಯರು. | Kannada Prabha

ಸಾರಾಂಶ

ಪ್ರಾಣದ ಹಂಗು ತೊರೆದು ಕಾರ್ಯಕರ್ತರ ದಂಡು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಅಲ್ಪಕಾಲ ತಮ್ಮಿಂದಾದ ಸೇವೆ ನೀಡುವ ಅವಕಾಶ ದೊರೆತಿತ್ತು ಎಂದು ಆಟೋ ಚಾಲಕರು ತಿಳಿಸಿದರು.

ಕುಶಾಲನಗರ : ಪೋಷಕರಿಲ್ಲದ ಅನಾಥ ಮಕ್ಕಳ ಆಕ್ರಂದನ, ಸಂತ್ರಸ್ತರ ಬತ್ತಿದ ಕಣ್ಣೀರು, ಗುರುತು ಪತ್ತೆಯಾಗದ ಶವಗಳ ರಾಶಿ, ಪ್ರಾಣದ ಹಂಗು ತೊರೆದು ರಕ್ಷಣಾ ಕಾರ್ಯದಲ್ಲಿ ತೊಡಗಿದ ಕಾರ್ಯಕರ್ತರ ದಂಡು...

ಇವು ಕುಶಾಲನಗರದಿಂದ ಕೇರಳದ ವಯನಾಡು ಗುಡ್ಡ ಕುಸಿತ ಪ್ರದೇಶಕ್ಕೆ ತಮ್ಮ ಆಟೋಗಳ ಮೂಲಕ ತೆರಳಿ ಕೈಲಾದ ಸಹಾಯ ಮಾಡಿ ಹಿಂತಿರುಗಿದ ಕುಶಾಲನಗರ ಕಾವೇರಿ ಆಟೋ ಚಾಲಕರ ಸಂಘದ ಸದಸ್ಯರು ಬಿಚ್ಚಿಟ್ಟ ಚಿತ್ರಣ. 

ಈ ದೃಶ್ಯಗಳನ್ನು ಕಂಡು ತಮ್ಮ ತಂಡದ ಸದಸ್ಯರಿಗೆ ಪರಸ್ಪರ ದುಃಖ ಹಂಚಿಕೊಳ್ಳಲು ಸಾಧ್ಯವಾಗಿಲ್ಲ ಎನ್ನುತ್ತಾರೆ ಸದಸ್ಯರು.ಎಂಟು ಆಟೋಗಳಲ್ಲಿ ಅಗತ್ಯ ಸಾಮಗ್ರಿಗಳನ್ನು ಹೊತ್ತು ತೆರಳಿದ 10ಕ್ಕೂ ಅಧಿಕ ಕುಶಾಲನಗರದ ಆಟೋ ಚಾಲಕರು ಭಾನುವಾರ ಬೆಳಗ್ಗೆ 5 ಗಂಟೆಗೆ ಹೊರಟು ವಯನಾಡಿಗೆ ತೆರಳಿದರು. ಘಟನೆ ನಡೆದ ಸುಮಾರು ಎಂಟು ಕಿಲೋಮೀಟರ್ ದೂರದಲ್ಲಿ ಆಟೋಗಳನ್ನು ಅಲ್ಲಿನ ಭದ್ರತಾ ಪಡೆ ಮುಂದೆ ತೆರಳಲು ಅವಕಾಶ ಕಲ್ಪಿಸದ ಕಾರಣ ಆಟೋ ಚಾಲಕರು ಆಟೋಗಳನ್ನು ಅಲ್ಲೇ ನಿಲ್ಲಿಸಿ ಸಾಮಗ್ರಿಗಳೊಂದಿಗೆ ಪರ್ಯಾಯ ವಾಹನಗಳ ಮೂಲಕ ಘಟನೆ ಸ್ಥಳಕ್ಕೆ ತಲುಪಬೇಕಾಯಿತು ಎಂದು ತಂಡದ ಪ್ರಮುಖ ಆರೀಫ್ ತಿಳಿಸಿದರು.

ಅಲ್ಲಿನ ಸ್ಥಿತಿಗತಿಯ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡ ಆರೀಫ್‌, ಘಟನಾ ಸ್ಥಳವಾದ ವಯನಾಡಿನ ಚೂರಲ್ ಮಾಲಾದಲ್ಲಿ ರಕ್ಷಣಾ ಇಲಾಖೆ ಸಿಬ್ಬಂದಿ ನಿರ್ಮಿಸಿದ ಸೇತುವೆ ಮೇಲಿಂದ ನೋಡಿದಾಗ ಇಡೀ ಪ್ರದೇಶವೇ ಸ್ಮಶಾನ ಸದೃಶವಾಗಿ ಕಂಡುಬಂತು. ಎಲ್ಲಿ ನೋಡಿದರೂ ಗುರುತು ಸಿಗದ ದೇಹಗಳು, ಸಾಮೂಹಿಕ ಅಂತ್ಯಕ್ರಿಯೆ ನಡೆಯುತ್ತಿರುವ ದೃಶ್ಯಗಳು, ಸ್ನೇಹಿತರಿಗಾಗಿ ಹುಡುಕಾಟ, ಸ್ವಲ್ಪವೇ ದೂರ ನೋಡಿದ ಸಂದರ್ಭ ಕಂಡಿದ್ದು ಭಗ್ನಗೊಂಡಿರುವ ಧಾರ್ಮಿಕ ಕೇಂದ್ರಗಳು, ಶಾಲೆಯಲ್ಲಿ ಅನಾಥರ ತಂಡ, ಬಿಕೋ ಎನ್ನುತ್ತಿದ್ದ ಶೈಕ್ಷಣಿಕ ಕೇಂದ್ರಗಳು ಈ ದೃಶ್ಯಗಳೇ ಕಣ್ಣಿಗೆ ರಾಚುತ್ತಿದ್ದವು ಎಂದು ತಿಳಿಸಿದರು.

ಮತ್ತೊಬ್ಬ ಸದಸ್ಯರಾದ ಕುಮಾರ್‌ ಮಾತನಾಡಿ, ತಮ್ಮ ತಂಡದ ಸದಸ್ಯರು ತೆರಳುವ ಸಂದರ್ಭ ಭದ್ರತಾ ಪಡೆಗಳು ಪ್ರಾರಂಭದಲ್ಲಿ ಮುಂದೆ ತೆರಳಲು ಅವಕಾಶ ಕಲ್ಪಿಸದಿದ್ದರೂ ನಂತರ ಅಲ್ಲಿನ ಕಲೆಕ್ಟರ್ ಆಫೀಸಿಗೆ ತೆರಳಿ ತಾವು ಕೊಡಗಿನಿಂದ ಬಂದಿರುವ ಬಗ್ಗೆ ಮತ್ತು ಉದ್ದೇಶದ ಬಗ್ಗೆ ಮನವರಿಕೆ ಮಾಡಿದಾಗ ತಾವು ತಂದಿದ್ದ ಅಗತ್ಯ ಸಾಮಗ್ರಿಗಳನ್ನು ಸಂತ್ರಸ್ತರ ಕೇಂದ್ರಕ್ಕೆ ಹಸ್ತಾಂತರ ಮಾಡುವ ಅವಕಾಶ ಲಭಿಸಿತು. ನಂತರ ಕೆಲವು ಪೊಲೀಸ್ ಅಧಿಕಾರಿಗಳ ಸಹಾಯದೊಂದಿಗೆ ಅಲ್ಲಿನ ಸಮಸ್ಯೆಗೆ ಒಳಗಾಗಿರುವ ಕೇಂದ್ರಗಳಲ್ಲಿ ಸ್ವಲ್ಪಕಾಲ ಸಹಾಯ ಹಸ್ತ ಚಾಚುವ ಕೆಲಸ ಕೂಡ ನಡೆಸಿದೆವು. ಮಸೀದಿ ಒಂದರಲ್ಲಿ ಸ್ಥಳದಲ್ಲಿದ್ದ ಕಾರ್ಯಕರ್ತರಿಗೆ, ಸಾರ್ವಜನಿಕರಿಗೆ ಅಗತ್ಯವಿದ್ದ ಆಹಾರ ಪೂರೈಕೆ ಮಾಡುವ ಕಾಯಕದಲ್ಲಿ ತೊಡಗಿದೆವು ಎಂದರು.

ದುರಂತ ನಾಡಿನಲ್ಲಿ ಅಲ್ಪ ಕಾಲ ತಮ್ಮಿಂದಾದ ಸೇವೆ ಸಲ್ಲಿಸುವ ಅವಕಾಶ ತಮಗೆ ದೊರತಿದೆ ಎನ್ನುತ್ತಾರೆ ಆಟೋ ಚಾಲಕರು. ಕೊನೆಗೆ ಸಂತ್ರಸ್ತ ಪ್ರದೇಶದಲ್ಲಿ ಸಿಲುಕಿದ್ದ ಅಲ್ಲಿನ ಬಸ್ ಮೂಲಕ ತಮ್ಮ ಆಟೋ ನಿಲ್ಲಿಸಿದ್ದ ಸ್ಥಳದ ತನಕ ಸಂಚಾರಕ್ಕೆ ಅವಕಾಶ ದೊರೆಯಿತು ಎಂದು ತಮ್ಮ ಅನುಭವದ ಬಗ್ಗೆ ‘ಕನ್ನಡ ಪ್ರಭ’ದೊಂದಿಗೆ ಹಂಚಿಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ