ನೀವ್ಯಾವ ರಾಜ್ಯದಲ್ಲಿ ದಲಿತರನ್ನು ಸಿಎಂ ಮಾಡಿದ್ದೀರಿ?

KannadaprabhaNewsNetwork |  
Published : Dec 01, 2025, 03:00 AM IST
ಬಿಜೆಪಿ ವಿರುದ್ಧ ಕಾಂಗ್ರೆಸ್ ಮುಖಂಡ ಗಣಿಹಾರ ಕಿಡಿ | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಬೇಕು, ಪಿಪಿಪಿ ಬೇಡ ಎಂದು ನಡೆಯುತ್ತಿರುವ ಮೆಡಿಕಲ್ ಕಾಲೇಜು ಹೋರಾಟಕ್ಕೆ ನಮ್ಮ ಸಹಮತವಿದೆ. ನಮ್ಮ ಪಕ್ಷದ ಮಂತ್ರಿಗಳು, ಶಾಸಕರು, ನಾಯಕರು ಎಲ್ಲರೂ ಭೇಟಿಯಾಗಿದ್ದಾರೆ. ಸಚಿವ ಎಂ.ಬಿ.ಪಾಟೀಲರ ನೇತೃತ್ವದಲ್ಲಿ ಒಂದು ವಾರದ ಹಿಂದೆ ಸಿಎಂ ಬಳಿ ಹೋರಾಟಗಾರರ ನಿಯೋಗ ಒಯ್ದಾಗ ಸಿಎಂ ಅವರು ಸರಿಯಾಗಿ ಸ್ಪಂದಿಸಿಲ್ಲ. ಹೋರಾಟಗಾರರಿಗೆ ಸ್ಪಂದಿಸಬೇಕಿತ್ತು ಎಂದು ಎಸ್.ಎಂ.ಪಾಟೀಲ ಗಣಿಹಾರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಬಿಜೆಪಿ ಜಿಲ್ಲಾ‌ ನಾಯಕರು, ಸಂಸದರಾದ ರಮೇಶ ಜಿಗಜಿಣಗಿ, ಗೋವಿಂದ ಕಾರಜೋಳ, ವಿಪಕ್ಷ ನಾಯಕ ಆರ್.ಅಶೋಕ ಸೇರಿದಂತೆ ಹಲವರು ಕಾಂಗ್ರೆಸ್ ಸರ್ಕಾರದ ಬಗ್ಗೆ ಅಸಹ್ಯಕರವಾಗಿ ಮಾತನಾಡುತ್ತಿದ್ದಾರೆ. ಇದು ಬಿಜೆಪಿ ಸಂಸ್ಕೃತಿಯಿರಬಹುದು. ಆದರೆ ಭಾರತೀಯ ಸಂಸ್ಕ್ರತಿಗೆ ಇದು ಸರಿಯಲ್ಲ ಎಂದು ಕೆಪಿಸಿಸಿ ವಕ್ತಾರ, ಅಹಿಂದ ಮುಖಂಡ ಎಸ್.ಎಂ.ಪಾಟೀಲ ಗಣಿಹಾರ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸತ್ತಿದೆ ಎಂದು ಟೀಕೆ ಮಾಡುವ ಬಿಜೆಪಿಗರೇ, ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಇದ್ದಾಗ ಜನ ಕಣ್ಣೀರು ಹಾಕಿದರು. ಆಗ ಬಿಜೆಪಿ ಸರ್ಕಾರ ಇತ್ತೋ ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸಬೇಕು. ಕಾಂಗ್ರೆಸ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರದ್ದು ಏನೂ ನಡೆಯೊಲ್ಲ ಎಂದು ಹೇಳಿದ್ದಾರೆ. ನಿಮ್ಮ ಪಕ್ಷದಲ್ಲೂ ಪ್ರಮುಖ ಹುದ್ದೆಯಲ್ಲಿರುವವರು ಡಮ್ಮಿಯಾಗಿದ್ದಾರೆಯೇ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ದಲಿತರನ್ನು ಸಿಎಂ ಮಾಡಲಿ ಎನ್ನುವ ಬಿಜೆಪಿಗರು, ಶೇ.90ರಷ್ಟು ರಾಜ್ಯಗಳಲ್ಲಿ ನಿಮ್ಮದೇ ಬಿಜೆಪಿ ಆಡಳಿತದಲ್ಲಿ ಇದೆ. ನೀವು ಯಾವ ರಾಜ್ಯದಲ್ಲಿ ದಲಿತರನ್ನು ಸಿಎಂ ಮಾಡಿದ್ದೀರಿ?. ರಮೇಶ ಜಿಗಜಿಣಗಿಯವರೇ 40 ವರ್ಷದ ರಾಜಕಾರಣದಲ್ಲಿರುವ ನೀವು ಯಾಕೆ ನಿಮ್ಮ‌ ಪಕ್ಷದಲ್ಲಿ ದಲಿತ ಸಿಎಂ ಧ್ವನಿ ಎತ್ತಿಲ್ಲ?. ಕಾರಜೋಳರೇ ನೀವು ಉಪ ಮುಖ್ಯಮಂತ್ರಿಯಾಗಿದ್ದರು, ನಿಮ್ಮದೇ ಪಕ್ಷದಲ್ಲಿ ಮೂವರು ಸಿಎಂ ಗಳನ್ನು ಬದಲಾವಣೆ ಮಾಡಿದರು. ಆಗ ನೀವು ಸಿಎಂ ಹುದ್ದೆ ಕೇಳಬೇಕಿತ್ತಲ್ಲವೇ?. 28 ರಾಜ್ಯಗಳಲ್ಲಿ 25 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿರುವುದರಿಂದ ಅಲ್ಲಿ ದಲಿತರನ್ನು ಸಿಎಂ ಮಾಡಿ ಎಂದು ಯಾಕೆ ಕೂಗು ಎತ್ತಿಲ್ಲ. ಬಿಜೆಪಿಯವರು ಬಿಜೆಪಿಯಲ್ಲಿ ದಲಿತರು ಸಿಎಂ ಆಗಬೇಕು ಎಂದು ಆಗ್ರಹಿಸಲಿ. ಕಾಂಗ್ರೆಸ್ ವಿಚಾರ ಅವರಿಗೆ ಬೇಡ ಎಂದರು.

ಇನ್ನು ಕಾಂಗ್ರೆಸ್‌ನಲ್ಲಿ ಸಿಎಂ ಆಗಲು ಶಾಸಕರ ಖರೀದಿ ಆಗುತ್ತಿದೆ ಎಂದು ಆರೋಪಿಸಿದ್ದಾರೆ. ನಿಮ್ಮ ಪಕ್ಷದ ಶಾಸಕರೇ ಆಗಿದ್ದ ಬಸನಗೌಡ ಪಾಟೀಲ ಯತ್ನಾಳರು ಪಕ್ಷದಲ್ಲಿದ್ದಾಗಲೇ ಎರಡೂವರೆ ಸಾವಿರ ಕೋಟಿ ರು. ಕೊಟ್ಟರೆ ಬಿಜೆಪಿಯಲ್ಲಿ ಸಿಎಂ ಆಗಬಹುದು ಎಂದು ಹೇಳಿಕೆ ಕೊಟ್ಟಿದ್ದರು. ಆಗ ಅವರ ವಿರುದ್ಧ ನೀವು ಒಬ್ಬರೂ ಧ್ವನಿ ಯಾಕೆ ಎತ್ತಲಿಲ್ಲ. ಮೌನಂ ಸಮ್ಮತಿ ಲಕ್ಷಣಂ ಎಂಬಂತೆ ಎಲ್ಲರೂ ಸುಮ್ಮನೆ ಕುಳಿತಿರಿ. ಹಾಗಾದರೆ ಅವರು ಹೇಳಿದ್ದು ಸರಿಯಾಗಿಯೇ ಇತ್ತು ಎಂಬಂತಲ್ಲವೇ? ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂದು ಸುಳ್ಳು ಹೇಳುವ ಬಿಜೆಪಿಗರು ಎಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂಬುದನ್ನು ತಿಳಿಸಬೇಕು.‌ ರಾಜ್ಯದಲ್ಲಿ ಪ್ರಕೃತಿ ವಿಕೋಪವಾಗಿದ್ದು, ಅದಕ್ಕೆ ಪರಿಹಾರವಾಗಿ ಕೇಂದ್ರದಿಂದ ಒಂದು ರು. ಬಿಡುಗಡೆಯಾಗಿಲ್ಲ. ಮಹಾರಾಷ್ಟ್ರಕ್ಕೆ ಒಂದೂವರೆ ಸಾವಿರ ಕೋಟಿ, ಕರ್ನಾಟಕಕ್ಕೆ ಕೇವಲ ₹400 ಕೋಟಿ ಕೊಟ್ಟಿದ್ದಾರೆ ಇದು ಯಾವ ನ್ಯಾಯ?. ಬಿಜೆಪಿ ಸಂಸದರು ಪ್ರಧಾನಿ ಮೋದಿ ಅವರಿಗೆ ಭೇಟಿಯಾಗಿ ಮಾತನಾಡಿದ್ದೀರಾ? ಸಂಸತ್ತಿನಲ್ಲಿ ಏನು ಮಾತನಾಡಿದ್ದೀರಿ? ಎಂಬುದನ್ನು ಸಂಸದರು ದಾಖಲೆ ಬಿಡುಗಡೆಗೊಳಿಸಬೇಕು. ಕಾಂಗ್ರೆಸ್ ರಾಜೀನಾಮೆಗೆ ಆಗ್ರಹಿಸುವ ನೀವು, ನಿಮ್ಮದೇ ಪಕ್ಷದವರೇ ಸಿಎಂ ಇದ್ದಾಗಲೇ ಜೈಲಿಗೆ ಹೋದರಲ್ಲಾ? ಆವಾಗ ಯಾಕೆ ರಾಜ್ಯಪಾಲರ ಆಡಳಿತ ಹಾಕಲಿಲ್ಲ ಎಂದು ಕೇಳಿದರು.

ಮುಖಂಡ ಡಾ.ರವಿಕುಮಾರ ಬಿರಾದಾರ ಮಾತನಾಡಿ, ಬಿಜೆಪಿಯಲ್ಲಿನ ಮನೋವಾದಿಗಳು ದಲಿತ ಸಿಎಂ ಆಗಬೇಕು ಎಂದು ಹೇಳುತ್ತಾರೆ. ಬಿಜೆಪಿಯವರೇ ರಾಮ ಮಂದಿರ ಧ್ವಜಾರೋಹಣಕ್ಕೆ ಇವರನ್ನು ಕರೆದಿಲ್ಲ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಸೇರಿದಂತೆ ಹಲವರ ಸಾಮೂಹಿಕ ನಾಯಕತ್ವದಲ್ಲಿ 2023ರಲ್ಲಿ ಕಾಂಗ್ರೆಸ್ ಅಭೂತಪೂರ್ವ ಬೆಂಬಲ‌ ಸಿಕ್ಕಿದೆ. ಆಗ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದ ಎಂ.ಬಿ.ಪಾಟೀಲರ ಶ್ರಮವೂ ಇದೆ. ಹಾಗಾಗೀ ಲಿಂಗಾಯತ ಸಮುದಾಯದಲ್ಲಿ ಮುಂದಿನ ದಿನಗಳಲ್ಲಿ ಎಂ.ಬಿ.ಪಾಟೀಲರು ಸಿಎಂ ಆಗಲಿ ಎಂಬ ಆಸೆಯಿದೆ ಎಂದರು. ಅದರಂತೆ ಪ್ರತಿ ಸಮುದಾಯದವರೂ ತಮ್ಮ ನಾಯಕರಿಗೆ ಸಿಎಂ ಹುದ್ದೆ ಸಿಗಲಿ ಎಂದು ಆಸೆ ಪಡುತ್ತಾರೆ. ಅವರವರ ಸಮುದಾಯಗಳಿಗೆ ಪ್ರಮುಖ ಹುದ್ದೆ ಬಯಸುವುದರಲ್ಲಿ ತಪ್ಪಿಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ವಸಂತ ಹೊನಮೊಡೆ, ಫಯಾಜ್ ಕಲಾದಗಿ ಉಪಸ್ಥಿತರಿದ್ದರು.

ವಿಜಯಪುರದಲ್ಲಿರುವ ಐತಿಹಾಸಿಕ ಸ್ಥಳಗಳನ್ನು ಕಾಂಗ್ರೆಸ್ ಸರ್ಕಾರದ ಪ್ರತಿನಿಧಿಗಳು ಸೇರಿದಂತೆ ಎಲ್ಲರೂ ನಿರ್ಲಕ್ಷ್ಯ ಮಾಡಿದ್ದಾರೆ. ಇನ್ನಾದರೂ ಅವುಗಳ ರಕ್ಷಣೆಯಾಗಲಿ. ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಬೇಕು, ಪಿಪಿಪಿ ಬೇಡ ಎಂದು ನಡೆಯುತ್ತಿರುವ ಮೆಡಿಕಲ್ ಕಾಲೇಜು ಹೋರಾಟಕ್ಕೆ ನಮ್ಮ ಸಹಮತವಿದೆ. ನಮ್ಮ ಪಕ್ಷದ ಮಂತ್ರಿಗಳು, ಶಾಸಕರು, ನಾಯಕರು ಎಲ್ಲರೂ ಭೇಟಿಯಾಗಿದ್ದಾರೆ. ಸಚಿವ ಎಂ.ಬಿ.ಪಾಟೀಲರ ನೇತೃತ್ವದಲ್ಲಿ ಒಂದು ವಾರದ ಹಿಂದೆ ಸಿಎಂ ಬಳಿ ಹೋರಾಟಗಾರರ ನಿಯೋಗ ಒಯ್ದಾಗ ಸಿಎಂ ಅವರು ಸರಿಯಾಗಿ ಸ್ಪಂದಿಸಿಲ್ಲ. ಹೋರಾಟಗಾರರಿಗೆ ಸ್ಪಂದಿಸಬೇಕಿತ್ತು ಎಂದು ಎಸ್.ಎಂ.ಪಾಟೀಲ ಗಣಿಹಾರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿವಿಧ ವಿಷಯಗಳ ಮುಂದಿಟ್ಟು ಫೆ.2ನೇ ವಾರ ಬೃಹತ್‌ ಪ್ರತಿಭಟನೆ: ಎಂ. ಗುರುಮೂರ್ತಿ ಮಾಹಿತಿ
ಸುಂಡಘಟ್ಟದಲ್ಲಿ ಬಸ್ ತಂಗುದಾಣ ಉದ್ಘಾಟನೆ