ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಮಡಿಕೇರಿ ಘಟಕ ತಾಲೂಕು ಕೇಂದ್ರ ಸೋಮವಾರಪೇಟೆ ಮಾರ್ಗದಲ್ಲಿ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸದೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕ ಆರೋಪಿಸಿದೆ. ಸರಿಯಾಗಿ ಬಸ್ ವ್ಯವಸ್ಥೆ ಕಲ್ಪಿಸದಿದ್ದಲ್ಲಿ ಇಲ್ಲಿನ ಬಸ್ ನಿಲ್ದಾಣದಲ್ಲಿ ಬಸ್‍ಗಳನ್ನು ತಡೆದು ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ವೇದಿಕೆಯ ಜಿಲ್ಲಾಧ್ಯಕ್ಷ ಕೆ.ಎನ್. ದೀಪಕ್, ಮಡಿಕೇರಿ ಘಟಕವು ಈ ಹಿಂದಿನಿಂದಲೂ ಸೋಮವಾರಪೇಟೆ ಮಾರ್ಗವನ್ನು ನಿರ್ಲಕ್ಷಿಸುತ್ತಿದ್ದು, ಸರಿಯಾದ ವೇಳೆಗೆ ಬಸ್ ಬರುತ್ತಿಲ್ಲ. ಹಲವು ಬಸ್‍ಗಳು ಮಾರ್ಗ ಮಧ್ಯದಲ್ಲಿ ನಿಲ್ಲುತ್ತಿವೆ. ಕಳೆದ ಒಂದು ವಾರದಲ್ಲಿ ಮೂರು ಬಾರಿ ಬಸ್‍ಗಳು ಮಾರ್ಗ ಮಧ್ಯದಲ್ಲಿ ನಿಲುಗಡೆಗೊಂಡಿವೆ. ಮಡಿಕೇರಿ ಘಟಕದ ಮೆಕ್ಯಾನಿಕ್‍ಗಳು ಬೇರೆ ಡಿಪೋಗೆ ಸೇರಿದ ಬಸ್‍ಗಳನ್ನು ದುರಸ್ತಿ ಮಾಡುವುದಿಲ್ಲ. ಪ್ರಯಾಣಿಕರ ಜೀವಕ್ಕೆ ತೊಂದರೆ ಆದರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯವರು ಜವಾಬ್ದಾರಿ ಹೊರಲು ಸಿದ್ಧವಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಮಡಿಕೇರಿಯಿಂದ ಬೆಳಗ್ಗೆ 8 ಗಂಟೆಗೆ ಹೊರಡುವ ಬಸ್‍ಗಳು ದುಃಸ್ಥಿತಿಯಲ್ಲಿದ್ದರೆ, 8.30 ರ ಬಸ್ ಸಮಯಕ್ಕೆ ಸರಿಯಾಗಿ ಬರುವುದೇ ಇಲ್ಲ. ವಿದ್ಯಾರ್ಥಿಗಳು, ಸರ್ಕಾರಿ ಉದ್ಯೋಗದಲ್ಲಿರುವ ಬಹಳಷ್ಟು ನೌಕರರು, ಬ್ಯಾಂಕ್ ಸಿಬ್ಬಂದಿಗೆ ಬಯೋಮೆಟ್ರಿಕ್ ವ್ಯವಸ್ಥೆ ಇರುವುದರಿಂದ ಸಮಯ ಪಾಲನೆ ಮಾಡಲು ಸಾಧ್ಯವಾಗುತ್ತಿಲ್ಲ. ಚಾಲಕರು ಅಥವಾ ನಿರ್ವಾಹಕರನ್ನು ಕೇಳಿದರೆ ಡಿಪೋದಲ್ಲಿ ಚಾರ್ಜ್‍ಮೆನ್‍ಗಳು ಬಸ್ ನೀಡುವುದಿಲ್ಲ ಎಂದು ದೂರುತ್ತಾರೆ.ಈ ಹಿಂದೆ ಸೋಮವಾರಪೇಟೆಯಿಂದ ಮಡಿಕೇರಿಗೆ ಬೆಳಗ್ಗೆ 6 ಗಂಟೆಗೆ ಹೊರಡುತ್ತಿದ್ದ ಬಸ್‍ಗೆ ಆ ಮಾರ್ಗದಲ್ಲಿ ಆದಾಯವಿದ್ದರೂ ಯಾವುದೇ ಕಾರಣ ಉಲ್ಲೇಖಿಸದೆ ನಿಲ್ಲಿಸಿದ್ದಾರೆ. ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಬೆಳಗ್ಗೆ 10 ಗಂಟೆಯಿಂದ ಸಂಜೆ 4.30ರ ವರೆಗೆ ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಸೋಮವಾರಪೇಟೆಗೆ ಯಾವುದೇ ಬಸ್ ವ್ಯವಸ್ಥೆ ಇಲ್ಲ. ಚಿಕ್ಕ ಜಿಲ್ಲೆ ಕೊಡಗಿನ ತಾಲೂಕು ಕೇಂದ್ರಗಳಿಗೆ ಸಂಪರ್ಕಿಸಲು ಬಸ್ ನೀಡಿಲ್ಲ. ಕೆಲವು ಬಸ್‍ಗಳು ದೋಷದಿಂದ ಕೂಡಿದ್ದರೂ ಎಫ್.ಸಿ.(ಕ್ಷಮತಾ ಪ್ರಮಾಣ ಪತ್ರ)ನೀಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.ಬಸ್‍ನಲ್ಲಿ ತಾಂತ್ರಿಕ ಸಮಸ್ಯೆ ಇರುವುದು ಮೊದಲೇ ಗೊತ್ತಿದ್ದರೂ ಅದನ್ನು ಡಿಪೋದಲ್ಲಿ ಸರಿಪಡಿಸುವ ಗೋಜಿಗೆ ಹೋಗುತ್ತಿಲ್ಲ. ಬಸ್‍ಗಳಲ್ಲಿ ಶುಚಿತ್ವ ಎಂಬುದು ಕೂಡ ಇಲ್ಲದಂತಾಗಿದೆ. ತಕ್ಷಣವೇ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಿ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡದೆ ಇದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.