ಕನ್ನಡಪ್ರಭ ವಾರ್ತೆ ಮಂಗಳೂರು ‘ಪೊಲೀಸ್ ಗೃಹ’ ಯೋಜನೆಯಡಿ ರಾಜ್ಯದ ಶೇ.40ರಷ್ಟು ಪೊಲೀಸರಿಗೆ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ಕನಿಷ್ಠ ಶೇ.70ರಷ್ಟು ಪೊಲೀಸರಿಗೆ ಕ್ವಾರ್ಟ್ರಸ್‌ಗಳನ್ನು ನಿರ್ಮಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ. ಭಾನುವಾರ ಮಂಗಳೂರು ಹೊರವಲಯದ ಬಜ್ಪೆ ಮತ್ತು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಸಿಎಆರ್‌ನ ನೂತನ ಕಚೇರಿ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. 2015ರಲ್ಲಿ ನಾನು ಗೃಹ ಸಚಿವನಾಗಿದ್ದಾಗ ಪೊಲೀಸರಿಗೆ ಗೃಹ ಭಾಗ್ಯದ ಯೋಜನೆ ಆರಂಭಿಸಲಾಗಿತ್ತು. ಇದೀಗ ಶೇ. 40ರಷ್ಟು ಸಿಬ್ಬಂದಿಗೆ ಹೊಸ ಕ್ವಾರ್ಟ್ರಸ್ ಕಟ್ಟಿ ಕೊಟ್ಟಿದೇವೆ. 2 ಬೆಡ್‌ರೂಂಗಳ ಅಪಾರ್ಟ್‌ಮೆಂಟ್ ಮಾದರಿಯ ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಈ ಸರ್ಕಾರದ ಅವಧಿ ಪೂರ್ಣಗೊಳ್ಳುವುದರೊಳಗೆ ಕನಿಷ್ಠ ಶೇ. 70 ಸಿಬ್ಬಂದಿಗೆ ವಸತಿ ಗೃಹಗಳನ್ನು ಒದಗಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು. ಠಾಣೆ ಆಧುನೀಕರಣ: ರಾಜ್ಯದ ಅನೇಕ ಪೊಲೀಸ್ ಠಾಣೆಗಳನ್ನು 50 ವರ್ಷಗಳಿಗಿಂತಲೂ ಹಿಂದೆ ನಿರ್ಮಿಸಲಾಗಿದೆ. ಪೊಲೀಸರು ಇಂಥ ಮೂಲಸೌಕರ್ಯ ವಂಚಿತ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಬಾರದು ಎಂಬ ಉದ್ದೇಶದಿಂದ ರಾಜ್ಯದ ಪೊಲೀಸ್ ಠಾಣೆಗಳಿಗೆ ಹೊಸ ಕಟ್ಟಡ ಕಟ್ಟಿಕೊಟ್ಟು ಆಧುನೀಕರಣಗೊಳಿಸಲಾಗುತ್ತಿದೆ ಎಂದು ಪರಮೇಶ್ವರ್ ತಿಳಿಸಿದರು. ಪ್ರಸ್ತುತ ರಾಜ್ಯ ತೀವ್ರ ಬರಗಾಲದಿಂದ ತತ್ತರಿಸುತ್ತಿದೆ. 200ಕ್ಕೂ ಅಧಿಕ ತಾಲೂಕುಗಳು ಬರಪೀಡಿತವಾಗಿ ಸುಮಾರು 37 ಸಾವಿರ ಕೋಟಿ ರುಪಾಯಿ ನಷ್ಟ ಅಂದಾಜಿಸಲಾಗಿದ್ದು, ಅದರಲ್ಲಿ 17 ಸಾವಿರ ರು.ಗಳನ್ನು ಕೇಂದ್ರ ಸರ್ಕಾರ ನೀಡುವಂತೆ ಮನವಿ ಸಲ್ಲಿಸಲಾಗಿದೆ. ಎಷ್ಟು ನಷ್ಟ ಪರಿಹಾರ ನೀಡುತ್ತಾರೋ ನೋಡಬೇಕು ಎಂದರು. ಕರ್ನಾಟಕ ಪೊಲೀಸ್ ರಾಷ್ಟ್ರದಲ್ಲೇ ಶಿಸ್ತಿನ ಪೊಲೀಸ್ ಎಂಬ ಹೆಸರು ಪಡೆದುಕೊಂಡಿದೆ. ಸಣ್ಣ ನ್ಯೂನತೆ ಇದ್ದರೂ ನಿಜವಾಗಿ ಪ್ರಾಮಾಣಿಕ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ಬೇಕಾದ ಎಲ್ಲ ವಾತಾವರಣ ಮಾಡಿ ಕೊಟ್ಟಿದೇವೆ ಎಂದು ಗೃಹ ಸಚಿವರು ಹೇಳಿದರು. ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ, ಪೊಲೀಸ್ ಇಲಾಖೆಯ ಭವಿಷ್ಯದ ದೃಷ್ಟಿಯಿಂದ ಆಧುನಿಕ ಪೊಲೀಸ್ ಠಾಣೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದು ಜಿಲ್ಲೆಯ ಅಭಿವೃದ್ಧಿಗೆ ಪೂರಕ ಆಗಲಿದೆ. ಪ್ರಸ್ತುತ ರಾಜ್ಯದ ಜನಸಂಖ್ಯೆಗೆ ಹೋಲಿಸಿದರೆ ಶೇ.14ರಷ್ಟು ಪೊಲೀಸರು ಇರಬಹುದು. ಅವರು ಆತ್ಮವಿಶ್ವಾಸದಿಂದ ಕೆಲಸ ಮಾಡಲು ಇಂಥ ಮೂಲ ಸೌಕರ್ಯಗಳು ಪೂರಕವಾಗಲಿವೆ ಎಂದರು. ಶಾಸಕ ಡಾ.ವೈ.ಭರತ್ ಶೆಟ್ಟಿ ಮಾತನಾಡಿ, ಕೆಲವು ಪೊಲೀಸ್ ಠಾಣೆಗಳಲ್ಲಿ ಸಿಬ್ಬಂದಿ ಕೊರತೆ ಇದೆ. ಜಿಲ್ಲೆಯಲ್ಲಿ ಮಾದಕ ದ್ರವ್ಯ ಹಾವಳಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸುವತ್ತ ಗಮನ ಹರಿಸಬೇಕಿದೆ. ರಾಜಕೀಯ ಹಸ್ತಕ್ಷೇಪವಿಲ್ಲದೆ ಪೊಲೀಸರಿಗೆ ಮುಕ್ತ ಹಸ್ತ ನೀಡಬೇಕು ಎಂದು ಹೇಳಿದರು. ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಸ್ವಾಗತಿಸಿದರು. ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಮಂಜುನಾಥ ಭಂಡಾರಿ, ಮಾಜಿ ಸಚಿವ ರಮಾನಾಥ ರೈ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮತ್ತಿತರರಿದ್ದರು. ಶಾಂತಿ ಕಾಪಾಡುವ ಹೊಣೆ-ಎಚ್ಚರಿಕೆ ದ.ಕ. ಭಾಗದಲ್ಲಿ ಅನೇಕ ಘಟನೆಗಳು ನಡೆದುಹೋಗಿವೆ. ಕೆಲವು ಹತ್ಯೆಗಳು, ಗೊಂದಲಗಳು ಆಗಿವೆ. ಈ ಬಾರಿ ಪೊಲೀಸ್ ಹಿರಿಯ ಅಧಿಕಾರಿಗಳಿಗೆ ಶಾಂತಿ ಕಾಪಾಡುವ ಟಾರ್ಗೆಟ್ ನೀಡಿದ್ದೇನೆ. ಈ ಟಾರ್ಗೆಟ್ ರೀಚ್ ಆಗದಿದ್ದರೆ ಕಮಿಷನರ್, ಎಸ್ಪಿ, ಐಜಿಪಿ ಅವರನ್ನೇ ಟಾರ್ಗೆಟ್ ಮಾಡುವ ಎಚ್ಚರಿಕೆ ನೀಡಿದ್ದೇನೆ. ಶಾಂತಿ ಕಾಪಾಡುವ ಕೆಲಸ ಮಾಡದಿದ್ದರೆ ಅವರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಡಾ. ಪರಮೇಶ್ವರ್ ಹೇಳಿದರು. ಬಜ್ಪೆ ಠಾಣೆಯನ್ನು 1959ರಲ್ಲಿ ಸ್ಥಾಪಿಸಲಾಗಿತ್ತು. ಹೊಸ ಕಟ್ಟಡವನ್ನು 1.92 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಮಂಗಳೂರು ಗ್ರಾಮಾಂತರ ಠಾಣೆಯನ್ನು 1959ರಲ್ಲಿ ಸ್ಥಾಪಿಸಲಾಗಿದ್ದು, 2.72 ಕೋಟಿ ರು. ವೆಚ್ಚದಲ್ಲಿ ಹೊಸ ಕಟ್ಟಡವನ್ನು ನಿರ್ಮಿಸಲಾಗಿದೆ ಮತ್ತು 3.80 ಕೋಟಿ ರು. ವೆಚ್ಚದಲ್ಲಿ ಸಿಎಆರ್ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದರು.