ಕನ್ನಡಪ್ರಭ ವಾರ್ತೆ ಚಾಮರಾಜನಗರ
ಮಾಜಿ ರಾಜ್ಯಪಾಲರಾದ ದಿವಂಗತ ಬಿ.ರಾಚಯ್ಯ ಅವರ ಸ್ಮಾರಕ ಉದ್ಘಾಟನೆ ಆ.10 ರಂದು ಬೆಳಗ್ಗೆ 11 ಗಂಟೆಗೆ ತಾಲೂಕಿನ ಆಲೂರು ಗ್ರಾಮದ ಬಿ.ರಾಚಯ್ಯ ಅವರ ಚಿರಶಾಂತಿಧಾಮದಲ್ಲಿ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಮಾರಕ ಉದ್ಘಾಟಿಸುವರು ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಆಲೂರಿನ ಬಿ.ರಾಚಯ್ಯ ಅವರು ರಾಜ್ಯ ಮತ್ತು ಕೇಂದ್ರ ಸಚಿವರಾಗಿ ಹಾಗೂ ಹಿಮಾಚಲ ಪ್ರದೇಶ, ಕೇರಳ ಮತ್ತು ಹೆಚ್ಚುವರಿಯಾಗಿ ಗೋವಾ ರಾಜ್ಯಗಳ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಚಾಮರಾಜನಗರ ಜಿಲ್ಲೆಯು ಸೇರಿದಂತೆ ಅವಿಭಜಿತ ಮೈಸೂರು ಭಾಗದ ಅಭಿವೃದ್ಧಿಗೆ ರಾಜ್ಯ, ರಾಷ್ಟ್ರಕ್ಕೆ, ಬಿ.ರಾಚಯ್ಯ ಅವರ ಕೊಡುಗೆ ಅನನ್ಯ ಹಾಗೂ ಅವಿಸ್ಮರಣೀಯ ಎಂದರು.
ಸಮಾಜ ಕಲ್ಯಾಣ ಇಲಾಖೆಯ ಅನುದಾನ ಹಾಗೂ ಸಹಕಾರದೊಂದಿಗೆ ನಿರ್ಮಾಣ ಮಾಡಲಾಗಿರುವ ಬಿ.ರಾಚಯ್ಯ ಸ್ಮಾರಕ ಉದ್ಘಾಟನೆಯನ್ನು ಸಿಎಂ ಸಿದ್ದರಾಮಯ್ಯ ಅವರು ನೆರವೇರಿಸಲಿದ್ದು, ಡಿಸಿಎಂ ಡಿ.ಕೆ ಶಿವಕುಮಾರ್ ಜ್ಯೋತಿ ಬೆಳಗಿಸುವರು, ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಬಿ.ರಾಚಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವರು. ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ.ಎಚ್.ಸಿ.ಮಹದೇವಪ್ಪ ಬಿ.ರಾಚಯ್ಯ ಲೈಫ್ ಆ್ಯಂಡ್ ಪಾಲಿಟಿಕ್ಸ್ ಪುಸ್ತಕ ಬಿಡುಗಡೆ ಮಾಡುವರು.ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಘನ ಉಪಸ್ಥಿತರಿರಲಿದ್ದು, ಶಾಸಕ ಸಿ.ಪುಟ್ಟರಂಗಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸುವರು. ಸಂಸದ ಸುನೀಲ್ ಬೋಸ್, ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಎಚ್.ಎಂ.ಗಣೇಶ್ ಪ್ರಸಾದ್, ಎಂ.ಆರ್.ಮಂಜುನಾಥ್, ದರ್ಶನ್ ಧ್ರುವನಾರಾಯಣ್, ಅನಿಲ್ ಚಿಕ್ಕಮಾದು, ಡಾ.ಯತೀಂದ್ರ ಸಿದ್ದರಾಮಯ್ಯ, ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಮಧು ಜಿ. ಮಾದೇಗೌಡ, ಕೆ.ವಿವೇಕಾನಂದ, ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್.ಜಯಣ್ಣ, ಕಾವೇರಿ ಜಲಾನಯನ ಯೋಜನೆ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ.ಮರಿಸ್ವಾಮಿ, ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ.ಚಂದ್ರು, ಆಲೂರು ಗ್ರಾಪಂ ಅಧ್ಯಕ್ಷ ದುಂಡಮ್ಮ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿ.ರಾಚಯ್ಯ ಅವರ ಧರ್ಮಪತ್ನಿ ಗೌರಮ್ಮ ಬಿ.ರಾಚಯ್ಯ ಅವರಿಗೆ ಗೌರವ ಸಮರ್ಪಣೆ ಮಾಡಲಾಗುತ್ತದೆ. ಸ್ಮಾರಕದ ವಿನ್ಯಾಸಕರಾದ ಕಿಶೋರ್ ಚಂದ್ರ, ಬಿ.ರಾಚಯ್ಯ ಅವರ ಜೀವನ ಮತ್ತು ರಾಜ ನೀತಿ ಪುಸ್ತಕದ ಲೇಖಕ ಡಾ.ಎಂ.ನಂಜಯ್ಯ ಹೊಂಗನೂರು, ಅನುವಾದಕ ಡಾ.ಸಿ.ನಾಗಣ್ಣ ಮತ್ತು ಬಿ.ವಿ.ಶ್ರೀಧರ ಅವರನ್ನು ಸನ್ಮಾನಿಸಲಾಗುತ್ತದೆ ಎಂದರು.ಬಿ.ರಾಚಯ್ಯ ಅವರ ಜೀವನ ಸಾಧನೆ ಕುರಿತು ಅಪರೂಪದ ಛಾಯಾಚಿತ್ರ ಪುದರ್ಶನ ಇರಲಿದ್ದು, ಇದೇ ಸಮಾರಂಭದಲ್ಲಿ ರೈತರಲ್ಲಿ ಸಹಜ ಬೇಸಾಯ ಪದ್ಧತಿ ಅಳವಡಿಕೆಗೆ ಉತ್ತೇಜಿಸುವ ನಿಟ್ಟಿನಲ್ಲಿ ಅನುಷ್ಠಾನಗೊಳಿಸಲಿರುವ ಸಹಜ ಬೇಸಾಯ ಪದ್ಧತಿ ಕಾರ್ಯಕ್ರಮದ ಲೋಗೋ ಅನಾವರಣ ನಡೆಯಲಿದೆ.
ಎಸ್ಪಿ ಡಾ.ಬಿ.ಟಿ.ಕವಿತಾ ಮಾತನಾಡಿ, ಕಾರ್ಯಕ್ರಮದ ಹಿನ್ನೆಲೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರಿಗೆ ಸ್ಮಾರಕ ಭವನದ ಪಕ್ಕದಲ್ಲಿ ಹಾಗೂ ವಿಐಪಿಗಳಿಗೆ ಕೊಳದ ಮುಂಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ದೊಡ್ಡರಾಯಪೇಟೆಯಿಂದ ಆಲೂರಿಗೆ ಹೋಗುವ ಮಾರ್ಗದಲ್ಲಿ ಸಮಾರಂಭಕ್ಕೆ ಬರುವ ವಾಹನಗಳಿಗೆ ಅವಕಾಶ ನೀಡಿದ್ದೇವೆ. ಕಾಗಲವಾಡಿಯಿಂದ ಆಲೂರಿಗೆ ಬರುವ ಮಾರ್ಗದಲ್ಲೂ ಸಮಾರಂಭಕ್ಕೆ ಬರುವ ವಾಹನಗಳಿಗೆ ಅವಕಾಶ ನೀಡಲಾಗುತ್ತಿದೆ. ಚಾಮರಾಜನಗರಕ್ಕೆ ಆಗಮಿಸುವ ವಾಹನಗಳು ಚಂದಕವಾಡಿ ಮಾರ್ಗವಾಗಿ ನಗರಕ್ಕೆ ಬರಬೇಕಿದೆ ಎಂದು ತಿಳಿಸಿದರು. ಜಿಪಂ ಸಿಇಒ ಮೋನಾ ರೋತ್ ಅವರು ಉಪಸ್ಥಿತರಿದ್ದರು.