ಕನ್ನಡಪ್ರಭ ವಾರ್ತೆ ಮೈಸೂರು
ಕಲೆ ವಯಸ್ಸು, ಜಾತಿ, ಮತ, ಲಿಂಗಭೇದಗಳು ಸೇರಿದಂತೆ ಎಲ್ಲವನ್ನು ಮೀರಿದ್ದಾಗಿದೆ. ಇಲ್ಲಿ ಎಲ್ಲರೂ ಸಮಾನರು. ಕಲೆಯ ಮೂಲಕ ಧ್ವನಿ ಎತ್ತಬೇಕು ಎಂದು ಚಲನಚಿತ್ರ ನಟಿ ಭಾವನಾ ರಾಮಣ್ಣ ತಿಳಿಸಿದರು.ರಂಗಾಯಣವು ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಅಂಗವಾಗಿ ಆಯೋಜಿಸಿರುವ ಬಹುರೂಪಿ ಚಲನಚಿತ್ರೋತ್ಸವವನ್ನು ಮಂಗಳವಾರ ಭೂಮಿಗೀತದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಪ್ರಶ್ನಿಸುವ ಅವಕಾಶ ಎಲ್ಲರಿಗೂ ಸಿಗಬೇಕು. ಇನ್ನೊಬ್ಬರ ದನಿಯನ್ನು ಆಲಿಸುವ ಸೂಕ್ಷ್ಮತೆ ಎಲ್ಲರಿಗೂ ಬರಬೇಕು. ಅಂತಹ ವಾತಾವರಣ ನಿರ್ಮಿತಿಯು ಕಲೆಯಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಬಿಡುಗಡೆ, ಸ್ವಾತಂತ್ರ್ಯ ಇನ್ನೊಬ್ಬರಿಂದ ಕಸಿಯುವುದಲ್ಲ. ಸಮಾಜ, ವ್ಯವಸ್ಥೆ ಹಾಕಿರುವ ಕಡಿವಾಣ, ಬಂಧನ, ಜಾತಿ– ಮತ ಸಂಕೋಲೆಗಳಿಂದ ಬಿಡುಗಡೆ ಪಡೆಯಬೇಕೆಂದರೆ ಮೊದಲು ಸ್ವತಃ ಪ್ರಶ್ನಿಸಿಕೊಳ್ಳಬೇಕು. ನಂತರ ವ್ಯವಸ್ಥೆಯನ್ನು ಪ್ರಶ್ನಿಸಬೇಕು. ಆ ಧೈರ್ಯವನ್ನು ಕಲೆಗಳು ನೀಡುತ್ತವೆ. ಅಧಿಕಾರದಲ್ಲಿದ್ದವರು ಕಡಿವಾಣ ಹಾಕುತ್ತಿದ್ದಾರೆ. ಭಯವನ್ನು ನಿರ್ಮಿಸಲಾಗುತ್ತಿದೆ. ಪ್ರಜಾಪ್ರಭುತ್ವ ಉಳಿಯಲು ನಮಗಾಗಿ ಪ್ರಶ್ನೆಗಳನ್ನು ಕೇಳಬೇಕಿದೆ ಎಂದರು.ಬಾಲ್ಯಕ್ಕೆ ಪ್ರಾಮುಖ್ಯತೆ ನೀಡಿ
ಪ್ರಸ್ತುತ ಮಕ್ಕಳಿಗೆ ಒಳ್ಳೆಯ ಬಾಲ್ಯ ಸಿಗುತ್ತಿಲ್ಲ. ನಾಲ್ಕು ಗೋಡೆಗಳನ್ನು ಅವರನ್ನು ಬಂಧಿಸಲಾಗಿದೆ. ಹೀಗಾಗಿ, ಬಾಲ್ಯಕ್ಕೆ ತುಂಬಾ ಪ್ರಾಮುಖ್ಯತೆ ನೀಡಬೇಕು. ಬಾಲ್ಯ, ವೈಯಕ್ತಿಕ ಜೀವನದಲ್ಲಿ ನಡೆಯುವ ಘಟನೆಗಳು ಜೀವನವನ್ನು ಪ್ರಭಾವಿಸುತ್ತವೆ. ಬಾಲ್ಯದಲ್ಲಿ ವಾತವರಣ ಹಾಗೂ ಕಲಿಕೆಯೇ ನಮ್ಮ ಜೀವನ ದಾರಿಯನ್ನು ರೂಪಿಸುತ್ತದೆ. ಮಕ್ಕಳಿಗೆ ಉತ್ತಮ ಬಾಲ್ಯ ಕಟ್ಟಿಕೊಡಬೇಕು. ಕಲೆಯನ್ನು ಕಲಿಸಬೇಕು ಎಂದು ಅವರು ಹೇಳಿದರು.ಪ್ರಸ್ತುತ ಸಮಾಜದಲ್ಲಿ ವಿವಾಹ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಿವೆ. ಸ್ನೇಹಿತೆಯೊಬ್ಬರು ಕುಟುಂಬ ನ್ಯಾಯಾಲಯದ ನ್ಯಾಯಾಧೀಶೆ ಆಗಿದ್ದು, ಅಲ್ಲಿಗೆ ವಿಚ್ಛೇದನ ಕೋರಿ ಬರುತ್ತಿರುವ ಪ್ರಕರಣಗಳನ್ನು ನೋಡಿ ಖಿನ್ನತೆಗೊಳಾಗಿದ್ದರು. ಮಕ್ಕಳ ನಾಳಿನ ಭವಿಷ್ಯದ ಬಗ್ಗೆ ತಂದೆ– ತಾಯಿ ಯೋಚಿಸುತ್ತಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಆರಂಭದಲ್ಲಿ ಯುನೆಸೆಫ್ ಯುದ್ಧ ಕುರಿತು ನಿರ್ಮಿಸಿರುವ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ರಂಗಾಯಣ ನಿರ್ದೇಶಕ ಸತೀಶ್‌ತಿಪಟೂರು, ರಂಗಸಮಾಜದ ಸದಸ್ಯರಾದ ರಾಜಪ್ಪ ದಳವಾಯಿ, ಮಹಾಂತೇಶ ಗಜೇಂದ್ರಗಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ಬಹುರೂಪಿ ಚಲನಚಿತ್ರೋತ್ಸವ ಸಂಯೋಜಕ ಕೆ. ಮನು, ಸಂಚಾಲಕಿ ಬಿ.ಎನ್. ಶಶಿಕಲಾ ಇದ್ದರು. ಪ್ರೀತಿ ನಾಗರಾಜ್ ನಿರೂಪಿಸಿದರು.----
ಕೋಟ್...ಕಲಾವಿದರು ಬಡವರು ಇರಬಹುದು, ನಮ್ಮ ನಾಡು ಕಲೆಗಳ ಶ್ರೀಮಂತ ಬೀಡಾಗಲು ಕಲಾವಿದರ ಕೊಡುಗೆ ದೊಡ್ಡದಿದೆ. ಸಿನಿಮಾ ಹಾಗೂ ರಂಗಭೂಮಿ ಜೊತೆ ಜೊತೆಯಲ್ಲಿಯೇ ಸಾಗಬೇಕು.
- ಭಾವನಾ ರಾಮಣ್ಣ, ನಟಿ----
ವಿದೇಶಗಳಲ್ಲಿ ಬಂದಿರುವ ಸಾಕ್ಷ್ಯಚಿತ್ರಗಳಿಂದ ಕಾನೂನುಗಳು ಬದಲಾವಣೆ ಆಗಿರುವ ಉದಾಹರಣಗಳಿವೆ. ಆದರೆ, ನಮ್ಮಲ್ಲಿ ಸಾಕ್ಷ್ಯಚಿತ್ರಗಳು ಪ್ರಾಜೆಕ್ಟ್ ಗಳಿಗೆ ಮಾತ್ರ ಸೀಮಿತವಾಗಿವೆ.- ಕೆ. ಮನು, ಸಂಯೋಜಕ, ಬಹುರೂಪಿ ಚಲನಚಿತ್ರೋತ್ಸವ
----ಬಾಕ್ಸ್...
ಯಾವ್ಯಾವ ಚಿತ್ರಗಳ ಪ್ರದರ್ಶನ?ಬಹುರೂಪಿ ಚಲನಚಿತ್ರೋತ್ಸವದಲ್ಲಿ ಮೊದಲ ದಿನ ಮಂಗಳವಾರ ಇಮಾನ್ಸಿಪೇಷನ್ ಪ್ರದರ್ಶನವಾಯಿತು. ಜ.15 ರಂದು ಫ್ರೀಡಂ ಈಸ್ ಬ್ಯೂಟಿಫುಲ್, ದಿ ಜರ್ನಿ ಆಫ್ ಟಿಬೆಟನ್ ರೆಫ್ಯೂಜೀಸ್- ಎ ಸ್ಟ್ರಗಲ್ ಫಾರ್ ಫ್ರೀಡಂ ಅಕ್ರಾಸ್ ದ ಹಿಮಾಲಯಸ್ ಮತ್ತು ದಾಮುಲ್, ಜ.16 ರಂದು ಬಾರ್ಡರ್ ಲ್ಯಾಂಡ್ಸ್, ಜರ್ನಿ ಆಫ್ ಫ್ರೀಡಂ, 12 ಇಯರ್ಸ್ ಅ ಸ್ಲೇವ್, ಜ.17 ರಂದು ವೈಟ್ ಲೈಕ್ ಮಿ, ಫ್ಯಾನಿ ಲು ಹೇಮರ್ಸ್ ಅಮೆರಿಕಾ ಮತ್ತು ಚೋಮನದುಡಿ ಪ್ರದರ್ಶನವಾಗಲಿದೆ.
ಮಕ್ಕಳ ಚಲನಚಿತ್ರೋತ್ಸವದಲ್ಲಿ ಜ.18 ರಂದು ದ ಬಾಯ್ ದ ಮೊಲ್ ದ ಫಾಕ್ಸ್ ಅಂಡ್ ದ ಹಾರ್ಸ್, ಪ್ಯಾಡಿಂಗ್ಟನ್ ಇನ್ ಪೆರು, ಕವಿ, ರ್ಯಾಗ್ ಡಾಲ್, ಸ್ಪಿರಿಟ್- ಸ್ಟಾಲಿಯನ್ ಆಫ್ ದ ಸಿಮಿರಾನ್ ಹಾಗೂ ಜ.19 ರಂದು ದ ಸೈಲೆಂಟ್ ಚೈಲ್ಡ್, ಸಿಂಗ್, ಕ್ಲಾಸ್ ಡಿವೈಡ್ ಮತ್ತು ಸೆವನ್ ಇಯರ್ಸ್ ಇನ್ ಟಿಬೆಟ್ ಚಲನಚಿತ್ರ ಪ್ರದರ್ಶನವಿದೆ.