ಕನ್ನಡಪ್ರಭ ವಾರ್ತೆ ಮಡಿಕೇರಿ
ವಿದ್ಯಾರ್ಥಿಗಳಿಗೆ ಅವರ ಕೌಶಲ್ಯ, ಕಲಿಕೆ ಮತ್ತು ಉದ್ಯೋಗಾವಕಾಶವನ್ನು ಹೆಚ್ಚಿಸಲು ಮಾಹಿತಿ ತಂತ್ರಜ್ಞಾನ ಆಧಾರಿತ, ಉದ್ಯಮ ಸಂಯೋಜಿತ ಹಾಗೂ ಉದ್ಯೋಗ ಆಧಾರಿತ ವಿಶೇಷ ಕೋರ್ಸ್‌ಗಳನ್ನು ಜ. 25ರಂದು ಮಡಿಕೇರಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ.ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಅನುದೀಪ್ ಫೌಂಡೇಶನ್ ಮತ್ತು ಐಬಿಎಂ ಕೌಶಲ್ಯ ಅಭಿವೃದ್ಧಿ ವೇದಿಕೆ (ಸ್ಕಿಲ್ಸ್ ಬಿಲ್ಡ್ ಪ್ಲಾಟ್‌ಫಾರ್ಮ್) ಇವರ ಸಹಯೋಗದೊಂದಿಗೆ ಆಯೋಜಿಸಲಾಗುತ್ತಿದೆ. ಈ ಕೋರ್ಸುಗಳಿಂದ ಕೊಡಗು ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಘಟಕ, ಸರ್ಕಾರಿ ಮತ್ತು ಸಂಯೋಜಿತ ಕಾಲೇಜುಗಳ ಎಲ್ಲಾ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಪ್ರಯೋಜನ ಪಡೆಯಲಿದ್ದಾರೆ.ಈ ಕೋರ್ಸ್‌ಗಳು ವಿದ್ಯಾರ್ಥಿಗಳಿಗೆ ಉಚಿತವಾಗಿರುತ್ತದೆ. ಪ್ರಸ್ತಾವಿತ ಕೋರ್ಸ್‌ಗಳು ವಿದ್ಯಾರ್ಥಿಗಳಿಗೆ ಉದ್ಯಮ-ಜೋಡಣೆ ಕೌಶಲ್ಯಗಳನ್ನು ಪಡೆದುಕೊಳ್ಳಲು, ಉದ್ಯೋಗ ಕೌಶಲ್ಯಗಳನ್ನು ಸುಧಾರಿಸಲು, ಐಬಿಎಂ ಕೌಶಲ್ಯ ಅಭಿವೃದ್ಧಿ ಸ್ಕಿಲ್ಸ್ ಬಿಲ್ಡ್ ಮೂಲಕ ಪ್ರಮಾಣೀಕರಣ ಗಳಿಸಲು, ಯಶಸ್ವಿ ವೃತ್ತಿಜೀವನದ ಕಡೆಗೆ ಪ್ರಗತಿ ಸಾಧಿಸಲು, ಐಬಿಎಂ ಕೌಶಲ್ಯ ಅಭಿವೃದ್ಧಿ ವೇದಿಕೆ ಮೂಲಕ ಸ್ವಯಂ ಕಲಿಕೆಗಾಗಿ ವೆಬ್ ಆವೃತ್ತಿಗೆ ಹೆಚ್ಚಿನ ಪ್ರವೇಶ ಪಡೆಯಲು ಹಾಗೂ ಉದ್ಯಮದ ತಜ್ಞರೊಂದಿಗೆ ತೊಡಗಿಸಿಕೊಳ್ಳುವ ಮೂಲಕ ಹೆಚ್ಚಿನ ಸಂವಹನ ಮತ್ತು ಕಲಿಕೆಯ ಸಾಧ್ಯತೆಗಳಂತಹ ವಿವಿಧ ಪ್ರಯೋಜನಗಳನ್ನು ನೀಡುತ್ತವೆ. ಪ್ರಸ್ತಾವಿತ ಸರ್ಟಿಫಿಕೇಟ್ ಕೋರ್ಸ್‌ಗಳು ಮಾಹಿತಿ ತಂತ್ರಜ್ಞಾನ, ವೃತ್ತಿಪರ ಕೌಶಲ್ಯಗಳು, ಕೃತಕ ಬುದ್ಧಿಮತ್ತೆ ದತ್ತಾಂಶ ಮತ್ತು ವಿಶ್ಲೇಷಣೆಗಳು, ಪ್ರಧಾನ ಕೌಶಲ್ಯಗಳು, ನಾಯಕತ್ವ ಕೌಶಲ್ಯಗಳು ಮತ್ತು ಉದ್ಯೋಗ ಸನ್ನದ್ಧತೆಯ ಅಂಶಗಳನ್ನು ಒಳಗೊಂಡಿರುತ್ತವೆ.ಸಣ್ಣನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಎನ್. ಎಸ್ ಭೋಸರಾಜು, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಉಪಸ್ಥಿತರಿರುವರು. ಮಡಿಕೇರಿ ವಿಧಾನಸಭಾ ಕ್ಷೇತ್ರ ಶಾಸಕ ಡಾ. ಮಂತರ್ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಶಾಸಕ ಎ. ಎಸ್. ಪೊನ್ನಣ್ಣ, ಮೈಸೂರು ಲೋಕಸಭಾ ಕ್ಷೇತ್ರ ಸಂಸದ ಪ್ರತಾಪ್ ಸಿಂಹ, ಕರ್ನಾಟಕ ವಿಧಾನ ಪರಿಷತ್ ಶಾಸಕ ಎಂ.ಪಿ. ಸುಜಾ ಕುಶಾಲಪ್ಪ, ವಿಧಾನ ಪರಿಷತ್ ಶಾಸಕ ಎಸ್. ಎಲ್. ಭೋಜೇಗೌಡ, ತೊರೆನೂರು ಗ್ರಾ. ಪಂ. ಅಧ್ಯಕ್ಷರಾದ ಶೋಭಾ ಪ್ರಕಾಶ್ ಆಗಮಿಸಲಿದ್ದಾರೆ.
ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶ್ರೀಕರ್ ಎಂ.ಎಸ್, ಕೊಡಗು ಜಿಲ್ಲಾ ಪಂಚಾಯಿತಿ ಆಡಳಿತಾಧಿಕಾರಿ, ಕೊಡಗು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಎನ್. ವಿ. ಪ್ರಸಾದ್, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ವ್ಯವಸ್ಥಾಪಕ ನಿರ್ದೇಶಕ ಕನಗವಲ್ಲಿ ಎಂ, ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ತು ಉಪಾಧ್ಯಕ್ಷ ಪ್ರೊ. ಎಸ್.ಆರ್. ನಿರಂಜನ್, ಕೊಡಗು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಪುಟ್ಟರಾಜಪ್ಪ ಎಸ್., ಜಿಲ್ಲಾಧಿಕಾರಿ ವೆಂಕಟ್ ರಾಜಾ, ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಕೆ., ಕೊಡಗು ವಿಶ್ವವಿದ್ಯಾಲಯ ಕುಲಸಚಿವ ಡಾ. ಸೀನಪ್ಪ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಕಾರ್ಯನಿರ್ವಾಹಕ ನಿರ್ದೇಶಕ ಕೃಷ್ಣಕುಮಾರ್, ಅನುದೀಪ್ ಪ್ರತಿಷ್ಠಾನ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಮೋನಿಷಾ ಬ್ಯಾನರ್ಜಿ ಭಾಗವಹಿಸಲಿದ್ದಾರೆ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ತಿಳಿಸಿದ್ದಾರೆ.