ಕನ್ನಡಪ್ರಭ ವಾರ್ತೆ ಹನೂರು
ಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ಕೊಂಬುಡಿಕ್ಕಿ ಸರ್ಕಾರಿ ಶಾಲೆಯಲ್ಲಿ ಸುಸಜ್ಜಿತವಾದ ಆರ್ಯಭಟ ಗಣಿತ ಮತ್ತು ವಿಜ್ಞಾನ ಕಲಿಕಾ ಪ್ರಯೋಗಾಲಯವನ್ನು ಸಾಲೂರು ಬೃಹನ್ಮಠದ ಶ್ರೀವೀರಪ್ಪ ಸ್ವಾಮಿಗಳು ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, ಮೈಸೂರು ಗೌರಿಶಂಕರ ನಗರದ ಶ್ರೀ ಮಲೆಮಹದೇಶ್ವರ ಗೆಳೆಯರ ಬಳಗದ ಸದಸ್ಯರ ತಂಡದಿಂದ ಶಾಲಾ ಮಕ್ಕಳಿಗೆ ಗಣಿತ ಮತ್ತು ವಿಜ್ಞಾನ ಕಲಿಕೆಗಾಗಿ ಹಾಗೂ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ನಿರ್ಮಿಸಿದ್ದಾರೆ ಎಂದರು.
ಪ್ರಯೋಗಾಲಯದ ಕಲ್ಪನೆ ಹಾಗೂ ಅದರಲ್ಲಿನ ವಿಷಯಾಂಶಗಳು ಹಾಗೂ ಮಾದರಿಗಳನ್ನು ನಂಜನಗೂಡು ತಾಲೂಕಿನ ರಾಜ್ಯ ಸಂಪನ್ಮೂಲ ಶಿಕ್ಷಕರ ತಂಡದ ಶಿಕ್ಷಕರಾದ ಹರ್ಷ ಕಿರಣ್, ಸತೀಶ್, ದಿನೇಶ್ ಇವರ ಪರಿಶ್ರಮದಿಂದ 80 ಮಾದರಿಗಳನ್ನು ಒಳಗೊಂಡ ಪ್ರಯೋಗಾಲಯವು ಕಾಡಂಚಿನ ಗ್ರಾಮ ಕೊಂಬುಡಿಕ್ಕಿ ಸರ್ಕಾರಿ ಶಾಲೆಯಲ್ಲಿ ನಿರ್ಮಾಣಗೊಂಡಿರುವುದರಿಂದ ಇಲ್ಲಿಯ ಮಕ್ಕಳು ಉನ್ನತ ವಿದ್ಯಾಭ್ಯಾಸಕ್ಕೆ ಸಾಕಷ್ಟು ಅನುಕೂಲಕರವಾಗಲಿದೆ ಎಂದರು.ಸಂಪನ್ಮೂಲ ಶಿಕ್ಷಕ ಹರ್ಷ ಮಾತನಾಡಿ, ಜಗತ್ತಿಗೆ ಗಣಿತ ಕ್ಷೇತ್ರದಲ್ಲಿ ಭಾರತೀಯರು ನೀಡಿದ ಕೊಡುಗೆ ಮತ್ತು ವಿಶೇಷಗಳ ಬಗ್ಗೆ ಹಾಗೂ ಶ್ರೀನಿವಾಸ ರಾಮಾನುಜನ್ ಅವರ ಜೀವನದಲ್ಲಿ ನಡೆದ ಗಣಿತದ ಕೆಲವು ಆಸಕ್ತಿದಾಯಕ ಸ್ಫೂರ್ತಿದಾಯಕ ವಿಚಾರಗಳನ್ನು ತಿಳಿಸಿದರು. ನಿವೃತ್ತ ಗಣಿತ ಶಿಕ್ಷಕ ಮಹದೇವಪ್ಪ ಮಾತನಾಡಿ, ಗಣಿತ ನಮ್ಮ ಜೀವನದ ಅವಿಭಾಜ್ಯ ಅಂಗ, ಗಣಿತವಿಲ್ಲದೇ ಮಾನವ ಬದುಕಲು ಸಾಧ್ಯವಿಲ್ಲ ಎಂದರು.
ಈ ಸಂದರ್ಭದಲ್ಲಿ ಶಾಲೆಗೆ ಇಲಾಖೆಯಿಂದ ನೀಡಿದ ಸ್ಮಾರ್ಟ್ ಕ್ಲಾಸ್ ಅನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದ ಹಿಂದಿನ ದಿನ ರಾತ್ರಿ ಗ್ರ್ಯಾವಿಟಿ ಫೌಂಡೇಶನ್, ಮೈಸೂರು ವಿಭಾಗದ ಯುವ ವಿಜ್ಞಾನಿಗಳಾದ ಶ್ರೀ ಅಭಿಷೇಕ್ ಹಾಗೂ ತಂಡದವರಿಂದ ಆಕಾಶ ಕಾಯಗಲಕ ವೀಕ್ಷಣೆ ಮಾಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಶಾಂತ, ನಿವೃತ್ತ ಶಿಕ್ಷಕ ಪುಟ್ಟಣ್ಣ, ಗಳೆಯರ ಬಳಗದ ಮನೋಹರ್, ಹನೂರು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣೇಗೌಡ, ಬಡ್ತಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಶಿವಮಲ್ಲು, ಶಾಲೆಯ ಮುಖ್ಯ ಶಿಕ್ಷಕಿ ಮಹದೇವಮ್ಮ, ಗ್ರಾಪಂ ಮಾಜಿ ಅಧ್ಯಕ್ಷ ಕುಮಾರ್, ಶಿಕ್ಷಕ ಮಹೇಂದ್ರ ,ಶ್ರೀ ರಂಗಸ್ವಾಮಿ,ಶ್ರೀ ವಿನೋದ್ ಇದ್ದರು.