ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ೧೫ನೇ ಹಣಕಾಸು ಮತ್ತು ಗ್ರಾಮ ಪಂಚಾಯಿತಿ ಸ್ವಂತ ನಿಧಿಯಡಿಯಲ್ಲಿ ನಿರ್ಮಿಸಲಾದ ನೆಲ್ಯಾಡಿ ಗ್ರಾಮ ಪಂಚಾಯಿತಿ ನೂತನ ಕಟ್ಟಡ ‘ಗ್ರಾಮ ಸೌಧ’ ಉದ್ಘಾಟನೆ ಮಂಗಳವಾರ ಬೆಳಗ್ಗೆ ನಡೆಯಿತು.ನಾಮಫಲಕ ಅನಾವರಣಗೊಳಿಸಿದ ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ದೇಶದಲ್ಲಿ ೨೦೧೪ರಿಂದ ಆಡಳಿತ ನಡೆಸುತ್ತಿರುವ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಸಶಕ್ತಗೊಳಿಸಬೇಕೆಂಬ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಗಳನ್ನು ಬಲಿಷ್ಠಗೊಳಿಸಿದೆ. ೧೫ನೇ ಹಣಕಾಸು ಅನುದಾನ ನೇರವಾಗಿ ಗ್ರಾ.ಪಂ.ಗೆ ನೀಡಲಾಗುತ್ತಿದೆ. ಜೆಜೆಎಂ ಮೂಲಕ ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಂಡಿದೆ. ದ.ಕ.ಜಿಲ್ಲೆಯೊಂದರಲ್ಲೇ ೨೫೦೦ ಕೋಟಿ ರೂ.ಅನುದಾನ ಜಲ ಜೀವನ್ ಯೋಜನೆಗೆ ಖರ್ಚು ಮಾಡಲಾಗುತ್ತಿದೆ ಎಂದರು.
ಮಂಗಳೂರಿನಿಂದ ಕಬಕ-ಪುತ್ತೂರು ತನಕ ಬರುತ್ತಿದ್ದ ರೈಲು ಓಡಾಟವನ್ನು ಸುಬ್ರಹ್ಮಣ್ಯದ ತನಕ ವಿಸ್ತರಿಸಬೇಕೆಂಬ ಬೇಡಿಕೆ ೨೦ ವರ್ಷಗಳಿಂದ ಇತ್ತು. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ರೈಲ್ವೆ ಸಚಿವರ ಸಹಕಾರದಿಂದ ಈ ಬೇಡಿಕೆ ಈಗ ಜಾರಿಗೊಂಡಿದೆ ಎಂದರು.ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಪೆರಿಯಶಾಂತಿ-ಸುಬ್ರಹ್ಮಣ್ಯ-ಪೈಚಾರು ರಸ್ತೆ ನಿರ್ಮಾಣಕ್ಕೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಈ ಭಾಗದಲ್ಲಿ ಕಾಣಿಸಿಕೊಂಡಿರುವ ಅಡಕೆಗೆ ಹಳದಿ ಹಾಗೂ ಎಲೆಚುಕ್ಕಿ ರೋಗ ನಿವಾರಣೆ ನಿಟ್ಟಿನಲ್ಲಿ ಕೇಂದ್ರ ಸಚಿವರಿಗೆ ಮನವಿ ಮಾಡಲಾಗಿದೆ. ಅಡಿಕೆಯ ಜೊತೆಗೆ ಕಾಪಿ ಬೆಳೆಗಳನ್ನು ಬೆಳೆಸುವ ಸಂಬಂಧ ಗಮನ ಹರಿಸಲಾಗುವುದು ಕೆಲವೊಂದು ರೈತರನ್ನು ಗುರುತಿಸಿ ಅವರ ತೋಟದಲ್ಲಿ ಕಾಫಿ ಬೋರ್ಡ್ ಸಹಕಾರದೊಂದಿಗೆ ಪ್ರಾಯೋಗಿಕವಾಗಿ ಕಾಫಿ ಬೆಳೆ ಮಾಡಲಾಗುವುದು. ಈ ಬಗ್ಗೆ ತಾಲೂಕು ಮಟ್ಟದಲ್ಲೂ ತಂಡ ರಚಿಸಿ ಪ್ರಯತ್ನಿಸಲಾಗುವುದು ಎಂದು ಕ್ಯಾ.ಬ್ರಿಜೇಶ್ ಚೌಟ ಹೇಳಿದರು.
ಗ್ರಾಮಸೌಧ ಕಟ್ಟಡವನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು.ವಿಧಾನಪರಿಷತ್ ಸದಸ್ಯ ಕಿಶೋರ್‌ಕುಮಾರ್ , ಕಡಬ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ, ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ವಾಹಣಾಧಿಕಾರಿ ವಿನಯಕುಮಾರಿ , ಕಡಬ ತಾ.ಪಂ.ಸಹಾಯಕ ನಿರ್ದೇಶಕ ಸಂದೇಶ್ ಕೆ.ಎನ್., ಗ್ರಾ.ಪಂ.ಉಪಾಧ್ಯಕ್ಷೆ ರೇಷ್ಮಾಶಶಿ, ನರೇಗಾ ಯೋಜನೆ ತಾಂತ್ರಿಕ ಸಹಾಯಕ ಮನೋಜ್‌ಕುಮಾರ್, ಪಂಚಾಯತ್ ರಾಜ್ ಇಲಾಖೆ ಇಂಜಿನಿಯರ್ ಸಂಗಪ್ಪ ಎಸ್.ಹುಕ್ಕೇರಿ ಇದ್ದರು.
ಪಿಡಿಒ ಮೋಹನ್‌ಕುಮಾರ್ ಜಿ.,ಸ್ವಾಗತಿಸಿದರು, ರವಿಪ್ರಸಾದ್ ಶೆಟ್ಟಿ ವಂದಿಸಿದರು. ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ಟಿ.,ಕಾರ್ಯಕ್ರಮ ನಿರೂಪಿಸಿದರು.