ಧಾರವಾಡ:
ಇಲ್ಲಿನ ಎಸ್‌ಡಿಎಂ ವಿಶ್ವವಿದ್ಯಾಲಯದ ಹೊರ ರೋಗಿಗಳ ಅನುಕೂಲಕ್ಕಾಗಿ ಆರಂಭಿಸಿರುವ ಆನ್‌ಲೈನ್ ನೋಂದಣಿ ಮಾಡುವ ಆ್ಯಪ್‌ನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಉದ್ಘಾಟಿಸಿದರು.ಈ ಆ್ಯಪ್‌ನಲ್ಲಿ ಹುಬ್ಬಳ್ಳಿ ಮತ್ತು ಧಾರವಾಡದ ಪಾಲಿಕ್ಲಿನಿಕ್‌ಗಳಲ್ಲಿ ವೈದ್ಯರ ಲಭ್ಯತೆಯ ಬಗ್ಗೆ ಮಾಹಿತಿ ಮತ್ತು ರೋಗಿಗಳು ತಮಗೆ ಅನುಕೂಲದ ಸಮಯ ನಿಗದಿಪಡಿಸಿಕೊಳ್ಳಬಹುದು. ಇದು ಶೀಘ್ರದಲ್ಲೇ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಸ್ಟೋರ್‌ಗಳಲ್ಲಿ ಲಭ್ಯವಿರುತ್ತದೆ. ಧಾರವಾಡದ ಎಸ್‌ಡಿಎಂ ಪಾಲಿಕ್ಲಿನಿಕ್, ಜ್ಯುಬಲಿ ಸರ್ಕಲ್ ಬಳಿಯ ವಿ.ಜೆ. ಹೌಸ್ ಮತ್ತು ಹುಬ್ಬಳ್ಳಿಯಲ್ಲಿ ಗುರುದತ್ತ ಭವನದ ಬಳಿಯ ಎಸ್‌ಡಿಎಂ ಪಾಲಿಕ್ಲಿನಿಕ್ ಹತ್ತಿರ ಕಾರ್ಯನಿರ್ವಹಿಸುತ್ತದೆ. ಉಪ ವೈದ್ಯಕೀಯ ಅಧೀಕ್ಷಕರಾದ ಡಾ. ಮಖ್ದೂಮ್ ಕಿಲ್ಲೆದಾರ ಅವರು ಪ್ರಾತ್ಯಕ್ಷಿಕೆಯೊಂದಿಗೆ ಆ್ಯಪ್ ಕುರಿತು ಕುಲಪತಿಗೆ ಮಾಹಿತಿ ನೀಡಿದರು.ಎಸ್‌ಡಿಎಂ ಆಸ್ಪತ್ರೆಯ ಯುರಾಲಜಿ ಚಿಕಿತ್ಸಾ ವಿಭಾಗದಲ್ಲಿ ವೀರೇಂದ್ರ ಹೆಗ್ಗಡೆ ಅವರು ಥುಲಿಯಮ್ ಲೇಸರ 60 ವ್ಯಾಟ್ ಯಂತ್ರ ಮತ್ತು ಫ್ಲೆಕ್ಸಿಬಲ್ ಯುರೆಟೆರೊಸ್ಕೋಪ್ ಸಹ ಉದ್ಘಾಟಿಸಿದರು. ಇದು ಪ್ರಸ್ತುತ ವಿಶ್ವದ ಆಧುನಿಕ ಲೇಸರ್ ತಂತ್ರಜ್ಞಾನವಾಗಿದ್ದು ಇದರ ಸಹಾಯದಿಂದ ಮೂತ್ರಪಿಂಡ ಕಲ್ಲುಗಳು, ಮೂತ್ರನಾಳದ ಕಲ್ಲುಗಳು, ಮೂತ್ರಪಿಂಡದ ಕ್ಯಾನ್ಸರ್, ವಿವಿಧ ಮೂತ್ರಶಾಸ್ತ್ರದ ಸಮಸ್ಯೆಗಳಿಗೆ ರಕ್ತಸ್ರಾವವಿಲ್ಲದೆ, ಕಡಿಮೆ ನೋವು, ಶಸ್ತ್ರ ಚಿಕಿತ್ಸೆಯ ನಂತರದ ಗಾಯಗಳಿಲ್ಲದೇ ಚಿಕಿತ್ಸೆ ನೀಡಬಹುದಾಗಿದೆ. ಶೀಘ್ರವಾಗಿ ಚೇತರಿಸಿಕೊಳ್ಳಲು ಇದು ಸಹಕಾರಿ. ಅಲ್ಲದೇ, ಹೃದಯ ಸಂಬಂಧಿ ಕಾಯಿಲೆಗಳಿಗೂ ಈ ಯಂತ್ರವನ್ನು ಬಳಸಬಹುದು ಎಂದು ಡಾ. ಮಖ್ಧೂಮ್ ತಿಳಿಸಿದರು.
ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ, ಉಪಾಧ್ಯಕ್ಷರಾದ ಡಿ. ಸುರೇಂದ್ರ ಕುಮಾರ, ಕಾರ್ಯನಿರ್ವಾಹಕ ನಿದೇಶಕರಾದ ಪದ್ಮಲತಾ ನಿರಂಜನ್, ಆಡಳಿತ ನಿರ್ದೇಶಕ ಸಾಕೇತ್ ಶೆಟ್ಟಿ, ಸಹ ಉಪ ಕುಲಪತಿ ವಿ. ಜೀವಂಧರ ಕುಮಾರ, ಕುಲಸಚಿವ ಡಾ. ಚಿದೇಂದ್ರ ಶೆಟ್ಟರ, ಪ್ರಾಂಶುಪಾಲರಾದ ಡಾ. ರತ್ನಮಾಲಾ ದೇಸಾಯಿ, ವೈದ್ಯಕೀಯ ಅಧೀಕ್ಷಕ ಡಾ. ಕಿರಣ ಹೆಗ್ಡೆ ಇದ್ದರು. ಡಾ. ಶ್ರೀನಿವಾಸ ಕಲಭಾವಿ ಉಪಕರಣಗಳ ಕಾರ್ಯನಿರ್ವಹಿಸುವ ಕುರಿತು ಪ್ರಾತ್ಯಕ್ಷಿತೆ ನೀಡಿದರು.