ನಾಳೆ ಮುರ್ಡೇಶ್ವರದಲ್ಲಿ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಉದ್ಘಾಟನೆ

KannadaprabhaNewsNetwork | Published : Feb 17, 2024 1:18 AM

ಸಾರಾಂಶ

ರಾಜ್ಯದ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಉತ್ತರ ಕನ್ನಡ ಜಿಲ್ಲಾ ಹಾಗೂ ತಾಲೂಕು ಘಟಕಗಳ ಉದ್ಘಾಟನೆ ಹಾಗೂ ಪದ ಸೇವಾದೀಕ್ಷೆ ಕಾರ್ಯಕ್ರಮ, ಮಹಿಳಾ ಸಮಾವೇಶ ಫೆ. ೧೮ರಂದು ಮುರ್ಡೇಶ್ವರದ ಜನತಾ ವಿದ್ಯಾಲಯದಲ್ಲಿ ಏರ್ಪಡಿಸಲಾಗಿದೆ.

ಭಟ್ಕಳ: ರಾಜ್ಯದ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಉತ್ತರ ಕನ್ನಡ ಜಿಲ್ಲಾ ಹಾಗೂ ತಾಲೂಕು ಘಟಕಗಳ ಉದ್ಘಾಟನೆ ಹಾಗೂ ಪದ ಸೇವಾದೀಕ್ಷೆ ಕಾರ್ಯಕ್ರಮ, ಮಹಿಳಾ ಸಮಾವೇಶ ಫೆ. ೧೮ರಂದು ಮುರ್ಡೇಶ್ವರದ ಜನತಾ ವಿದ್ಯಾಲಯದಲ್ಲಿ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷೆ ಜಯಶ್ರೀ ನಾಯ್ಕ ಹೇಳಿದರು.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಷನ್ ರಾಷ್ಟ್ರಮಟ್ಟದ ನೋಂದಣಿ ಸಂಸ್ಥೆಯಾಗಿದ್ದು, ಈ ಸಂಸ್ಥೆ ೨೦೧೮-೧೯ರಲ್ಲಿ ಸ್ಥಾಪನೆಯಾಗಿದೆ. ನಮ್ಮ ಜಿಲ್ಲೆಯಲ್ಲಿ ಈ ಸಂಸ್ಥೆಯನ್ನು ೨೦೨೨ರಲ್ಲಿ ಪ್ರಾರಂಭಿಸಿದ್ದು, ಈಗ ತಾಲೂಕು ಮಟ್ಟದಲ್ಲಿ ಘಟಕಗಳನ್ನು ಸ್ಥಾಪನೆ ಮಾಡಿದ್ದೇವೆ ಎಂದು ಹೇಳಿದರು.ಈ ಸಂಘದ ಮುಖ್ಯ ಉದ್ದೇಶ ಶಿಕ್ಷಣಕ್ಕೆ ಒತ್ತು ಕೊಡುವುದು. ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಸಮಾಜದಲ್ಲಿರುವ ಮಹಿಳೆಯರ ಸಬಲೀಕರಣ, ಅಂಗವಿಕಲ ಮಕ್ಕಳಿಗೆ ಸಹಾಯ, ಸಮಾಜದಲ್ಲಿರುವ ಮೌಢ್ಯತೆ ಹೋಗಲಾಡಿಸುವುದು, ಅಂಗವಿಕಲ ಮಕ್ಕಳ ಶ್ರೇಯಸ್ಸಿಗೆ ಸಹಾಯ, ಶಿಕ್ಷಕರಿಗೆ ಕೌಶಲ್ಯ ತರಬೇತಿ ನೀಡುವುದು ಸೇರಿದಂತೆ ಹಲವು ಸಾಮಾಜಿಕ ಕಾರ್ಯಕ್ರಮ ನಡೆಸುವುದು ನಮ್ಮ ಸಂಘದ ಮುಖ್ಯ ಉದ್ದೇಶವಾಗಿದೆ. ಈ ಎಲ್ಲ ಕಾರ್ಯಕ್ರಮಗಳಿಂದ ನಮ್ಮ ಸಂಘವು ಚಟುವಟಿಕೆ ಮೂಲಕ ಪ್ರಚಲಿತದಲ್ಲಿದೆ ಎಂದು ಹೇಳಿದರು. ಫೆ. ೧೮ರಂದು ಉತ್ತರ ಕನ್ನಡ ಜಿಲ್ಲಾ ಘಟಕದ ಉದ್ಘಾಟನೆ ನಡೆಯಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಮೀನುಗಾರಿಕೆ ಸಚಿವರಾದ ಮಂಕಾಳ ವೈದ್ಯ ನೆರವೇರಿಸಲಿರುವರು. ವಿಶೇಷ ಆಹ್ವಾನಿತರಾಗಿ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ನಿವೃತ್ತ ನ್ಯಾಯಾಧೀಶ ರವಿ ಎಂ. ನಾಯ್ಕ ಹಾಗೂ ಸಾವಿತ್ರಿಬಾಯಿ ಪುಲೆ ಸಂಘದ ರಾಷ್ಟ್ರೀಯ ಅಧ್ಯಕ್ಷೆ ಡಾ. ಲತಾ ಎ.ಎಸ್., ಮುಳ್ಳೂರು ಸಾವಿತ್ರಿಬಾಯಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಲಿದ್ದಾರೆ. ಮುಖ್ಯ ಅತಿಥಿಯಾಗಿ ಉಪನಿರ್ದೇಶಕಿ ಲತಾ ನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಡಿ. ಮೊಗೇರ ಉಪಸ್ಥಿತರಿರುವರು. ಕಾರ್ಯಕ್ರಮದಲ್ಲಿ ಉತ್ತಮ ಶಿಕ್ಷಕಿಯರಿಗೆ ಪ್ರಶಸ್ತಿ ಪ್ರಧಾನ, ಉಪನ್ಯಾಸ ಕಾರ್ಯಕ್ರಮ ಹಾಗೂ ಮಹಿಳೆಯರಿಗಾಗಿ ಸಾಂಸ್ಕೃತಿಕ ಸ್ಪರ್ಧೆ ನಡೆಯಲಿದೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ಸೀಮಾ ಹೊನ್ನಾವರ, ಶೋಭಾ ನಾಯ್ಕ, ನೂರಜಹಾನ್, ಮಮತಾ ವಾರೇಕರ, ಜಯಲಕ್ಷ್ಮೀ ನಾಯ್ಕ, ನೇತ್ರಾವತಿ ಶಾನಭಾಗ, ಯಮುನಾ ನಾಯ್ಕ, ಕೆ. ಮಾಲತಿ ಉಪಸ್ಥಿತರಿದ್ದರು.

Share this article