ಕನ್ನಡಪ್ರಭ ವಾರ್ತೆ ಮೈಸೂರುನಾಡಪ್ರಭು ಕೆಂಪೇಗೌಡ ಅವರು ಕೇವಲ ಸಾಮಂತರಾಜ ಮಾತ್ರವಲ್ಲದೇ ಬದುಕಿನ್ನುದ್ದಕ್ಕೂ ಮುಂದಿನ ಸಮಾಜಕ್ಕೆ ಏನು ನೀಡಬೇಕು ಎಂಬ ವಿಷನರಿ ಲೀಡರ್ ಆಗಿದ್ದರು ಎಂದು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಘಟಿಕೋತ್ಸವ ಭವನದಲ್ಲಿ ನಾಡಪ್ರಭು ಕೆಂಪೇಗೌಡ ಅಧ್ಯಯನ ಮತ್ತು ವಿಸ್ತರಣಾ ಕೇಂದ್ರವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ಕೆಂಪೇಗೌಡರು ನಾಡಿಗೆ ಮಾಡಿರುವ ಸೇವೆಯ ಋಣವನ್ನು ತೀರಿಸಲು ಅವರ ಬಗ್ಗೆ ತಿಳಿದುಕೊಳ್ಳಬೇಕು. ನಾಡನ್ನು ಕಟ್ಟಿ ಬಿಟ್ಟಿರುವ ಅವರ ಆದರ್ಶನವನ್ನು ಮುಂದಿನ ಪೀಳಿಗೆಗೆ ತಿಳಿಸಲು ರಾಜ್ಯ ಮುಕ್ತ ವಿವಿ ನಾಡಪ್ರಭು ಕೆಂಪೇಗೌಡರ ಅಧ್ಯಯನ ಮತ್ತು ವಿಸ್ತರಣಾ ಕೇಂದ್ರ ಆರಂಭಿಸಿದೆ ಎಂದರು.ಇತಿಹಾಸ ಓದದವರು ಇತಿಹಾಸ ಸೃಷ್ಟಿಸಲಾರರು ಎಂಬ ಡಾ.ಬಿ.ಆರ್. ಅಂಬೇಡ್ಕರ್ ಅವರ ಮಾತಿನಂತೆ ಕೆಂಪೇಗೌಡರ ಚರಿತ್ರೆ ಓದಬೇಕು. ಇಂದಿನ ಇತಿಹಾಸ ತಿಳಿದರೆ ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಸುಲಭ. ಒಬ್ಬ ವ್ಯಕ್ತಿಯ ಪೂರ್ವಪರ ತಿಳಿಯದಿದ್ದರೆ ಉಡಾಫೆ ಉತ್ತರ ನಿರೀಕ್ಷಿಸಬೇಕಾಗುತ್ತದೆ. ಕೆಂಪೇಗೌಡರು ಬದುಕಿದಾಗ ದೇಶಕ್ಕೆ, ನಾಡಿಗೆ ಏನಾದರೂ ಸೇವೆ ಮಾಡಬೇಕು ಎಂಬ ತುಡಿತವಿತ್ತು. ಅದರಂತೆ ಸಾಕಷ್ಟು ಸೇವೆಯನ್ನು ಮಾಡಿದ್ದಾರೆ ಎಂದು ಅವರು ಹೇಳಿದರು. ಅಧ್ಯಯನಕ್ಕೆ ಹೆಚ್ಚು ಒತ್ತುಇತಿಹಾಸ ತಜ್ಞ ಡಾ. ತಲಕಾಡು ಚಿಕ್ಕರಂಗೇಗೌಡ ಮಾತನಾಡಿ, ಕೆಂಪೇಗೌಡರ ಬಗ್ಗೆ ಪೂರ್ಣ ಪ್ರಮಾಣದ ವಿವರ ಇಲ್ಲದವರು ಇಲ್ಲಸಲದ್ದನ್ನು ಮಾತನಾಡುತ್ತಿದ್ದಾರೆ. ಕೆಂಪೇಗೌಡರ ತಂದೆ ಕೆಂಪನಂಜೇಗೌಡರಿಗೆ ಕೃಷ್ಣದೇವರಾಯ ಅಮರನಾಯಕ ಎಂಬ ಬಿರುದು ನೀಡಿದ್ದಾರೆ. ಈ ಬಗ್ಗೆ ಕಲ್ಯದ ಶಾಸನದಲ್ಲಿ ಉಲ್ಲೇಖವಿದೆ. ಕಲ್ಯ ಶಾಸನವನ್ನು ಅಧ್ಯಯನ ಮಾಡಿದರೆ ಇವುಗಳ ಬಗ್ಗೆ ದೊರೆಯುತ್ತದೆ ಎಂದು ತಿಳಿಸಿದರು.ಅಚ್ಚುತರಾಯರು ನೀಡಿದ ಚಿನ್ನದ ನಾಣ್ಯಗಳನ್ನು ಬಳಸಿಕೊಂಡು ವಿಜಯನಗರದ ಕಾಲಘಟ್ಟದಲ್ಲಿ ಬೆಂಗಳೂರಿನ ಕೋಟೆ ಮಾತ್ರ ನಿರ್ಮಾಣವಾಯಿತು. ಈ ಕೋಟೆಯಲ್ಲಿ ಮಾತ್ರ ಸಾಮಾನ್ಯ ಜನರಿಗೂ ಪ್ರವೇಶವಿತು. ಶೇ.10 ರಷ್ಟು ಸ್ಥಳದಲ್ಲಿ ಅವರು ಇದ್ದು, ಬಾಕಿ ಶೇ.90 ರಷ್ಟು ಸ್ಥಳದಲ್ಲಿ 64 ಪೇಟೆಗಳನ್ನು ನಿರ್ಮಿಸಿ ನಾಡಿನ ಎಲ್ಲಾ ಜಾತಿ ಅವರಿಗೂ ಅವಕಾಶ ಕಲ್ಪಿಸಿಕೊಟ್ಟರು. ಹಾಗೇ ವಿವಿಧ ರಾಜ್ಯದ ಕರಕುಶಲದವರಿಗೂ ಅವಕಾಶ ಕಲ್ಪಿಸುವ ಮೂಲಕ ಸರ್ವಜನಾಂಗ ಶಾಂತಿಯ ದೊರೆಯಾಗಿದರು ಎಂದರು. ಕೆಂಪೇಗೌಡರ ವಂಶದ ಅಂತ್ಯಕೆಂಪೇಗೌಡ ವಂಶದ ಕಟ್ಟಕಡೇಯ ಕುಡಿ ಮುಮ್ಮಡಿ ಕೆಂಪವೀರಪ್ಪಗೌಡರು ಶ್ರೀರಂಗಪಟ್ಟಣದಲ್ಲಿ ಮರಣ ಹೊಂದಿದರು ಎಂಬುದಕ್ಕೆ ಪತ್ರವಿದೆ. ಮೈಸೂರಿನ ದೊಡ್ಡ ಕೃಷ್ಣರಾಜ ಒಡೆಯರ್ ಕುತಂತ್ರದಿಂದ ಮುಮ್ಮಡಿ ಕೆಂಪವೀರಪ್ಪಗೌಡರು ಅಂತ್ಯ ಕಂಡರು. ದೊಡ್ಡ ಕೃಷ್ಣರಾಜ ಒಡೆಯರ್ ದಳವಾಯಿಗಳ ಜೊತೆಗೂಡಿ ಕಲಾವತಿ ಎಂಬ ಸುಂದರ ಹೆಣ್ಣನ್ನು ಬಳಸಿಕೊಂಡು ಮುಮ್ಮಡಿ ಕೆಂಪವೀರಪ್ಪಗೌಡರು ಬಂಧಿಸಿ, ಶ್ರೀರಂಗಪಟ್ಟಣದ ಕಾರಾಗೃಹದಲ್ಲಿ ಇರಿಸಿ ಅವರ ಅಂತ್ಯಕ್ಕೆ ಕಾರಣರಾದರು. ಆದರೆ, ಕೆಂಪೇಗೌಡ ವಂಶ ಅಂತ್ಯವಾದ 30 ವರ್ಷಗಳ ನಂತರ ಮೈಸೂರಿನ ಅರಸರ ಪಥನವಾಯಿತು. ಅವರನ್ನು ಕುತಂತ್ರದ ಮೂಲಕವೇ ದಳವಾಯಿಗಳು, ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ರಿಂದ ಅಂತ್ಯ ಕಂಡಿತು ಎಂದು ಅವರು ತಿಳಿಸಿದರು.ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ, ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ, ಕುಲಸಚಿವ ಪ್ರೊ.ಕೆ.ಬಿ. ಪ್ರವೀಣ, ಪರೀಕ್ಷಾಂಗ ಕುಲಸಚಿವ ಡಾ. ವಿಶ್ವನಾಥ್, ಕೇಂದ್ರದ ಸಂಯೋಜನಾಧಿಕಾರಿ ಡಾ.ಸಿ. ರಾಮೇಗೌಡ, ಡಾ.ಸುಮಿತ್ರಾ ಮೊದಲಾದವರು ಇದ್ದರು.----ಕೋಟ್...ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಅಭಿವೃದ್ದಿಗೆ ಹೆಗಲುಕೊಟ್ಟರು. ಇಂತಹ ವಿಷಯಗಳನ್ನು ಅಧ್ಯಯನ ಮಾಡಲು ಸರ್ಕಾರ ಅನುದಾನ ನೀಡಬೇಕು. ವಿವಿಗಳಲ್ಲಿ ಅನುದಾನಕ್ಕೆ ಕೊರತೆ ಇರಬಾರದು. ಸರ್ಕಾರ ಇತಿಹಾಸ ಬಗ್ಗೆ ಸಂರಕ್ಷಣೆ ಬಗ್ಗೆ ತಿಳಿಸಿದ್ದಾಗ ಕಾಮಗಾರಿಗಳ ತಲೆಕೆಡೆಸಿಕೊಳ್ಳುತ್ತಾರೆ. ಅದರ ಬದಲು ಅಧ್ಯಯನಕ್ಕೆ ಹೆಚ್ಚು ಒತ್ತು ನೀಡಿಬೇಕಿದೆ.- ಡಾ. ತಲಕಾಡು ಚಿಕ್ಕರಂಗೇಗೌಡ, ಇತಿಹಾಸ ತಜ್ಞ-----ಬಾಕ್ಸ್... ಕೆಂಪೇಗೌಡರ ಚರಿತ್ರೆ ಅಧ್ಯಯನನಾಡಪ್ರಭು ಕೆಂಪೇಗೌಡ ಅಧ್ಯಯನ ಮತ್ತು ವಿಸ್ತರಣಾ ಕೇಂದ್ರದ ಮುಖ್ಯ ಉದ್ದೇಶ ಬೆಂಗಳೂರು ನಗರವನ್ನು ನಿರ್ಮಿಸಿದ ಕೆಂಪೇಗೌಡರ ಜೀವನ ಚರಿತ್ರೆ ಮತ್ತು ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರಗಳನ್ನು ಅಧ್ಯಯನ ಮಾಡುವುದಾಗಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ. ಶರಣಪ್ಪ ವಿ ಹಲಸೆ ತಿಳಿಸಿದರು.ಕೆಂಪೇಗೌಡರು ಸಾಮಂತರಾಜರಾದರೂ ವಿಶ್ವವನ್ನ ಬೆರಗುಗೊಳಿಸಿದ ನಾಡಪ್ರಭುವಾಗಿ ಬೆಳೆದದ್ದು ಹೇಗೆ ಎಂಬುವುದರ ಬಗ್ಗೆ ಹಲವು ಮಜುಲುಗಳಲ್ಲಿ ಸಂಶೋಧನೆ ಮಾಡುವುದು. ಜೊತೆಗೆ ಆಡಳಿತದ ನೀತಿ ಸಾಮಾಜಿಕ ಬದ್ಧತೆ, ಕೃಷಿ ಪದ್ಧತಿ, ನೀರಾವರಿಯ ನೀತಿ ನಿಯಮಗಳು, ಆರ್ಥಿಕತೆಯ ಮೌಲ್ಯಗಳ ಬಗ್ಗೆ ಇವತ್ತಿಗೂ ಸಂಶೋಧಕರಿಗೆ ವಿದ್ವಾಂಸರಿಗೆ ಕಾಡ ತೊಡಗುತ್ತವೆ. ಈ ನಿಟ್ಟಿನಲ್ಲಿ ಈ ಅಧ್ಯಯನ ಕೇಂದ್ರವು ವಿಚಾರಸಂಕಿರಣಗಳನ್ನು, ಚರ್ಚೆ, ಗೋಷ್ಠಿಗಳನ್ನು ನಡೆಸುವುದರ ಜೊತೆಗೆ ಈ ವಿಷಯಗಳ ಬಗ್ಗೆ ಡಿಪ್ಲೊಮಾಗಳನ್ನು ತೆರೆಯಬೇಕಾಗಿದೆ, ಅಧ್ಯಯನ ಮಾಡಬೇಕಾಗಿದೆ ಎಂದರು.