ಕನ್ನಡಪ್ರಭ ವಾರ್ತೆ ಮೈಸೂರು ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಆಶ್ರಯದಲ್ಲಿ ನಡೆದ ಅಂತರ ಕಾಲೇಜುಗಳ ಜಿಮ್ನಾಸ್ಟಿಕ್ಸ್, ಈಜು, ಯೋಗಾಸನ, ಕರಾಟೆ, ಕಿಕ್ ಬಾಕ್ಸಿಂಗ್, ಕುಸ್ತಿ, ಭಾರ ಎತ್ತುವ (ಪುರುಷ ಮತ್ತು ಮಹಿಳೆಯರ) ಹಾಗೂ ಅತ್ಯುತ್ತಮ ದೇಹದಾರ್ಢ್ಯ (ಪುರುಷರ) ಸ್ಪರ್ಧೆಗಳನ್ನು ಎಸಿಪಿ ಎಚ್.ಬಿ. ರಮೇಶ್ ಕುಮಾರ್ ಉದ್ಘಾಟಿಸಿದರು. ನಂತರ ಅವರು ಮಾತನಾಡಿ, ವಿದ್ಯಾರ್ಥಿ ಕ್ರೀಡಾಪಟುಗಳು ಕ್ರೀಡೆಯ ಜೊತೆಗೆ ವ್ಯಾಸಂಗಕ್ಕೂ ಸಹ ಆದ್ಯತೆ ನೀಡಿ, ತಮ್ಮ ದೈಹಿಕ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಲು ವಿಶ್ವವಿದ್ಯಾನಿಲಯದಲ್ಲಿರುವ ಸೌಲಭ್ಯಗಳನ್ನು ಉಪಯೋಗಿಸುವುದರ ಮೂಲಕ ಉತ್ತಮ ಕ್ರೀಡಾಪಟುಗಳಾಗಿ ವಿಶ್ವವಿದ್ಯಾನಿಲಯ ರಾಜ್ಯ ಹಾಗೂ ರಾಷ್ಟ್ರಕ್ಕೆ ಕೀರ್ತಿ ತರುವಲ್ಲಿ ಯುವ ಪೀಳಿಗೆಯಾದ ತಾವುಗಳು ಶ್ರಮಿಸಬೇಕೆಂದು ತಿಳಿಸಿದರು. ಮುಖ್ಯಅತಿಥಿಗಳಾಗಿ ಮೈಸೂರು ವಿವಿ ಕುಲಪತಿ ಪ್ರೊ..ಎನ್.ಕೆ. ಲೋಕನಾಥ್ ಮಾತನಾಡಿ, ತಮ್ಮಆರೋಗ್ಯ ವೃದ್ಧಿಗಾಗಿ ಮತ್ತು ದೇಶವನ್ನು ಉನ್ನತ ಸ್ಥಾನಕ್ಕೆ ಕೊಂಡ್ಯೊಯಲು ಕ್ರೀಡೆಯಿಂದ ಮಾತ್ರ ಸಾಧ್ಯ. ಆದರಿಂದ ವಿದ್ಯಾರ್ಥಿ ಕ್ರೀಡಾಪಟುಗಳು ತಮ್ಮ ಜೀವನಾದ್ಯಂತ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ತಿಳಿಸಿದರು. ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಗೋಕುಲ್ ಗೋವರ್ಧನ್, ಮಾತನಾಡಿ, ಆರೋಗ್ಯ ದೃಷ್ಟಿಯಿಂದ ದೈಹಿಕ ಮತ್ತು ಮಾನಸಿಕ ಸಧೃಡತೆ ಹೆಚ್ಚಿಸಿಕೊಳ್ಳಲು ತಿಳಿಸಿದರು.ಅಧ್ಯಕ್ಷತೆಯನ್ನು ಮೈಸೂರು ವಿವಿಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ. ವೆಂಕಟೇಶ್ ವಹಿಸಿ, ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಶಿಸ್ತು ಬದ್ಧವಾಗಿ ಭಾಗವಹಿಸಿ ಎಂದು ಶುಭ ಹಾರೈಸಿದರು.ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ಅಧ್ಯಯನ ವಿಭಾಗದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆಎಸ್ಎಸ್ವೈದ್ಯಕೀಯ ಕಾಲೇಜಿನ ಅನಾಟಮಿ ವಿಭಾಗದ ಮುಖ್ಯಸ್ಥೆ ಡಾ.ಸಿ.ಎಸ್. ವಿದ್ಯಾ ಅವರು ಯೋಗ ಮತ್ತು ಕ್ರೀಡೆಯಲ್ಲಿ ಅಂಗರಚನಾ ಶಾಸ್ತ್ರದ ಪಾತ್ರ ಎಂಬ ವಿಷಯದ ಬಗ್ಗೆ ಮಾತನಾಡಿದರು. ದೈಹಿಕ ಶಿಕ್ಷಣ ಮತ್ತು ಕ್ರೀಡೆಯ ಪ್ರೊ. ಶೇಷಣ್ಣ ದೈಹಿಕ ಶಿಕ್ಷಣ ಮತ್ತು ಕ್ರೀಡೆ ದತ್ತಿಯ ಉಪನ್ಯಾಸ ನೀಡಿದರು.ದೈಹಿಕ ಶಿಕ್ಷಣ ವಿಭಾಗದ ವಿಶಾಂತ್ರ ನಿರ್ದೇಶಕ ಡಾ.ಸಿ. ಕೃಷ್ಣ ಹಾಗೂ ಉಪನಿರ್ದೇಶಕ ಡಾ.ಪಿ. ಕೃಷ್ಣಯ್ಯ ಮತ್ತು ಜೆಎಸ್ಎಸ್ಕಾಲೇಜಿನ ದೈಹಿಕ ನಿರ್ದೇಶಕಿ ಉಮಾದೇವಿ ಇದ್ದರು.ಬಹುಮಾನ ವಿತರಣಾ ಸಮಾರಂಭದ ಮುಖ್ಯಆತಿಥಿಗಳಾಗಿ ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಎಂ. ಚಂದ್ರಕುಮಾರ್, ಪ್ರೊ.ಬಿ.ಎಸ್. ವಿಶ್ವನಾಥ್ ಭಾಗವಹಿಸಿದ್ದರು.ಉತ್ತಮ ದೇಹದಾರ್ಢ್ಯ ಸ್ಪರ್ಧೆಯಲ್ಲಿ ನಂಜನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ತೃತೀಯ ಬಿ.ಎ ವಿದ್ಯಾರ್ಥಿ ಬಿ.ಎಂ. ಮಹೇಶ್ ಪ್ರಥಮ ಸ್ಥಾನ ಗಳಿಸುವ ಮೂಲಕ ಮಿಸ್ಟರ್ ಮೈಸೂರು ಯುನಿವರ್ಸಿಟಿ ಟೈಟಲನ್ನು ತನ್ನದಾಗಿಸಿಕೊಂಡಿದ್ದಾರೆ. ಅಲ್ಲದೆ ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಉತ್ತಮ ದೇಹದಾರ್ಢ್ಯ ಸ್ಪರ್ಧೆಗೆ ಆಯ್ಕೆಯಾದರು.ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಸಿ. ವೆಂಕಟೇಶ್ ಅವರು ಪದಕ ಗಳಿಸಿದ ವಿದ್ಯಾರ್ಥಿ ಮತ್ತು ಎಲ್ಲ ಕಾಲೇಜುಗಳಿಗೆ ಶುಭ ಹಾರೈಸಿದರು.