ಮಾವುತರು, ಕಾವಾಡಿಗಳ ಮಕ್ಕಳಿಗಾಗಿ ತಾತ್ಕಾಲಿಕ ಶಾಲೆ, ಗ್ರಂಥಾಲಯ ಉದ್ಘಾಟನೆ

KannadaprabhaNewsNetwork | Published : Sep 22, 2024 1:59 AM

ಸಾರಾಂಶ

ಗಲ್ಲು ಗಲ್ಲೆನುತ ಗೆಜ್ಜೆ ಗಲ್ಲುತ್ತಾಜೆನುತ, ಭೂಮಿ ಈ ಭೂಮಿ ಮೇಲಿನಾಡು, ಈ ನಾಡಲೆಮ್ಮ ಕೋಟಿ, ಈ ಕೋಟೆಗೆ ನೀನೆ ನೀನೆ ತಾಯಿ ಹಾಡಿಗೆ ನೃತ್ಯ ಮಾಡಿದರು. ತಮ್ಮ ಸಂಸ್ಕೃತಿ ಬಿಂಬಿಸುವ ಲೇ ಲಾ ಲಲ್ಲ ಲಾ ಎಂಬ ಹಾಡಿಗೆ ಹೆಜ್ಜೆ ಹಾಕಿ ಪುಟಾಣಿಗಳೊಂದಿಗೆ ಸಚಿವ ಡಾ.ಮಹದೇವಪ್ಪ ಅವರು ಸಹ ಎರಡು ಹೆಜ್ಜೆ ಹಾಕಿದರು.

ಕನ್ನಡಪ್ರಭ ವಾರ್ತೆ ಮೈಸೂರು

ದಸರಾ ಆನೆಗಳ ಮಾವುತರು, ಕಾವಾಡಿಗಳ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅರಮನೆ ಆವರಣದಲ್ಲಿ ಸ್ಥಾಪಿಸಲಾಗಿರುವ ತಾತ್ಕಾಲಿಕ ಶಾಲೆ ಹಾಗೂ ಗ್ರಂಥಾಲಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಶನಿವಾರ ಉದ್ಘಾಟಿಸಿದರು.

ನಂತರ ಮಕ್ಕಳಿಗೆ ಸಮವಸ್ತ್ರ, ಪಠ್ಯ, ನೋಟ್ ಪುಸ್ತಕ, ಲೇಖನಿ ಸಾಮಗ್ರಿಗಳನ್ನು ವಿತರಿಸಿದರು. ಬಳಿಕ ಮಕ್ಕಳು ವಿವಿಧ ವೇಷ ಭೂಷಣ ತೊಟ್ಟು ನೃತ್ಯ ಪ್ರದರ್ಶಿಸಿ ನೋಡುಗರ ಗಮನ ಸೆಳೆದರು.

ಗಲ್ಲು ಗಲ್ಲೆನುತ ಗೆಜ್ಜೆ ಗಲ್ಲುತ್ತಾಜೆನುತ, ಭೂಮಿ ಈ ಭೂಮಿ ಮೇಲಿನಾಡು, ಈ ನಾಡಲೆಮ್ಮ ಕೋಟಿ, ಈ ಕೋಟೆಗೆ ನೀನೆ ನೀನೆ ತಾಯಿ ಹಾಡಿಗೆ ನೃತ್ಯ ಮಾಡಿದರು. ತಮ್ಮ ಸಂಸ್ಕೃತಿ ಬಿಂಬಿಸುವ ಲೇ ಲಾ ಲಲ್ಲ ಲಾ ಎಂಬ ಹಾಡಿಗೆ ಹೆಜ್ಜೆ ಹಾಕಿ ಪುಟಾಣಿಗಳೊಂದಿಗೆ ಸಚಿವ ಡಾ. ಮಹದೇವಪ್ಪ ಅವರು ಸಹ ಎರಡು ಹೆಜ್ಜೆ ಹಾಕಿದರು.

ನಂತರ ದಸರಾ ಆನೆಗಳಿಗೆ ಕಬ್ಬು, ಬೆಲ್ಲ ತಿನ್ನಿಸಿ ಗಜಪಡೆಯ ಪಾಲನೆ, ಪೋಷಣೆ ಕುರಿತು ವಿಚಾರಿಸಿದ ಸಚಿವರು, ಕಾವಾಡಿಗರು ಹಾಗೂ ಮಾವುತರ ಯೋಗಕ್ಷೇಮ ವಿಚಾರಿಸಿದರು.

ಶಾಸಕರಾದ ತನ್ವೀರ್ ಸೇಠ್, ಡಾ. ಯತೀಂದ್ರ ಸಿದ್ದರಾಮಯ್ಯ, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಸಿಇಒ ಕೆ.ಎಂ. ಗಾಯತ್ರಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಎಸ್ಪಿ ಎನ್. ವಿಷ್ಣುವರ್ಧನ್, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕಿ ಜಿ.ಶೀಲಾ ಮೊದಲಾದವರು ಇದ್ದರು.

ದಸರಾ ವೆಬ್ ಸೈಟ್, ಯುವಸಂಭ್ರಮ ಪೋಸ್ಟರ್ ಬಿಡುಗಡೆ

ಮೈಸೂರು ದಸರಾ ಮಹೋತ್ಸವ 2024 ಸಿದ್ಧತಾ ಕಾರ್ಯಗಳು ಭರದಿಂದ ಸಾಗಿದ್ದು, ಯುವ ಸಂಭ್ರಮದ ಪೋಸ್ಟರ್ ಬಿಡುಗಡೆ, ದಸರಾ ವೆಬ್ ಸೈಟ್ ಗೆ ಚಾಲನೆ ನೀಡಲಾಯಿತು.ಮೈಸೂರು ಅರಮನೆ ಮಂಡಳಿ ಕಚೇರಿಯಲ್ಲಿ https://www.mysoredasara.gov.in/ ದಸರಾ ವೆಬ್ ಸೈಟ್ ಗೆ ಚಾಲನೆ ನೀಡಿದ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು, ಯುವ ಸಂಭ್ರಮದ ಪೋಸ್ಟರ್ ಅನ್ನು ಸಹ ಬಿಡುಗಡೆಗೊಳಿಸಿದರು.

ಯುವಸಂಭ್ರಮವು ಸೆ.24 ರಿಂದ 30 ರವರೆಗೆ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ನಡೆಯಲಿದ್ದು, ನಟ ಶ್ರೀಮುರುಳಿ, ನಟಿ ರುಕ್ಮಿಣಿ ವಸಂತ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಪಂ ಸಿಇಒ ಕೆ.ಎಂ. ಗಾಯತ್ರಿ, ಎಸ್ಪಿ ಎನ್. ವಿಷ್ಣುವರ್ಧನ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ. ಹರೀಶ್ ಮೊದಲಾದವರು ಇದ್ದರು.

Share this article