ಕನ್ನಡಪ್ರಭ ವಾರ್ತೆ ಮೈಸೂರು
ಭಾಷೆ ಹಿಡಿತ ಬಂದಿದ್ದೆ ರಂಗಭೂಮಿಯಿಂದ, ಶುದ್ಧವಾದ ಕನ್ನಡ ಭಾಷೆಯನ್ನು ಕಲಿತದ್ದು ರಂಗಭೂಮಿ ಅಭಿನಯದ ಮೂಲಕ. ಸ್ಪಷ್ಟವಾದ ಮಾತುಗಳನ್ನಾಡುವುದರಿಂದಲೇ ನಟನಾಗಲೂ ಹೃದಯವಂತನಾಗಲೂ ಸಾಧ್ಯ ಎಂದು ರಂಗಭೂಮಿ ಹಾಗೂ ಚಲನಚಿತ್ರ ನಟ ಶಿವಾಜಿರಾವ್ ಜಾಧವ್ ತಿಳಿಸಿದರು.ನಗರದ ಕೃಷ್ಣಮೂರ್ತಿಪುರಂ ಶ್ರೀರಾಮ ಮಂದಿರದಲ್ಲಿ ಚಿಂತನ- ಮಂಥನ ವೇದಿಕೆಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಆಡಂಬರದ ಬದುಕಿಗೆ ಮಾರು ಹೋಗಿ ನಾಟಿ ಔಷಧ, ಮನೆ ಔಷಧ ನಿಂತು ಹೋಗಿ ಅಜ್ಜ- ಅಜ್ಜಿಯರ ಜೊತೆ ಸಂತೋಷವನ್ನು ಅನುಭವವನ್ನು ಹಂಚಿಕೊಂಡು ಬದುಕುವುದನ್ನು ಬಿಟ್ಟು, ವೃದ್ಧಾಶ್ರಮಗಳಿಗೆ ಸೇರಿಸುತ್ತಿರುವುದು ವಿಪರ್ಯಾಸದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.ಮನಸ್ಸನ್ನು ಹತೋಟಿಯಲ್ಲಿಡಬೇಕುಇದೇ ವೇಳೆ ಸಮೃದ್ಧ ಜೀವನಕ್ಕೆ ಸದೃಢ ಮನಸ್ಸು ಕುರಿತು ವಿಶೇಷ ಉಪನ್ಯಾಸ ನೀಡಿದ ಕರ್ನಾಟಕ ಪೊಲೀಸ್ ಅಕಾಡೆಮಿಯ (ಕೆಪಿಎ) ಮನಶಾಸ್ತ್ರ ಉಪನ್ಯಾಸಕ ಡಾ.ಡಿ. ಚಂದ್ರಶೇಖರ್ ಅವರು, ಮಾನಸಿಕ ಒತ್ತಡಗಳಿಂದ ಹೃದಯಾಘಾತಗಳು ಹೆಚ್ಚುತ್ತಿವೆ. ಇದನ್ನು ತಡೆಯಲು ಮನಸ್ಸನ್ನು ಹತೋಟಿಯಲ್ಲಿಡಬೇಕು. ಗಾಬರಿಯಾಗುವುದು ಒಳ್ಳೆಯ ಬೆಳವಣಿಗೆಯಲ್ಲ. ಒತ್ತಡವನ್ನು ನಿವಾರಣೆ ಮಾಡಿಕೊಳ್ಳಲು ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ಊಟ, ನಿದ್ದೆ, ಸಹವಾಸ ಇವು ಹೆಚ್ಚು ಪರಿಣಾಮವನ್ನು ಮನಸ್ಸಿನ ಮೇಲೆ ಬೀರುತ್ತವೆ ಎಂದು ತಿಳಿಸಿದರು.ಪರಿಣಾಮಕಾರಿಯಾಗಿ ಬದುಕಬೇಕಾದರೆ ಸಮಸ್ಯೆಗಳು ಇರಬೇಕು. ಸಮಸ್ಯೆಗಳೇ ಜೀವನವಲ್ಲ, ಆ ಎಲ್ಲಾ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಎದುರಿಸಿ ಜೀವನವನ್ನು ಯಶಸ್ಸಿನ ಹಾದಿಯಲ್ಲಿ ನಡೆಸಬೇಕು. ತಾಳ್ಮೆ ಮತ್ತು ಜಾಗೃತಿ ಬಹಳ ಮುಖ್ಯ ಎಂದರು.ಪ್ರಸ್ತುತ ದಿನಗಳಲ್ಲಿ ಒತ್ತಡದ ಬದುಕಿನಲ್ಲಿ ಪ್ರತಿ 4 ಜನರಲ್ಲಿ ಒಬ್ಬರಿಗೆ ಸಾವಿನ ಬಗ್ಗೆ ಭೀತಿ ಉಂಟಾಗುತ್ತಿರುವುದನ್ನು ಮನೋಚಿಕಿತ್ಸೆಯಲ್ಲಿ ಗಮನಿಸುತ್ತಿದ್ದೇವೆ. ಪ್ರತಿ ದಿನವೂ ಒಬ್ಬ ಮನುಷ್ಯನಿಗೆ 40 ಸಾವಿರ ಆಲೋಚನೆಗಳು ಬರಬಹುದಾಗಿದ್ದು, ಭಾವನೆಗಳನ್ನು ಒಳ್ಳೆಯದನ್ನಾಗಿ ಸ್ವೀಕರಿಸಿ ಮನಸ್ಸನ್ನು ಹಗುರ ಮಾಡಿಕೊಳ್ಳುವುದು ಆರೋಗ್ಯಕರ ಲಕ್ಷಣ ಎಂದು ಅವರು ಹೇಳಿದರು.ಇದೇ ವೇಳೆ ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಜಿ.ಪಿ. ಮಹದೇವಪ್ರಸಾದ್, ಎನ್. ಮೌಲ್ಯ, ವಿ.ಜಿ. ಕಿರಣ್ ಕುಮಾರ್, ನಿತ್ಯಾಂಜಲಿ, ಎಚ್.ವಿ. ಲಿಖಿತ, ಮನ್ವಿತಾ ಸನ್ಮಾನಿಸಲಾಯಿತು.ರಂಗಕರ್ಮಿ ಎನ್. ಹರೀಶ್, ಬಳಗದ ಅಧ್ಯಕ್ಷ ಪಿ.ಎಸ್. ರಾಜಶೇಖರಮೂರ್ತಿ ಇದ್ದರು. ಎನ್. ಧನಂಜಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ರಾಜೇಂದ್ರಪ್ರಸಾದ್ ಸ್ವಾಗತಿಸಿದರು. ಹುನಗನಹಳ್ಳಿ ಸುರೇಶ್ ನಿರೂಪಿಸಿದರು.----ಕೋಟ್...ಜಗತ್ತು ಇಂದು ಸಂಶೋಧನೆ ಮಾಡುತ್ತಿರುವುದು ಭಾವನೆಗಳ ಮೇಲೆ. ಸೌಂದರ್ಯವನ್ನು ಸವಿಯುತ್ತಿಲ್ಲ. ಸೆರೆ ಹಿಡಿಯುವ ಪ್ರಯತ್ನ ಮಾಡುತ್ತಿದ್ದೇವೆ. ಇದರಿಂದ ಹೆಚ್ಚು ಅನಾಹುತಗಳು ಆಗುತ್ತಿವೆ. ಅತೀ ಮುಖ್ಯವಾಗಿ ಇಂದಿನ ಯುವಕರು ರೋಲ್ ಮಾಡಲ್ ಗಳಾಗಿ ರೌಡಿಗಳನ್ನು ತೆಗೆದುಕೊಳ್ಳುತ್ತಿರುವುದು, ಕ್ರೇಜ್ ಗಾಗಿ ದುರ್ನಡತೆಯ ರೀಲ್ಸ್ ಗಳನ್ನು ಮಾಡುತ್ತಿರುವುದು ಅಪಾಯಕಾರಿ ಸಂಗತಿ.- ಡಾ.ಡಿ. ಚಂದ್ರಶೇಖರ್, ಮನಶಾಸ್ತ್ರ ಉಪನ್ಯಾಸಕ, ಕೆಪಿಎ